ಕರಾವಳಿಯಲ್ಲಿ ನಾಯಿಗಳ ನಿಗೂಢ ಸಾವು!
– ದ.ಕ. ಜಿಲ್ಲೆಯಲ್ಲಿ ಶಂಕಿತ ಕೆನೈನ್ ಡಿಸ್ಟೆಂಪರ್ ಉಲ್ಬಣ: ಹಲವು ಶ್ವಾನಗಳು ಸಾವು
– ಏನಿದು ಹೊಸ ನಾಯಿ ಕಾಯಲೆ?
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಕೆನೈನ್ ಡಿಸ್ಟೆಂಪರ್ ರೋಗಕ್ಕೆ ಶ್ವಾನಗಳು ಸಾಯುತ್ತಿರುವ ಪ್ರಕರಣ ಉಲ್ಬಣಗೊಂಡಿರುವ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಪಶುಪಾಲನಾ ಇಲಾಖೆಯ ಆಸ್ಪತ್ರೆಗಳಲ್ಲಿ ದಾಖಲಾದ ಶಂಕಿತ ಮೆದುಳು ಜ್ವರ ಪ್ರಕರಣ ಕೆಲ ತಿಂಗಳಿಂದ ಏರಿಕೆಯಾಗುತ್ತಿದೆ.
ಯಾವ ತಾಲೂಕಲ್ಲಿ ಎಷ್ಟೆಷ್ಟು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿಯಲ್ಲಿ 433, ಫೆಬ್ರವರಿಯಲ್ಲಿ 582 ಹಾಗೂ ಮಾರ್ಚ್ನಲ್ಲಿ 604 ಪ್ರಕರಣ ಕಂಡುಬಂದಿದೆ. ಈ ಪೈಕಿ ಮಂಗಳೂರು-128, ಬಂಟ್ವಾಳ-138, ಬೆಳ್ತಂಗಡಿ-66, ಪುತ್ತೂರು-46, ಸುಳ್ಯ-146, ಮೂಡು ಬಿದಿರೆ-30, ಕಡಬ-10 ಉಳ್ಳಾಲ-17, ಮುಲ್ಕಿ 24 ಶಂಕಿತ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಗಮನಿಸುವುದಾದರೆ ಸುಳ್ಯ, ಬಂಟ್ವಾಳ, ಮಂಗಳೂರಿನಲ್ಲಿ ಅಧಿಕ ಪ್ರಕರಣಗಳು ಪತ್ತೆಯಾಗಿವೆ.
ಕಾಯಲೆ ಲಕ್ಷಣಗಳೇನು…?
ಖಾಸಗಿ ಕ್ಲಿನಿಕ್, ಮೆಡಿಕಲ್ ಹಾಗೂ ಬೀದಿ ನಾಯಿಗಳಲ್ಲಿ ಈ ರೋಗಕ್ಕೆ ಔಷಧಿ ಪಡೆದಿದ್ದು ಈ ಬಗ್ಗೆ ಇಲಾಖೆಯಲ್ಲಿ ಅಧಿಕೄತವಾದ ಮಾಹಿತಿ ದಾಖಲಾಗಿರುವುದಿಲ್ಲ. ಹೀಗಾಗಿ ಇನ್ನೂ ಅಧಿಕ ಪ್ರಕರಣಗಳು ಇರುವ ಸಾಧ್ಯತೆ ಇದೆ. ಮೆದುಳು ಜ್ವರ ಪೀಡಿತ ನಾಯಿಯಲ್ಲಿ ವಿಪರೀತ ಜ್ವರ, ಆಹಾರ ಸೇವನೆ ನಿರಾಕರಿಸುವುದು, ವಾಂತಿ ಭೇದಿ, ನರ ದೌರ್ಬಲ್ಯ, ಕಣ್ಣಿನ ಪೊರೆ, ಕ್ರಮೇಣ ನೀರು ಕೂಡಾ ಮುಟ್ಟದೆ ಇರುವುದು ಮುಂತಾದ ಲಕ್ಷಣಗಳು ಕಂಡುಬರುತ್ತದೆ. ಇದು ನಾಯಿಗಳಿಂದ ನಾಯಿಗಳಿಗೆ ಹರಡುತ್ತದೆ ವಿನಾಃ ಮನುಷ್ಯರಿಗೆ ಹರಡುವುದಿಲ್ಲ. ಇದು ರೇಬಿಸ್ ರೋಗವಲ್ಲ ಎಂಬುವುದು ಗಮನಾರ್ಹ ಸಂಗತಿಯಾಗಿದೆ.