ಮನೆಯಲ್ಲೇ ಮತ ಹಾಕಿದ ಬಳಿಕ ಬಂತು ಮೃತ್ಯು!
– ಎದೆನೋವು ಇದ್ದರೂ ವೋಟಿಂಗ್ಗೆ ಕಾದ ಮಹಿಳೆ
– ಬ್ರಹ್ಮಾವರ ತಾಲೂಕು ಸಾಸ್ತಾನ ಬಳಿ ಮಹಿಳೆ
NAMMUR EXPRESS NEWS
ಉಡುಪಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವಯೋವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಸಾವಿನ ಮುನ್ನದ ಕ್ಷಣಗಳಲ್ಲೂ ಹಕ್ಕು ಚಲಾಯಿಸಿದ ನಿರ್ವಹಿಸಿದ ಹಿರಿಯ ನಾಗರಿಕರ ಈ ಕರ್ತವ್ಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ. ಪಿ.ಯಶೋದಾ ನಾರಾಯಣ ಉಪಾಧ್ಯ (83) ಮೃತಪಟ್ಟ ಹಿರಿಯ ಜೀವ. ಇವರು ಬ್ರಹ್ಮಾವರ ತಾಲೂಕು ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ನಿವಾಸಿಯಾಗಿದ್ದು, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿಯಾಗಿದ್ದಾರೆ. ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿರುವ ʼಮನೆಯಿಂದ ಮತʼ ಕಾರ್ಯಕ್ರಮದಡಿ ಮನೆಯಿಂದಲೇ ಮತದಾನ ಮಾಡಿದ್ದರು.
ಮತದಾನದ ದಿನ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿಯೇ ಆಸ್ಪತ್ರೆಗೆ ತೆರಳಲು ಅವರು ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ತೆರಳಿ ಅಲ್ಲಿ ದಾಖಲಾಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಯಶೋದಮ್ಮ ಮೃತಪಟ್ಟಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.