- ಹೇಳಿಕೆ ಬಳಿಕ ಯೂ ಟರ್ನ್
- ಬಿ.ಸಿ.ಪಾಟೀಲ ವಿರುದ್ಧ ಜನ ಬಿಸಿ ಬಿಸಿ!
ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಹೇಳಿಕೆ ವಿವಾದದ ರೂಪ ಪಡೆದುಕೊಳ್ಳುತ್ತಿದ್ದಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಯೂ ಟರ್ನ್ ಹೊಡೆದಿದ್ದಾರೆ.
ಗುರುವಾರ ಬೆಳಗ್ಗೆ ಕೊಡಗು ಜಿಲ್ಲೆ ಮಡಿಕೇರಿಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಟೀಲ್, ಸಮಸ್ಯೆಗಳಲ್ಲಿ ಸಿಲುಕಿರುವ ರೈತರು ಶ್ರಮವಹಿಸಿ ಸಮಸ್ಯೆಗಳ ಸುಳಿಯಿಂದ ಹೊರಬರುವಂತಾಗಬೇಕು.
ಅದು ಬಿಟ್ಟು ಹೇಡಿಗಳಂತೆ ಸಾವಿಗೆ ಶರಣಾಗಬಾರದು. ಹೆಂಡತಿ, ಮಕ್ಕಳನ್ನು ನೋಡಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಾತ ಹೇಡಿ ಎಂದು ಹೇಳಿದ್ದರು.
ಇದು ವಿವಾದಕ್ಕೆ ತಿರುಗುತ್ತಿದ್ದಂತೆ ಸ್ಪಷ್ಟನೆ ನೀಡಿ, ತಾವು ರೈತರನ್ನು ಹೇಡಿ ಎಂದು ಎಂದಿಗೂ ಸಂಬೋಧಿಸಿಲ್ಲ. ಆತ್ಮಹತ್ಯೆಯಂತಹ ಕೆಲಸ ಹೇಡಿತನದ್ದು ಎಂದಿದ್ದೇನೆ.
ಯಾರೇ ಆಗಲೀ ಆತ್ಮಹತ್ಯೆಯಂತಹ ಹೇಡಿತನದ ಕೆಲಸಕ್ಕೆ ಮುಂದಾಗಬಾರದು. ಕಷ್ಟನಷ್ಟಗಳನ್ನು ಈಜಿ ಜಯಿಸಬೇಕು ಎಂದು ಹೇಳಿದ್ದೇನೆ ಎಂದಿದ್ದಾರೆ. ಸಚಿವರ ಈ ಹೇಳಿಕೆ ಭಾರೀ ಗೊಂದಲ ಮೂಡಿಸಿದ್ದು ಅವರ ವಿರುದ್ಧ ರೈತರು, ಜನತೆ ತಿರುಗಿ ಬಿದ್ದಿದ್ದಾರೆ. ಪ್ರತಿ ಪಕ್ಷಗಳಿಗೆ ಗ್ರಾಮ ಪಂಚಾಯ್ತಿ ಚುನಾವಣೆಗೆ ಒಂದು ವಸ್ತು ಸಿಕ್ಕಿದೆ.