ನಾನು ಗೆಲ್ಲುತ್ತೇನೆ ಎಂದ ಈಶರಪ್ಪ!
– ರೆಬೆಲ್ ಈಶ್ವರಪ್ಪ ಈಗ ಪವರ್ ಫುಲ್
– ನಾಮಪತ್ರ ಹಿಂಪಡೆಯಲ್ಲ!
– ಬಿಜೆಪಿ ನಾಯಕರ ವಿರುದ್ಧ ಮಾತಿನ ಬಾಣ
– ಎಲ್ಲೆಡೆ ಈಶ್ವರಪ್ಪ ಹಿಂದೂ ಅಜೆಂಡಾಕ್ಕೆ ಜೈ ಹೋ
– ತೀರ್ಥಹಳ್ಳಿಯಲ್ಲಿ ಗಮನ ಸೆಳೆದ ಕಾರ್ಯಕರ್ತರ ಸಭೆ
NAMMUR EXPRESS NEWS
ತೀರ್ಥಹಳ್ಳಿ: ಬಿಜೆಪಿ ಬಂಡಾಯ ಅಭ್ಯರ್ಥಿ ರಾಜ್ಯದ ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಆರಂಭಿಸಿದ್ದಾರೆ. ಕೇಸರಿ ಹಾಗೂ ಮೋದಿ ಅವರ ಭಾವಚಿತ್ರದೊಂದಿಗೆ ನೂರಾರು ಕಾರ್ಯಕರ್ತರು ತೀರ್ಥಹಳ್ಳಿಯ ಸಭೆಯಲ್ಲಿ ಭಾಗಿಯಾಗಿ ಈಶ್ವರಪ್ಪ ಅವರಿಗೆ ಜೈಕಾರ ಹಾಕಿದರು.
ಈಶ್ವರಪ್ಪ ಭಾಷಣ ಕೇಳಿ ಅಭಿಮಾನಿಗಳು ಖುಷ್
ತೀರ್ಥಹಳ್ಳಿಯಲ್ಲಿ 76ರ ಇಳಿವಯಸ್ಸಿನಲ್ಲೂ ಸ್ವಲ್ಪವೂ ಕುಗ್ಗದ ಉತ್ಸಾಹದಿಂದ ಲಯನ್ಸ್ ಭವನದಲ್ಲಿ ತುಂಬಿ ತುಳುಕಿದ್ದ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಎಂದಿನ ಮೊನಚಾದ ಹಾಗೂ ದಿಟ್ಟ ಮಾತುಗಳಿಂದ ಕಾರ್ಯಕರ್ತರನ್ನು ಹುರಿದುಂಬಿಸಿದ ಅವರು “ನಾನು ನಿಜವಾದ ಬಿಜೆಪಿ ಕಾರ್ಯಕರ್ತರ ಮತ್ತು ಹಿಂದುತ್ವವಾದಿ. ರಾಜ್ಯ ಬಿಜೆಪಿ ಈಗ ಯಡಿಯೂರಪ್ಪ ಮತ್ತವರ ಪುತ್ರರ ಪಕ್ಷವಾಗಿದೆ. ಅವರ ಸ್ವಾರ್ಥದಿಂದ ಹಿಂದುತ್ವ ಮತ್ತು ಪಕ್ಷವನ್ನು ಉಳಿಸಬೇಕಾಗಿದೆ. ನನಗೆ ಕೂಲಿ ಮಾಡುವವರು, ಆಟೋ ಚಾಲಕರೇ ಸ್ಟಾರ್ ಪ್ರಚಾರಕರು ಎಂದರು. ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 40ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ. ಹಿಂದುತ್ವಕ್ಕೆ ಜಯವಾಗಲಿ ಎಂಬ ಕಾರ್ಯಕರ್ತರ ಸಾಲು ಬೂತ್ ಮಟ್ಟದಲ್ಲಿದೆ. ಎಂದರು.
ಆರಗ ಕುರುಡ: ಮತ್ತೆ ಆರಗ ಚುನಾವಣೆ ನಿಲ್ತಾನೆ!
ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ನನ್ನ ಅಭಿಮಾನಿಗಳ ಬಗ್ಗೆ ನೋಡಲಾಗದ ಆರಗ ಜ್ಞಾನೇಂದ್ರ ಕುರುಡ. ಆತನಿಗೆ ಕಿವುಡು. ಜ್ಞಾನೇಂದ್ರ ಚೀಟಿ ಹಂಚಕ್ಕೆ ಜನ ಇಲ್ಲ ಅಂದಿದ್ದ. ಕ್ಷೇತ್ರ ಬಿಟ್ಟು ಅವನಿಗೆ ಬೇರೇನು ಗೊತ್ತಿಲ್ಲ. ಗೃಹಮಂತ್ರಿ ಆದಾಗಲೂ ರಾಜ್ಯ ಸುತ್ತುವ ಬದಲು ಕೂಪ ಮಂಡೂಕದ ರೀತಿಯಲ್ಲಿ ತೀರ್ಥಹಳ್ಳಿ ಸುತ್ತಿದ್ದ ಎಂದು ಹಿಯಾಳಿಸಿದರು. ನಮ್ಮ ಕಾರ್ಯಕರ್ತರ ಮನೆಗಳಿಗೆ ಹೋಗದ ಆರಗ ಜ್ಞಾನೇಂದ್ರ ಈಗ ಅರ್ಧ ಗಂಟೆ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆ ಭಯ ಎದುರಾಗಿದ್ದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತಲೆಕೆಟ್ಟು ಹುಚ್ಚು ಹಿಡಿದಿದೆ. ರಾಘವೇಂದ್ರಗೆ ಸೋಲಿನ ಆತಂಕ ಎದುರಾಗಿದೆ ಎಂದರು.
ರಾಜಕಾರಣಿಗಳು ಸತ್ತ ಮೇಲೆಯೇ ರಾಜಕಾರಣ ಬಿಡುವುದು. ಆರಗ ಜ್ಞಾನೇಂದ್ರ ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದು ಸುಳ್ಳು. ಸಿದ್ದರಾಮಯ್ಯ ಕೂಡ ಹಾಗೆಯೇ ಹೇಳಿದ್ದರು. ಮುಂದಿನ ಚುನಾವಣೆಯನ್ನು ನಾನೇ ನಿಂತು ಗೆಲ್ಲಿಸಿಕೊಂಡು ಬರಬೇಕಾಗುತ್ತದೆ. ಇವರು ಕಾರ್ಯಕರ್ತರಿಗೆ ಬೈದರೆ ಅವನ ಚುನಾವಣೆಯಲ್ಲಿ ಕಾಲಿಗೆ ಬೀಳುವ ಪರಿಸ್ಥಿತಿ ಉದ್ಭವವಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಹೇಶ್ ಮೇಲಿನಕೊಪ್ಪ, ಗೊರಕೋಡು ಮದನ್, ತನಿಕಲ್ ಮದನ್, ಸುವರ್ಣ ಶಂಕರ್, ಕಲ್ಪನಾ ಸಂತೋಷ್, ಸುನೀತಾ ಅಣ್ಣಪ್ಪ ಇದ್ದರು.
ನಾಮಪತ್ರ ಹಿಂಪಡೆಯುವ ಮಾತೇ ಇಲ್ಲ!
ಕೇಂದ್ರದ ರಾಜಕೀಯ, ಸಂಘ ಪರಿವಾರದವರ ಬಳಿ ಮಾತನಾಡಿಸುತ್ತಾರೆ. ಆದರೆ ನಾನು ಎಂದೂ ಒಪ್ಪಲಿಲ್ಲ. ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ. ಯಡಿಯೂರಪ್ಪ ಕುಟುಂಬದಿಂದ ಯಾವ ಯಾವ ಹೆಣ್ಣು ಮಕ್ಕಳಿಗೆ ಅನ್ಯಾಯ ಆಗಿದೆ. ಈ ಕುಟುಂಬದಿಂದ ಏನೇನು ತೊಂದರೆ ಆಗಿದೆ ಬಹಿರಂಗಪಡಿಸುವ ದಿನ ದೂರ ಇಲ್ಲ ಎಂದರು. ಹಿಂದುತ್ವ ಉಳಿಸಲು ಅನೇಕ ನಾಯಕರು ನನ್ನ ಜೊತೆ ಸಹಕಾರ ಮಾಡುತ್ತಿದ್ದಾರೆ. ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ದೊಡ್ಡ ಮಟ್ಟದ ಲಾಭಿ ನಡೆದಿದೆ. ಸಂಗೊಳ್ಳಿ ರಾಯಣ್ಣ ಕಟ್ಟಿದಾಗ ಬಿಜೆಪಿ ನಾಯಕರ ಮಾತು ಕೇಳಿ ಬಿಟ್ಟೆ, ಶಾಸಕ ಸ್ಥಾನಕ್ಕೆ ನಿಲ್ಲಬೇಡಿ ಹೇಳಿದರೂ ನಾನು ನಿಲ್ಲಲಿಲ್ಲ. ಸಾಮಾನ್ಯ ಕಾರ್ಯಕರ್ತರೇ ನಮ್ಮ ಸ್ಟಾರ್ ಪ್ರಚಾರಕರು. 27 ಬಿಜೆಪಿ ಗೆಲ್ಲುತ್ತೆ. ನಾನು ಪಕ್ಷೇತರರಾಗಿ ಗೆಲ್ಲುತ್ತೇನೆ ಎಂದರು.