ಶಿವಮೊಗ್ಗ ಟಾಪ್ 3 ನ್ಯೂಸ್..!
ತೀರ್ಥಹಳ್ಳಿ: ತೆರೆದ ಬಾವಿಯಲ್ಲಿ ಬಾಲಕಿ ಶವ ಪತ್ತೆ!
– ಕೋಣಂದೂರು ಬಳಿ ಬಾಲಕಿ ಸಾವು ನಿಗೂಢ
– ಕುಡಿದು ಕಿರಿಕಿರಿ: ಅಪ್ರಾಪ್ತನಿಂದ ಕುಡುಕ ತಂದೆಯ ಕೊಲೆ.!
– ಕೌಟುಂಬಿಕ ಕಲಹ: ಚಿಕ್ಕಪ್ಪನ ಮಗಳನ್ನೇ ಕೊಂದ ಯುವಕ
NAMMUR EXPRESS NEWS
ತೀರ್ಥಹಳ್ಳಿ: ಕೋಣಂದೂರು ಸಮೀಪದ ಹುಲ್ಕೊಡು ಗ್ರಾಮದ ರಾಘವೇಂದ್ರ ಎಂಬುವರ ತೋಟದಲ್ಲಿರುವ ತೆರೆದ ಬಾವಿಯಲ್ಲಿ ಸೋಮವಾರ 13 ವರ್ಷದ ಬಾಲಕಿಯ ಶವ ದೊರೆತಿದೆ. ಬಾಲಕಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅರ್ಚನಾ ಹೆಸರಿನ ಈ ಬಾಲಕಿಯ ತಾಯಿ ಮತ್ತು ಸೋದರ ಮಾವ ತೋಟದ ಕಾರ್ಮಿಕರಾಗಿದ್ದು, ಚಿತ್ರದುರ್ಗ ಜಿಲ್ಲೆಯ ಕರಿಯಮ್ಮನಹಳ್ಳಿಯವರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಘವೇಂದ್ರ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಅಪ್ರಾಪ್ತನಿಂದ ಕುಡುಕ ತಂದೆಯ ಕೊಲೆ.!
ಶಿವಮೊಗ್ಗ: ಬಾಪೂಜಿನಗರದ 8ನೇ ಕ್ರಾಸ್ನಲ್ಲಿ ಶನಿವಾರ ರಾತ್ರಿ ನಡೆದ ಕಳ್ಳ ಸೂರಿ ಅಲಿಯಾಸ್ ಸುರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದವನ ಅಪ್ರಾಪ್ತ ಪುತ್ರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಪೂಜಿನಗರದ ರಾಕೇಶ್(26), ಪ್ರವೀಣ್ (22) ಮತ್ತು 17 ವರ್ಷದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಲಾಗಿದೆ. ಕಳ್ಳ ಸೂರಿ ನಿತ್ಯವೂ ಮದ್ಯ ಸೇವಿಸಿ ಬಂದು ಪತ್ನಿ, ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ 17 ವರ್ಷದ ಪುತ್ರ, ಅದೇ ಬಡಾವಣೆಯ ರಾಕೇಶ್ ಮತ್ತು ಪ್ರವೀಣ್ ಜತೆ ಸೇರಿಕೊಂಡು ಬುದ್ದಿ ಕಲಿಸಲು ಬ್ಯಾಟ್ ಮತ್ತು ವಿಕೆಟ್ನಿಂದ ಹಲ್ಲೆ ಮಾಡಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಳ್ಳ ಸೂರಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದ ಕೋಟೆ ಠಾಣೆ ಪೊಲೀಸರು, ಕಳ್ಳ ಸೂರಿಯ ಪುತ್ರ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ರಾಕೇಶ್ ಮತ್ತು ಪ್ರವೀಣ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ, 17 ವರ್ಷದ ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಕಳ್ಳ ಸೂರಿ ಮೇಲೆ ನಗರದ ವಿವಿಧೆಡೆ 7-8 ಮನೆಗಳ್ಳತನದ ಪ್ರಕರಣಗಳಿದ್ದವು.
ಕೌಟುಂಬಿಕ ಕಲಹದಿಂದ ಕಳ್ಳ ಸೂರಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪತ್ನಿ ಮತ್ತು ಮಕ್ಕಳಿಂದ ದೂರ ಉಳಿದಿದ್ದ. ಆದರೂ ಮನೆ ಬಳಿ ಬಂದು ಗಲಾಟೆ ಮಾಡಿ, ಹಲ್ಲೆ ಮಾಡಿ ಹೋಗುತ್ತಿದ್ದ. ಮನೆಗಳ್ಳತನದ ಕೇಸ್ನಲ್ಲಿ ಜೈಲಿಗೆ ಹೋಗಿದ್ದ ಆತ 20 ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಹೊರಬಂದು ಬಾಪೂಜಿನಗರ 7ನೇ ಕ್ರಾಸಿನಲ್ಲಿದ್ದ ತನ್ನ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದ. ಆನಂತರ ಎಂಟತ್ತು ದಿನಗಳ ಹಿಂದೆ ದೊಡ್ಡಮ್ಮನ ಬಳಿಯೂ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಚಿಕ್ಕಪ್ಪನ ಮಗಳನ್ನೇ ಕೊಂದ ಯುವಕ!
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಕೊಪ್ಪದಕೆರೆಯಲ್ಲಿ ಕೌಟುಂಬಿಕ ಕಲಹದಲ್ಲಿ ಚಿಕ್ಕಪ್ಪನ ಮಗಳನ್ನೇ ಯುವಕನೊಬ್ಬ ಕೊಲೆ ಮಾಡಿದ್ದಾನೆ. ಕೊಪ್ಪದಕೆರೆಯ ನಿವಾಸಿ ಗದಿಗೇಶ್ (21) ಕೊಲೆ ಮಾಡಿದ ಆರೋಪಿ. ಈತ ತನ್ನ ಚಿಕ್ಕಪ್ಪನ ಮಗಳು ಚರಣ್ಯ(9) ಎಂಬಾಕೆಯನ್ನು ಕೊಲೆ ಮಾಡಿದ್ದಾನೆ. ಭಾನುವಾರ ಸಂಜೆ ಚರಣ್ಯಳನ್ನು ಕೊಲೆ ಮಾಡಿರುವ ಆರೋಪಿ ಗದಿಗೇಶ್ ಮೃತದೇಹವನ್ನು ಗ್ರಾಮದ ಕೆರೆ ಸಮೀಪ ತಂದು ಹಾಕಿದ್ದ. ಕೆರೆ ಬಳಿ ಬಾಲಕಿ ಮೃತದೇಹ ಪತ್ತೆಯಾಗಿದ್ದನ್ನು ಕಂಡು ಸ್ಥಳೀಯರು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಕೊಂಡಿದ್ದರು. ಈ ಪ್ರಕರಣದಲ್ಲಿ ಚರಣ್ಯ ಪಾಲಕರ ಅನುಮಾನದ ಮೇರೆಗೆ ಗದಿಗೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ‘ತಪ್ರೊಪ್ಪಿಕೊಂಡಿದ್ದಾನೆ. ಗದಿಗೇಶ್ ಮತ್ತು ಚರಣ್ಯ ಪಾಲಕರ ನಡುವಿನ ಮನಸ್ಥಾಪವೇ ಕೃತ್ಯಕ್ಕೆ ಕಾರಣಕ್ಕೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಗದಿಗೇಶ್ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.