ಕಾಡು ಕೋಣ ಮಂಗ ಓಡಿಸಲು ಪೊಲೀಸರೇ ಬರ್ಬೇಕು!
– ಕೋವಿಗಳನ್ನು ಠಾಣೆಗಳಲ್ಲಿ ಠೇವಣಿ ಇಟ್ಟ ಹಿನ್ನಲೆ 112ಗೆ ಕರೆ
– ಫಚೀತಿಗೆ ಸಿಲುಕಿದ ಕರಾವಳಿ ಪೊಲೀಸರು
– ದಕ್ಷಿಣ ಕನ್ನಡದಲ್ಲಿ ಗಮನಸೆಳೆದಿರುವ ಕೋವಿ ಅಭಿಯಾನ
NAMMUR EXPRESS NEWS
ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಕೃಷಿ ಉದ್ದೇಶಗಳ ಬಳಕೆ ನೀಡಲಾಗಿದ್ದ ಕೋವಿಗಳನ್ನು ರೈತರು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಬೇಕಾಗಿದೆ. ಆದರೆ, ದಕ್ಷಿಣ ಕನ್ನಡದಲ್ಲಿ ಈಗ ಕೋವಿಗಳನ್ನು ಠೇವಣಿ ಇಟ್ಟಿರುವ ಕಾರಣ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವುದಕ್ಕೆ ರೈತರು ಕೋರ್ಟ್ ಮೊರೆ ಹೋಗುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ. ಆದರೆ, ಕೋವಿಗಳಿಗೆ ವಿನಾಯಿತಿ ನೀಡುವಂತೆ ಮಾಡಿರುವ ಮನವಿಗಳಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಕಾಡುಪ್ರಾಣಿಗಳು ತೋಟಕ್ಕೆ ಬಂದ ತಕ್ಷಣ ಪೊಲೀಸರ 112 ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ. ಈ ಸುದ್ದಿ ಈಗ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಕಾಡುಪ್ರಾಣಿಗಳಿಂದ ಬೆಳೆ, ಸಂರಕ್ಷಣೆಗಾಗಿ ನೀಡಲಾಗಿರುವ ಕೋವಿಗಳನ್ನು ಠಾಣೆಗಳಲ್ಲಿ ಠೇವಣಿ ಇಟ್ಟಿರುವ ಕಾರಣ ಈಗ ಪೊಲೀಸರೇ ತಮಗೆ ರಕ್ಷಣೆ ಒದಗಿಸಬೇಕೆಂದು ರೈತರ ವಾದವಾಗಿದೆ. ಅದರಂತೆ ಪುತ್ತೂರು ಭಾಗದ ರೈತರು ಈಗಾಗಲೇ ಅಭಿಯಾನವನ್ನು ಆರಂಭಿಸಿದ್ದು, ತಮ್ಮ ತೋಟಗಳಿಗೆ ಕೋವಿಗಳ ಅನಿವಾರ್ಯತೆ ಕಂಡುಬಂದಾಗ 112 ಸಹಾಯವಾಣಿಗೆ ಕರೆಗಳನ್ನು ಮಾಡಿ ಪೊಲೀಸರ ನೆರವು ಕೇಳುತ್ತಿದ್ದಾರೆ.
ಮಂಗ ಬಂದಿದಕ್ಕೆ ಪೊಲೀಸರಿಗೆ ಕಾಲ್
ವಿಟ್ಲದ ರೈತರೊಬ್ಬರು ತಮ್ಮ ತೋಟಕ್ಕೆ ಮಂಗ ಬಂದಾಗ 112ಗೆ ಕರೆ ಮಾಡಿ ನಮ್ಮ ತೋಟಕ್ಕೆ ಮಂಗ ಬಂದಿದ್ದು ತಾವು ಕೂಡಲೇ ಬರಬೇಕೆಂದು ಹೇಳಿದ್ದು, ಅದರಂತೆ ಪೊಲೀಸರು ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮರುದಿನ ಕೋವಿಯನ್ನು ಕೂಡ ವಾಪಾಸ್ ತಂದು ಕೊಟ್ಟಿದ್ದಾರೆ. ಆ ಕುರಿತ ರೈತ ಮಾತನಾಡಿರುವ ಆಡಿಯೋ ಈಗ ವೈರಲ್ ಕೂಡ ಆಗಿದೆ.
ಚುನಾವಣೆಯೂ ಬಿಡಂಗಿಲ್ಲ… ಜನರನ್ನು ಬಿಡಂಗಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ರೈತರು ಕೃಷಿ ಉದ್ದೇಶಗಳಿಗೆ ಕೋವಿಯನ್ನು ಕಾನೂನು ರೀತಿಯಲ್ಲಿ ಪಡೆದುಕೊಂಡಿದ್ದಾರೆ. ಆದರೆ, ಚುನಾವಣೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಅವುಗಳನ್ನು ಎಲ್ಲ ರೈತರು ಕಡ್ಡಾಯವಾಗಿ ಠಾಣೆಗಳಲ್ಲಿ ಠೇವಣಿ ಇಡಬೇಕು. ಇದರಿಂದ ಚುನಾವಣೆ ಮುಗಿಯುವವರೆಗೆ ಏನೇ ಕಾಡುಪ್ರಾಣಿಗಳ ಉಪಟಳ ಉಂಟಾದರೂ ಕೋವಿಗಳು ಇಲ್ಲದೆ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಈ ಬಾರಿ ಠಾಣೆಗಳಿಗೆ ಕೋವಿಗಳನ್ನು ಒಪ್ಪಿಸಿದ ಬಳಿಕ 112ಗೆ ಕರೆ ಮಾಡುವ ಅಭಿಯಾನ ಆರಂಭಿಸಿದ್ದಾರೆ. ಕರ್ನಾಟಕ ಹಸಿರು ಸೇನೆಯ ದಕ್ಷಿಣ ಕನ್ನಡ ಘಟಕವು ಈ ಅಭಿಯಾನದ ನೇತೃತ್ವ ವಹಿಸಿದೆ. ಆದರೆ, ಚುನಾವಣಾ ಕರ್ತವ್ಯದ ಒತ್ತಡದಲ್ಲಿರುವ ಪೊಲೀಸರಿಗೆ ಈ ಕೋವಿ ಅಭಿಯಾನವು ಹೊಸ ಸಮಸ್ಯೆ-ಸವಾಲನ್ನು ಸೃಷ್ಟಿಸಿದೆ.