ಹೈವೆಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
– ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು, ಗಾಯಗೊಂಡು ಆಸ್ಪತ್ರೆಗೆ ದಾಖಲು
– ಟ್ಯಾಂಕರ್ ಹರಿದು ಪಾದಾಚಾರಿ ಯುವಕ ಸಾವು
– ಉಳ್ಳಾಲ: ಗ್ಯಾಸ್ ಸಿಲಿಂಡರ್ ಸೋರಿಕೆ- ಸ್ವೀಟ್ ಕಾರ್ನರ್ ಸ್ಟಾಲ್ ಸುಟ್ಟು ಕರಕಲು
NAMMUR EXPRESS NEWS
ಮಂಗಳೂರು: ಮಂಗಳೂರು ಹೊರವಲಯದ ಎಡಪದವು ರಾಮಮಂದಿರದ ಬಳಿ ಮಣ್ಣಿನ ಲಾರಿ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತವಾಗಿ ರಸ್ತೆಯ ಬದಿಯ ಅಂಗಡಿಗಳಿಗೆ ಗುದ್ದಿ ಪಲ್ಟಿಯಾಗಿದೆ. ಮಂಗಳೂರು- ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಇಂದು ಸಂಜೆ ಈ ಅವಘಡ ನಡೆದಿದ್ದು, ಮಂಗಳೂರು ಕಡೆಯಿಂದ ಮೂಡಬಿದ್ರೆಗೆ ತೆರಳುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿ ಈ ದುರಂತ ಸಂಭವಿಸಿದೆ. ಬ್ರೇಕ್ ಆದ ಲಾರಿ ನಿಲ್ಲಿಸಲು ಆಗದೆ ಚಾಲಕ, ಸುಮಾರು 500 ಮೀಟರ್ ದೂರದವರೆಗೂ ಲಾರಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಲಾರಿ ನಿಲ್ಲಿಸುವ ಯತ್ನದಲ್ಲಿ ಸಂದರ್ಭ ಸರಣಿ ಅಪಘಾತ ನಡೆದಿದ್ದು, ಮೊದಲಿಗೆ ಎದುರಿಗೆ ಸಿಕ್ಕ ಸ್ವಿಫ್ಟ್ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಸಂಪೂರ್ಣ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದವರಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬಳಿಕ ಮುಂದೆ ಚಲಿಸಿದ ಲಾರಿ, ಎಣ್ಣೆ ಪೂರೈಕೆ ಮಾಡುತ್ತಿದ್ದ ಪಿಕ್ಅಫ್ ವಾಹನಕ್ಕೆ ಡಿಕ್ಕಿಯಾಗಿದ್ದು, ರಸ್ತೆಗೆ ಪಿಕ್ ಅಪ್ ಉರುಳಿ ಬಿದ್ದ ಕಾರಣ ಎಣ್ಣೆ ಪ್ಯಾಕೆಟ್ಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿವೆ. ನಂತರ ಎದುರಿನಿಂದ ಬಂದ ಟ್ಯಾಂಕರ್ವೊಂದು, ಲಾರಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದರೆ, ಬಳಿಕ ಎಡಪದವು ಪೇಟೆಯ ಬಳಿ ಖಾಸಗಿ ಬಸ್ಗೆ ಡಿಕ್ಕಿ ಹೊಡೆದು ಲಾರಿ ನಿಂತಿದೆ.
ಮೂಡಬಿದ್ರೆಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸರಣಿ ಅಪಘಾತದ ನಡುವೆ ಅಗರಿ ಎಂಟರ್ಪ್ರೈಸಸ್ ಎಂಬ ಅಂಗಡಿಯ ಕಟ್ಟಡಕ್ಕೂ ಹಾನಿಯಾಗಿದೆ. ರಸ್ತೆಬದಿಯಲ್ಲಿ ನಿಲ್ಲಿಸಿದ್ದ ನಾಲ್ಕು ಸ್ಕೂಟರ್ ಗಳು ಜಖಂಗೊಂಡಿದೆ. ಸರಣಿ ಅಪಘಾತದಿಂದ ಎಡಪದವಿನ ಜನ ದಿಗ್ಬ್ರಮೆಗೊಂಡಿದ್ದಾರೆ.
ಟ್ಯಾಂಕರ್ ಹರಿದು ಪಾದಾಚಾರಿ ಯುವಕ ಸಾವು
ಕೂಳೂರು: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದ ಪಾದಚಾರಿಯೊಬ್ಬನ ಮೇಲೆ ಟ್ಯಾಂಕರ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರ ಹೊರವಲಯದ ಕೂಳೂರು ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ ಮೂಲದ ಕಾರ್ಮಿಕ ಗುಡ್ಡು ಯಾದವ್( 29 ) ಎಂದು ಗುರುತಿಸಲಾಗಿದೆ. ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕೊಂದು ಢಿಕ್ಕಿಯಾಗಿ ಬಿದ್ದಿದ್ದ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಟ್ಯಾಂಕರ್ ಅವರ ಮೇಲೆ ಹರಿದು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಉಳ್ಳಾಲ: ಗ್ಯಾಸ್ ಸಿಲಿಂಡರ್ ಸೋರಿಕೆ- ಸ್ವೀಟ್ ಕಾರ್ನರ್ ಸ್ಟಾಲ್ ಸುಟ್ಟು ಕರಕಲು
ಉಳ್ಳಾಲ: ದೇರಳಕಟ್ಟೆ ಸಮೀಪದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸ್ವೀಟ್ ಕಾರ್ನರ್ ಸ್ಟಾಲ್ ಒಂದರಲ್ಲಿ ಗ್ಯಾಸ್ ಸಿಲಿಂಡರ್ ನಲ್ಲಿ ಸೋರಿಕೆ ಉಂಟಾಗಿ ಬೆಂಕಿ ಅವಘಡ ಸಂಭವಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಬಶೀರ್ ಎಂಬವರು ವ್ಯವಹಾರದಲ್ಲಿ ತೊಡಗಿದ್ದ ಸಂದರ್ಭ ಗ್ಯಾಸ್ ಸೋರಿಕೆ ಉಂಟಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅಲ್ಲಿದ್ದ ಗ್ರಾಹಕರು ಹಾಗೂ ಸ್ಟಾಲ್ ಮಾಲೀಕರು ಓಡಿ ಪಾರಾಗಿದ್ದಾರೆ. ಇನ್ನು ಬೆಂಕಿ ತೀವ್ರಗೊಂಡ ಪರಿಣಾಮ ಸಾರ್ವಜನಿಕರು ಹೊಯ್ಗೆ, ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೂ ಸಿಲಿಂಡರ್ ಪೂರ್ತಿ ಸೋರಿಕೆಯುಂಟಾಗಿ ಸ್ಟಾಲ್ ಭಾಗಶಃ ಸುಟ್ಟುಹೋಗಿದೆ. ಘಟನೆಯಿಂದ ಸಾರ್ವಜನಿಕರು ಹಾಗೂ ಬಶೀರ್ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಜೊತೆಗೆ ಅವಘಡದಿಂದ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.