- 164 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಸಂಪುಟ ಒಪ್ಪಿಗೆ
ಶಿವಮೊಗ್ಗ: ಸಿಎಂ ತವರು ಶಿವಮೊಗ್ಗ ವಿಮಾನ ನಿಲ್ದಾಣದ ಯೋಜನೆ ಹೆಚ್ಚುವರಿ ಹಣ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನಾ ವೆಚ್ಚ 384 ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಯೋಜನೆ ವೇಗ ಹೆಚ್ಚಿದೆ.
ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಲು ಅನುಮತಿ ನೀಡಲಾಗಿದೆ. ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿ, ಕರ್ನಾಟಕ ಸರ್ಕಾರ ಈ ಹಿಂದೆ 220 ಕೋಟಿ ರೂ.ಗಳ ಅನುದಾನದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಆರಂಭಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ 164 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ನೀಡಲು ಅನುಮೋದನೆ ನೀಡಲಾಯಿತು.
ಶಿವಮೊಗ್ಗ ವಿಮಾನ ನಿಲ್ದಾಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸು. ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗಳು ನಡೆಯುತ್ತಿವೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ಕೈಗೊಳ್ಳಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಇದೆ.
662.38 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. 1900 ಮೀಟರ್ ಉದ್ದದ ರನ್ ವೇ ನಿರ್ಮಾಣವಾಗಲಿದೆ. ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಒಪ್ಪಿಗೆ ನೀಡಿದ್ದರು. ಆದರೆ, ವಿವಿಧ ಕಾರಣದಿಂದಾಗಿ ಯೋಜನೆ ವಿಳಂಬವಾಗಿತ್ತು. ರಾಜ್ಯದ ಪ್ರಮುಖ ಕನ್ಸ್ಟ್ರಕ್ಷನ್ಸ್ ಕಂಪನಿ, ತೀರ್ಥಹಳ್ಳಿ ಮೂಲದ ನ್ಯಾಶಿನಲ್ ಕನ್ಸ್ಟ್ರಕ್ಷನ್ಸ್ ಈಗ ಕಾಮಗಾರಿ ಮಾಡುತ್ತಿದೆ.