ಮೋದಿ ರೋಡ್ ಶೋ: ಜೇನುಗೂಡು ಇರಂಗಿಲ್ಲ!
– ಮೋದಿ ಮಂಗಳೂರು ರೋಡ್ ಶೋ: ಹೈ ಅಲರ್ಟ್!
– ಜೇನುಗೂಡು ತೆರವುಗೊಳಿಸಲು ಪೊಲೀಸ್ ಆಯುಕ್ತರಿಂದ ಪತ್ರ
NAMMUR EXPRESS NEWS
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಮಂಗಳೂರಿಗೆ ಆಗಮಿಸುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಯಲಿದೆ. ಆದರೆ ಪ್ರಧಾನಿ ಮೋದಿ ಅವರ ಆಗಮನದ ಹಿನ್ನಲೆಯಲ್ಲಿ ಇದೀಗ ಭದ್ರತೆ ದೃಷ್ಟಿಯಿಂದ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದ್ದು, ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಕ್ಕೆ ಪೊಲೀಸರು ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಅಲ್ಲದೆ, ಮೋದಿ ಅವರು ರೋಡ್ಶೋ ನಡೆಸಲಿರುವ ರಸ್ತೆಗಳಲ್ಲಿರುವ ಬೃಹತ್ ಕಟ್ಟಡ, ಅಂಗಡಿ-ಮುಂಗಟ್ಟುಗಳವರಿಗೂ ಕೆಲವೊಂದು ಷರತ್ತುಗಳನ್ನು ವಿಧಿಸಲಾಗುತ್ತದೆ. ಈ ನಡುವೆ ಮಂಗಳೂರಿಗೆ ಮೋದಿ ಆಗಮನದ ಮೊದಲು ಹಾಗೂ ನಂತರದ ಕೆಲವು ದಿನ ಬುಕ್ ಆಗುವ ರೂಂಗಳ ವಿವರ ಸೇರಿದಂತೆ ಭದ್ರತೆ ದೃಷ್ಟಿಯಿಂದ ಬಹಳ ಮಹತ್ವಪೂರ್ಣ ಮಾಹಿತಿಯನ್ನು ಕೂಡ ಮೋದಿಯವರ ಭದ್ರತೆಗೆ ನಿಯೋಜನೆಗೊಂಡಿರುವ ಭದ್ರತಾ ತಂಡಗಳ ಜತೆ ಮಂಗಳೂರು ನಗರ ಪೊಲೀಸರು ಹಂಚಿಕೊಳ್ಳಬೇಕಾಗುತ್ತದೆ.
ಆದರೆ ಮೋದಿ ರೋಡ್ಶೋ ವಿಚಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ವಾರಸ್ಯಕರ ಸಂಗತಿಯೆಂದರೆ, ಮೋದಿ ರೋಡ್ಶೋ ಮಾಡುವ ಮಾರ್ಗದಲ್ಲಿರುವ ಎಲ್ಲ ಜೇಣುನೊಣಗಳ ಗೂಡುಗಳನ್ನು ತೆರವುಗೊಳಿಸುವಂತೆ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಪತ್ರ ಬರೆದಿದ್ದಾರೆ ನಗರದ ನಾರಾಯಣಗುರು ವೃತ್ತದಿಂದ ನವಭಾರತ್ ಸರ್ಕಲ್ವರೆಗಿನ ರೋಡ್ಶೋ ನಡೆಯುವ ಸ್ಥಳ, ವಾಹನ ನಿಲುಗಡೆ ಸ್ಥಳ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೆಲಿಪ್ಯಾಡ್, ಸೇಫ್ ಹೌಸ್ ಮತ್ತು ಸೇಫ್ ಆಸ್ಪತ್ರೆಗಳಾದ ಎಜೆ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ, ಕೆಎಂಸಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ, ಸರ್ಕ್ಯೂಟ್ ಹೌಸ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಣ್ಯರು ಸಂಚರಿಸುವ ಕಾರ್ಯಕ್ರಮದ ಸ್ಥಳದವರೆಗಿನ ಎಲ್ಲ ಮಾರ್ಗಗಳಲ್ಲಿ ಜೇನುಗೂಡುಗಳನ್ನು ತೆರವುಗೊಳಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ.
ಈ ಪತ್ರದ ಬಗ್ಗೆ ಪರಿಸರವಾದಿಗಳು ಸೇರಿದಂತೆ ಕೆಲವರು ಈಗಾಗಲೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅವರು ನಾರಾಯಣಗುರು ವೃತ್ತದಿಂದ ನವಭಾರತ್ ಸರ್ಕಲ್ವರೆಗೆ ಮಾತ್ರ ರೋಡ್ಶೋ ಮಾಡುವುದಕ್ಕೆ ಎಸ್ಪಿಜಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ