- ಶನಿವಾರದವರೆಗೆ ಬೂದಿ ಮುಚ್ಚಿದ ಕೆಂಡ!
- ಭಾರಿ ಬಿಗಿ ಬಂದೋಬಸ್ತ್
ಶಿವಮೊಗ್ಗ: ಮಲೆನಾಡಿನ ಮಡಿಲು ಶಿವಮೊಗ್ಗ ಬೂದಿ ಮುಚ್ಚಿದ ಕೆಂಡವಾಗಿದೆ.
ಬಜರಂಗ ದಳದ ಕಾರ್ಯಕರ್ತನೊಬ್ಬನ ಮೇಲಿನ ಹಲ್ಲೆ ಪ್ರಕರಣ ಇದೀಗ ಕೋಮು ಘರ್ಷಣೆಗೆ ಕಾರಣವಾಗಿದೆ. ಶನಿವಾರದವರೆಗೆ ನಿಷೇಧಾಜ್ಞೆ ಜಾರಿಯಾಗಿದ್ದು, ಪೊಲೀಸ್ ಕಣ್ಗಾವಲಿನಲ್ಲಿ ನಗರ ಇರಲಿದೆ. ಈಗಾಗಲೇ ಎಲ್ಲಾ ಕಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಏನಿದು ಘಟನೆ?: ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಖಂಡಿಸಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಿಂದ ಗಾಂಧಿ ಬಜಾರ್ನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.
ಗುರುವಾರ ಮಧ್ಯಾಹ್ನದಿಂದ ಶನಿವಾರ ಬೆಳಗ್ಗೆ 10 ಗಂಟೆ ತನಕ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರ ಆದೇಶದ ಮೇರೆಗೆ ಶಿವಮೊಗ್ಗ ತಾಲೂಕು ದಂಡಾಧಿಕಾರಿ ನಾಗರಾಜ್ ನಿಷೇಧಾಜ್ಞೆ ಘೋಷಿಸಿದ್ದಾರೆ. ದುಷ್ಕರ್ಮಿಗಳು ನಾಗೇಶ್ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ ಸುತ್ತಮುತ್ತ ದಿಢೀರ್ ಬಂದ್ ಮಾಡಲಾಯಿತು. ಕಸ್ತೂರ್ಬಾ ರಸ್ತೆಯಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರಿನ ಗಾಜನ್ನು ಕಿಡಿಗೇಡಿಗಳು ಪುಡಿ ಮಾಡಿದ್ದಾರೆ. ಗಾಂಧಿ ಬಜಾರ್, ಮೀನು ಮಾರುಕಟ್ಟೆ, ಲಷ್ಕರ್ ಮೊಹಲ್ಲಾ, ಎಂ.ಕೆ.ಕೆ. ರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹಳೇ ಶಿವಮೊಗ್ಗ ಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಸಂಸದ ರಾಘವೇಂದ್ರ ಗಾಯಾಳುವನ್ನು ಭೇಟಿ ಮಾಡಿ ಅರೋಗ್ಯ ವಿಚಾರಿಸಿದ್ದಾರೆ.