ಕರಾವಳಿ ಟಾಪ್ ನ್ಯೂಸ್
ಮಲ್ಪೆ ಬೀಚಲ್ಲಿ ಕೊಚ್ಚಿ ಹೋದ ಮೂವರು ಪ್ರವಾಸಿಗರು!
– ಇಬ್ಬರ ರಕ್ಷಣೆ: ಓರ್ವ ಮೃತ್ಯು, ಪದೇ ಪದೇ ಮರುಕಳಿಸಿದ ಘಟನೆ
– ನಾಯಿ ಮುದ್ದು ಮಾಡುತ್ತಿದ್ದಾಗ ತಲೆಯನ್ನೇ ಕಚ್ಚಿತು!
– ಬೆಳ್ತಂಗಡಿಯ ಮುಂಡಾಜೆ ಬಳಿ ನಡೆದ ಘಟನೆ
NAMMUR EXPRESS NEWS
ಉಡುಪಿ: ಬೇಸಿಗೆ ರಜೆಯಲ್ಲಿ ಕರಾವಳಿಯ ಬೀಚ್ ಗಳಿಗೆ ಭೇಟಿ ಕೊಡುವವರ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಜೀವರಕ್ಷಕರ ಎಚ್ಚರಿಕೆ ನಡುವೆಯೂ ಪ್ರವಾಸಿಗರು ನೀರಾಟದ ಮೋಜಿನಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿರುವುದು ಹೊಸದಲ್ಲ. ಮಲ್ಪೆ ಬೀಚ್ ನಲ್ಲಿ ದುರಂತವೊಂದು ಸಂಭವಿಸಿದ್ದು ಸಮುದ್ರದ ಅಲೆಗಳ ಸೆಳೆತಕ್ಕೆ ಕೊಚ್ಚಿಹೋದ ಮೂರು ಜನರ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರನ್ನು ರಕ್ಷಣೆ ಮಾಡಿದ ಘಟನೆ ಏ.18 ರ ಗುರುವಾರ ನಡೆದಿದೆ. ಮೃತರನ್ನು ಹಾಸನ ಜಿಲ್ಲೆಯ ಬೇಲೂರು ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದೆ. ಸಂತೋಷ್ ಹಾಗೂ ಮತ್ತೊಬ್ಬರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇಲೂರಿನಿಂದ 20 ಮಂದಿಯ ತಂಡ ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದಾಗ ಮೂವರು ಅಲೆಗಳ ಸೆಳೆತಕ್ಕೆ ಕೊಚ್ಚಿಹೋಗಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಮೂವರನ್ನು ರಕ್ಷಿಸಿ, ದಡಕ್ಕೆ ತಂದಿದ್ದಾರೆ. ಮೂವರ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇಬ್ಬರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಲಕಿ ಮೇಲೆ ಸಾಕು ನಾಯಿ ದಾಳಿ!
– ತಲೆ ಭಾಗ ಸೀಳಿ ಗಂಭೀರ ಗಾಯಗೊಂಡ ಮಹಿಳೆ
– ಬೆಳ್ತಂಗಡಿಯ ಮುಂಡಾಜೆ ಬಳಿ ನಡೆದ ಘಟನೆ
ಬೆಳ್ತಂಗಡಿ: ಸಾಕು ನಾಯಿಯನ್ನು ಮುದ್ದಾಡುತ್ತಿದ್ದಾಗ ಏಕಾಏಕಿ ದಾಳಿ ಮಾಡಿ ಮಾಲಕಿಯ ತಲೆ ಭಾಗವನ್ನು ಸೀಳಿ ಹಾಕಿ ಕೈಗೆ ಗಂಭೀರ ಗಾಯ ಮಾಡಿದ ಘಟನೆ ಬೆಳ್ತಂಗಡಿಯ ಮುಂಡಾಜೆ ಬಳಿನಡೆದಿದೆ. ಎ.18 ರಂದು ಈ ಘಟನೆ ನಡೆದಿದ್ದು, ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ನಿಡಿಗಲ್ ಓಂಕಾರ್ ನಿವಾಸಿ ದಿ. ರಾಮ್ ದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ (49) ಎಂಬವರು ತನ್ನ ಮನೆಯ ಸಾಕು ನಾಯಿಯ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆಯಾಗಿದ್ದಾರೆ. ಪೂರ್ಣಿಮಾ ತನ್ನ ಮನೆಯಲ್ಲಿ ಸಾಕಿದ್ದ ಸಾಕು ನಾಯಿ ಜೊತೆ ಎಂದಿನಂತೆ ಮುದ್ದಾಡುತ್ತಿದ್ದರು. ಈ ವೇಳೆ ಅವರು ಅಚಾನಕ್ ಆಗಿ ಕಾಲು ಜಾರಿ ನೆಲಕ್ಕೆ ಬಿದ್ದಿದ್ದು, ಈ ವೇಳೆ ಸಾಕು ನಾಯಿ ಮಹಿಳೆಯ ಮೇಲೆ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿದ್ದು. ಕೈಗೆ ಕಚ್ಚಿ ಗಂಭೀರ ಗಾಯಮಾಡಿದೆ. ಮನೆಯವರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.