ನಾಲ್ವರ ಕಗ್ಗೊಲೆ: ಹಂತಕನ ಬಗ್ಗೆ ಸಾಕ್ಷಿಗಳ ವಿಚಾರಣೆ!
– ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ
– ಏನಿದು ಕೇಸ್… ವಿಚಾರಣೆ ಹೇಗೆ..?
NAMMUR EXPRESS NEWS
ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಏ.13ರಿಂದ ಸಾಕ್ಷಿಗಳ ವಿಚಾರಣೆ ಆರಂಭಗೊಳ್ಳಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಏ.10ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ, ವಿಚಾರಣೆಗೆ ಒಳಪಡುವ ಸಾಕ್ಷಿಗಳ ಹೆಸರನ್ನು ನಮೂದಿಸುವ ಮೆಮೊವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಮಧ್ಯೆ ಆರೋಪಿ ಪರ ವಕೀಲ ರಾಜೇಶ್ ಕೆ.ಎಸ್., ಈ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಆದುದರಿಂದ ಸಾಕ್ಷಿಗಳ ವಿಚಾರಣೆ ಆರಂಭಿಸಬಾರದು ಎಂದು ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶ ದಿನೇಶ್ ಹೆಗ್ಡೆ, ಈ ಸಂಬಂಧ ಹೈಕೋರ್ಟ್ನಲ್ಲಿ ಯಾವುದೇ ತಡೆಯಾಜ್ಞೆ ಆದೇಶ ಬಂದಿಲ್ಲ. ಹಾಗಾಗಿ ವಿಚಾರಣೆ ಮುಂದುವರಿಸಲಾಗುವುದೆಂದು ಅಭಿಪ್ರಾಯಪಟ್ಟರು. ಅದರಂತೆ ನ್ಯಾಯಾಧೀಶರು ಜೂ.13ರಂದು ಪ್ರಕರಣದ ದೂರುದಾರರು, ಜೂ.14 ಮತ್ತು 15ರಂದು ತಲಾ ಇಬ್ಬರು ಸೇರಿದಂತೆ ಒಟ್ಟು ಐದು ಸಾಕ್ಷಿಗಳ ವಿಚಾರಣೆ ದಿನಾಂಕ ನಿಗದಿ ಪಡಿಸಿ ಆದೇಶ ನೀಡಿದ್ದಾರೆ