ಟಾಪ್ 5 ನ್ಯೂಸ್ ಮಲ್ನಾಡ್
ಈಶ್ವರಪ್ಪ ಪುತ್ರ ಕಾಂತೇಶ್ ಪೆನ್ ಡ್ರೈವ್ ಭೀತಿ!
• ಸುದ್ದಿ ಪ್ರಸಾರ ತಡೆ ಕೋರಿ ಕೋರ್ಟ್ ಸ್ಟೇ ತಂದ ಕಾಂತೇಶ್
– ಶಿವಮೊಗ್ಗ : ಕೇಂದ್ರ ಕಾರಾಗೃಹದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ!
– ಸಾಗರ : ಪ್ರೀತ್ಸೆ ಅಂತಾ ಕಾಡಿದ, ಮದುವೆಯಾಗುವಂತೆ ಪೀಡಿಸಿದವನಿಗೆ 5 ವರ್ಷ ಜೈಲು
– ತೀರ್ಥಹಳ್ಳಿ: ಅಪಘಾತ, ತರೀಕೆರೆಯ ಇಬ್ಬರಿಗೆ ಗಾಯ
– ತರೀಕೆರೆ : ರೈಲು ಹತ್ತುವಾಗ ಕೆಳಕ್ಕೆ ಬಿದ್ದು ಸಾವು
NAMMUR EXPRESS NEWS
ಶಿವಮೊಗ್ಗ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ಗೂ ಸಹ ಅಶ್ಲೀಲ ಸಿಡಿ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕಾಂತೇಶ್, ಮಾಧ್ಯಮಗಳಿಗೆ ನಿರ್ಬಂಧ ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದು, ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ನಿರ್ಬಂಧಕಾಜ್ಞೆ ಹೊರಡಿಸಿದೆ. ಲೋಕಸಭೆ ಚುನಾವಣೆ ವೇಳೆ ತಮ್ಮ ಹೆಸರಿಗೆ ಮಸಿ ಬಳಿಯುವ ಯತ್ನ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತವಾಗಿ ಕಾಂತೇಶ್ ಅವರು ಮಾಧ್ಯಮಗಳಲ್ಲಿ ಮಾನಹಾನಿಕರ ದೃಶ್ಯ ಪ್ರಸಾರಕ್ಕೆ ನಿರ್ಬಂಧ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಪರಿಗಣಿಸಿದ ಕೋರ್ಟ್, ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಹೊರಡಿಸಿದೆ. ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಅವರು ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಹೈಕಮಾಂಡ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಆಕ್ರೋಶಗೊಂಡಿರುವ ಕೆಎಸ್ ಈಶ್ವರಪ್ಪ ಯಡಿಯೂರಪ್ಪ ಹಾಗೂ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಬೇಕೆಂದು ಶಿವಮೊಗ್ಗದಲ್ಲಿ ಬಿಎಸ್ವೈ ಪುತ್ರ ರಾಘವೇಂದ್ರ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.
– ಶಿವಮೊಗ್ಗ : ಕೇಂದ್ರ ಕಾರಾಗೃಹದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ
ಶಿವಮೊಗ್ಗ: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬರ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಶಿವಮೊಗ್ಗದ ರಾಜೀವಗಾಂಧಿ ಬಡಾವಣೆ ನಿವಾಸಿ ಪರಶುರಾಮ ಅಲಿಯಾಸ್ ಚಿಂಗಾರಿಗೆ ಹೊಟ್ಟೆನೋವಿನ ಕಾರಣಕ್ಕೆ ಮಾ.28 ರಂದು ಕಾರಾಗೃಹದ ಒಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದರೆ ಹೊಟ್ಟೆನೋವು ಜಾಸ್ತಿ ಆದ ಕಾರಣ ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಕರೆತರಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ಪರಶುರಾಮ ಕಲ್ಲು ನುಂಗಿರಬಹುದು ಎಂದು ಶಂಕಿಸಿದ್ದಾರೆ. ಏ. 1 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿಗೆ ಕಳುಹಿಸಲಾಗಿದೆ.
ಏ.3 ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಯಿಂದದ ಚಿಕಿತ್ಸೆ ಕೊಡಿಸಿ ಅವರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಏಪ್ರಿಲ್ 25 ರಂದು ಶಸ್ತ್ರ ಚಿಕಿತ್ಸೆ ನಡೆಸಿ ಕೈದಿಯ ಹೊಟ್ಟೆಯಿಂದ ಮೊಬೈಲ್ ಫೋನ್ ಹೊರ ತೆಗೆಯಲಾಗಿದೆ. ಜೈಲಿನಲ್ಲಿ ನಿಷೇಧಿತ ವಸ್ತು ಮೊಬೈಲ್ ಫೋನ್ ಕೈದಿಯ ಹೊಟ್ಟೆಯಲ್ಲಿ ದೊರೆತಿರುವುದರಿಂದ ಆತನ ವಿರುದ್ಧ ಶಿವಮೊಗ್ಗ ಕಾರಾಗೃಹದ ಅಧೀಕ್ಷಕರು ಇಲ್ಲಿನ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
– ಸಾಗರ : ಪ್ರೀತ್ಸೆ ಅಂತಾ ಕಾಡಿದ, ಮದುವೆಯಾಗುವಂತೆ ಪೀಡಿಸಿದವನಿಗೆ 5 ವರ್ಷ ಜೈಲು
ಸಾಗರ : ಮದುವೆಯಾಗುವಂತೆ ಒತ್ತಾಯಿಸಿ, ನಿರಾಕರಿಸಿದ್ದಕ್ಕೆ ಮಾನಸಿಕ ಕಿರುಕುಳ ನೀಡಿ ಯುವತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಭಟ್ಕಳ ತಾಲ್ಲೂಕಿನ ಮಾರುಕೇರಿ ಗ್ರಾಮದ ಓಂಕಾರ್ ಎಂಬಾತನಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ, 7 ಸಾವಿರ ರೂ. ದಂಡ ವಿಧಿಸಿದೆ. ಯುವತಿಯೊಬ್ಬಳ ಆತ್ಮಹತ್ಯೆ ಪ್ರಕರಣ ಸಂಬಂಧ, ಆಕೆಯ ತಂದೆ ದೂರು ನೀಡಿದ್ದರು. ತನಿಖೆ ನಡೆಸಿದ ರಿಪ್ಪನ್ಪೇಟೆ ಪೊಲೀಸರು ಓಂಕಾರ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರಭಾವತಿ ಜಿ. ಅವರು, ಆರೋಪ ಸಾಬೀತಾದ ಹಿನ್ನೆಲೆ ಓಂಕಾರ್ಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯ್ಕ ವಾದಿಸಿದ್ದರು. ಭಟ್ಕಳದ ಓಂಕಾರ್ಗೆ ಇನ್ಸ್ಟಾಗ್ರಾಂನಲ್ಲಿ ಹೊಸನಗರದ ಯುವತಿಯ ಪರಿಚಯವಾಗಿತ್ತು.
ಆಕೆಯ ಮೊಬೈಲ್ ನಂಬರ್ ಪಡೆದು, ಮದುವೆ ಆಗುವಂತೆ ಪೀಡಿಸುತ್ತಿದ್ದ. 2021ರ ಮಾರ್ಚ್ 12 ರಂದು ಆಕೆ ಓದುತ್ತಿದ್ದ ಕಾಲೇಜಿಗೆ ತೆರಳಿದ್ದ ಓಂಕಾರ್, ಆಕೆಯ ಕೈ ಹಿಡಿದು ಎಳೆದಾಡಿ ಮದುವೆಯಾಗುವಂತೆ ಒತ್ತಾಯಿಸಿದ್ದ. ಅಲ್ಲದೆ ತಂದೆ, ತಾಯಿಗೆ ವಿಷಯ ತಿಳಿಸುವುದಾಗಿ ಬೆದರಿಸಿದ್ದ. ಕಳೆನಾಶಕ ಸೇವಿಸಿ ಆತ್ಮಹತ್ಯೆ: ಹೆದರಿದ ಯುವತಿ ಅದೇ ದಿನ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಳು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 2021ರ ಮಾರ್ಚ್ 19 ರಂದು ಆಕೆ ಮೃತಪಟ್ಟಿದ್ದಳು. ಅಲ್ಲದೆ ತನ್ನ ಸಾವಿಗೆ ಓಂಕಾರ್ ಕಿರುಕುಳ ಕಾರಣ ಎಂದು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಳು. ಯುವತಿ ಮೃತಪಟ್ಟ ಬಳಿಕ ಆಕೆಯ ತಂದೆ ಓಂಕಾರ್ ವಿರುದ್ಧ ದೂರು ನೀಡಿದ್ದರು.
– ತೀರ್ಥಹಳ್ಳಿ: ಅಪಘಾತ, ತರೀಕೆರೆಯ ಇಬ್ಬರಿಗೆ ಗಾಯ
ತೀರ್ಥಹಳ್ಳಿ : ಮುಡುಬದಲ್ಲಿ ಕಾಲು ನೋವಿಗೆ ನಾಟಿ ಔಷಧಿ ಪಡೆದು, ಶೃಂಗೇರಿಗೆ ತೆರಳುತ್ತಿದ್ದಾಗ ಗೂಡ್ಸ್ ವಾಹನ ಡಿಕ್ಕಿ ಹೊಡೆದು, ತರೀಕೆರೆಯ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ತುಡುಕಿ ಬಳಿ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಬೈಕ್ಗೆ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತರೀಕೆರೆಯ ಮಣಿಕಂಠ ಮತ್ತು ಯೋಗೇಶ್ ಎಂಬುವವರು ಗಾಯಗೊಂಡಿದ್ದಾರೆ. ಅಪಘಾತಪಡಿಸಿದ ಗೂಡ್ಸ್ ವಾಹನ ಸ್ಥಳದಲ್ಲಿ ನಿಲ್ಲದೆ ತೆರಳಿದೆ ಎಂದು ಆರೋಪಿಸಲಾಗಿದೆ. ಗಾಯಾಳುಗಳಿಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯೋಗೇಶ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ತರೀಕೆರೆ : ರೈಲು ಹತ್ತುವಾಗ ಕೆಳಕ್ಕೆ ಬಿದ್ದು ಸಾವು
ತರೀಕೆರೆ ರೈಲುನಿಲ್ದಾಣದಲ್ಲಿ ಸುಮಾರು 30-35 ವರ್ಷದ ಅಪರಿಚಿತ ವ್ಯಕ್ತಿಯು ಚಲಿಸುತ್ತಿರುವ ರೈಲುಗಾಡಿಯನ್ನು ಹತ್ತಲು ಹೋಗಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ಈತನ ವಾರಸ್ಸುದಾರರು, ವಿಳಾಸ ಪತ್ತೆಯಾಗಿರುವುದಿಲ್ಲ. ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈತನ ಚಹರೆ ಸುಮಾರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲುಮುಖ, ದಪ್ಪಮೂಗು, 2 ಇಂಚು ಉದ್ದದ ಕಪ್ಪು ತಲೆಕೂದಲು, ಗಡ್ಡ,ಮೀಸೆ ಬಿಟ್ಟಿರುತ್ತಾನೆ. ಬಲಗೈಯಲ್ಲಿ ಕನ್ನಡ ಅಕ್ಷರದಲ್ಲಿ ಅಮ್ಮ ಎಂದು ಹಾಗು ಎಡಗೈಯಲ್ಲಿ ರಾಕಿ ಮತ್ತು ಇಂಗ್ಲೀಷ್ನಲ್ಲಿ ಆರ್ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಮೈಮೇಲೆ ನಕ್ಷತ್ರಾಕಾರದ ಚುಕ್ಕೆಗಳುಳ್ಳ ಗುಲಾಬಿ ಬಣ್ಣದ ಉದ್ದತೋಳಿನ ಅಂಗಿ, ಕಡುನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕೊರಳಲ್ಲಿ ಮತ್ತು ಎಡಗೈಯಲ್ಲಿ ಕೇಸರಿ ಬಣ್ಣದ ದಾರ ಕಟ್ಟಿಕೊಂಡಿರುತ್ತಾನೆ.