ಅಧಿಕಾರಕ್ಕೆ ಬಂದ ಕ್ಷಣವೇ ಮಹಿಳೆಯರ ಅಕೌಂಟಿಗೆ 1 ಲಕ್ಷ!
– ದೇಶದ ರೈತರ ಸಾಲ ಮನ್ನಾ ಮಾಡ್ತೇವೆ: ರಾಹುಲ್ ಗಾಂಧಿ
– ಶಿವಮೊಗ್ಗದಲ್ಲಿ ಕಾಂಗ್ರೆಸ್ ರಣ ಕಹಳೆ
NAMMUR EXPRESS NEWS
ಶಿವಮೊಗ್ಗ : ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂ. ಕೊಡುವ ನ್ಯಾಯ ಯೋಜನೆ ಅದು. ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಒಂದು ಲಕ್ಷ ರೂಪಾಯಿಯನ್ನು ಪಟಪಟನೇ ಅವರ ಖಾತೆಗಳಿಗೆ ಜಮಾ ಮಾಡುತ್ತೇವೆ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಶಿವಮೊಗ್ಗ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಂವಿಧಾನ ಉಳಿಸುವುದಕ್ಕಾಗಿಯೇ ಈ ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ. ಗ್ಯಾರಂಟಿ ಯೋಜನೆಗಳು ಇದಕ್ಕೆ ಸಹಕಾರಿಯಾಗಲಿವೆ ಎಂದರು.
ಯುವನಿಧಿ ಯೋಜನೆ ಮೂಲಕ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷಕ್ಕೆ ಒಂದು ಲಕ್ಷ ರೂ, ನೀಡಿ ಅವರಿಗೆ ತರಬೇತಿ ಕೊಟ್ಟು ಕೇಂದ್ರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು. ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಉಳಿಸುವ ಕೆಲಸ ಮಾಡಿದೆ. ಈ ಬಿಜೆಪಿ ಸಂವಿಧಾನವನ್ನೇ ತಿರುಚಲು ಪ್ರಯತ್ನಿಸಿದೆ. ಬಿಜೆಪಿಯವರು ಸಂವಿಧಾನದಲ್ಲಿರುವ ಮೀಸಲಾತಿಯನ್ನೇ ತೆಗೆದು ಹಾಕಲು ಹೊರಟಿದ್ದಾರೆ. ಅಂಬೇಡ್ಕರ್ ರಚಿಸಿದ ಶ್ರೇಷ್ಟ ಗ್ರಂಥ ಸಂವಿಧಾನ. ಸಮಾನತೆ ಅಲ್ಲಿದೆ. ನಾವು ಸಮಾನತೆ ಕೇಳಿದರೆ ನಮ್ಮನ್ನು ಅವರು ನಕ್ಸಲ್ ಪಟ್ಟಕ್ಕೆ ಹೋಲಿಸುತ್ತಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಅವರು ಕೂಡ ದೇಶದ ಕ್ಷಮೆ ಕೇಳಬೇಕು ಎಂದರು.
ಪ್ರಧಾನಿ ಮೋದಿ ಅವರಿಗೆ ಭಯ ಶುರುವಾಗಿದೆ. ಏಕೆಂದರೆ ಅವರ ಜೊತೆಗಿರುವ 27 ಜನ ಶ್ರೀಮಂತರಿಗೆ ಈ ಹಣ ಹೋಗುವುದಿಲ್ಲ ಎಂದು. ಬಿಜೆಪಿಯವರ ಹಾಗೆ ನಾವು ಸುಳ್ಳು ಹೇಳುವುದಿಲ್ಲ. ಮೋದಿ ಅವರು ಕೆಲವೇ ಕೆಲವು ವ್ಯಕ್ತಿಗಳ ಸಾಲ ಮನ್ನಾ ಮಾಡಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು. ದೇಶದಲ್ಲಿ ಇಂದು ವಿಶ್ವವಿದ್ಯಾಲಯಗಳು ಸೇರಿ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಸರ್ಕಾರದಲ್ಲಿಯೇ ಉಳಿಸಿಕೊಳ್ಳಲಾಗುವುದು ಎಂದರು.