ಸಾರ್ವಕಾಲಿಕ ದಾಖಲೆ ಬೆಲೆಯತ್ತ ಕಾಫಿ!
– ರೈತರು ಖುಷ್… ಇನ್ನು ದರ ಹೆಚ್ಚಳ ಸಾಧ್ಯತೆ ?
– ಬರದ ನಡುವೆ ಕಾಫಿ ಬೆಳೆಗಾರರಿಗೆ ಸಿಹಿ ಸುದ್ದಿ
– ಫಸಲು ಕಡಿಮೆ: ಒಣಗುತ್ತಿರುವ ಕಾಫಿ ಗಿಡಗಳು!
NAMMUR EXPRESS NEWS
ಚಿಕ್ಕಮಗಳೂರು: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ರೊಬಸ್ಟಾ ಕಾಫಿಗೆ ಶುಕ್ರದೆಸೆ ಶುರುವಾಗಿದೆ. ದಿನದಿಂದ ದಿನಕ್ಕೆ ಬೆಲೆ ಏರುತ್ತಿದ್ದು, ರಾಜ್ಯದ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ವರ್ಷದ ಕಾಫಿ ಬೆಲೆ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆ ಎನ್ನಲಾಗಿದೆ. ಇನ್ನು ಮುಂದೆ ಕೂಡ ಕಾಫಿ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.
ವ್ಯಾಪಾರಿಗಳಿಗೆ ಬಂಪರ್ ಲಾಭ.!
ಈ ವರ್ಷ ಬೆಳೆಗಾರರಿಂದ ಫೆಬ್ರವರಿ ಆರಂಭದಲ್ಲಿ 6,000 ರೂ.ನಿಂದ 7,000 ರೂ.ಗೆ ಕಾಫಿ ಖರೀದಿಸಿದ ಮಾರಾಟಗಾರರು ಈಗ 10,000 ರೂ.ನಿಂದ 11,000 ರೂ.ಗೆ ಮಾರಾಟ ಮಾಡುತ್ತಿದ್ದು, ಬಂಪರ್ ಲಾಭ ಗಳಿಸುತ್ತಿದ್ದಾರೆ. ಇದರ ಜತೆ ಬೆಲೆ ಏರಿಕೆ ಆಗಿರುವುದರಿಂದ ಕಾರ್ಮಿಕರು ಸಂಬಳ ಹೆಚ್ಚಿಸಿಕೊಂಡಿದ್ದು, ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ.
ಭಾರತಕ್ಕೆ ನಾಲ್ಕನೇ ಸ್ಥಾನ:
ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ವಿಯೆಟ್ನಾಂ ಶೇ 42, ಬ್ರೆಜಿಲ್ ಶೇ 24ರಷ್ಟು ಕಾಫಿ ರಫ್ತು ಮಾಡುತ್ತಿವೆ. ಇಂಡೋನೇಷ್ಯಾ, ಭಾರತ, ಉಗಾಂಡ, ಮಲೇಶಿಯಾ, ಐವರಿ ಕೋಸ್ಟ್ ಥೈಲ್ಯಾಂಡ್, ತಾಂಜೇನಿಯ ನಂತರದ ಸ್ಥಾನದಲ್ಲಿವೆ. ವಿಶ್ವದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ನಾಲ್ಕನೇ ದೇಶವಾಗಿ ಭಾರತ ಗುರುತಿಸಿಕೊಂಡಿದೆ. ಬ್ರೆಜಿಲ್ ಕಾಫಿಗೂ ಭಾರತೀಯ ಕಾಫಿಗೂ ಯಾವುದೇ ಸಂಬಂಧ ಇಲ್ಲ, ಬ್ರೆಜಿಲ್ನಲ್ಲಿ ಅರೆಬಿಕಾ ಕಾಫಿ ಮಾತ್ರ ಬೆಳೆಯಲಾಗುತ್ತಿದ್ದು ಹೆಚ್ಚಾಗಿ ಅಮೆರಿಕ ಮಾರುಕಟ್ಟೆಯನ್ನು ಅವಲಂಬಿಸಿದೆ. ಇದರಿಂದ ಭಾರತೀಯ ಕಾಫಿ ಬೆಳೆಗೆ ಯಾವುದೇ ತೊಂದರೆ ಇಲ್ಲ.
ಫಸಲು ಕಡಿಮೆ: ಒಣಗುತ್ತಿರುವ ಕಾಫಿ ಗಿಡಗಳು!
ಕಾಫಿ ಗಿಡಗಳಿಗೆ ನೀರು ಇಲ್ಲದೆ ಚಿಕ್ಕಮಗಳೂರು, ಹಾಸನ, ಕರಾವಳಿ, ಶಿವಮೊಗ್ಗ ಸೇರಿ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಫಿ ಬೆಳೆ ಒಣಗುತ್ತಿದೆ. ಇದರಿಂದ ಫಸಲು ಕೂಡ ಕಡಿಮೆ ಇದೆ.