ಮೇ 8ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ!
– ಪರೀಕ್ಷಾ ಮಂಡಳಿಯಿಂದ ದಿನಾಂಕ ಪ್ರಕಟ
– ಈ ಸಲದಿಂದ 3 ಬಾರಿ ಪರೀಕ್ಷೆ ಬರೆಯಲು ಅವಕಾಶ
NAMMUR EXPRESS NEWS
ರಾಜ್ಯದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ ಎಸ್ಸೆಸ್ಸೆಲ್ಸಿ 2024ರ ಪರೀಕ್ಷೆ 1ರ ಫಲಿತಾಂಶ ಪ್ರಕಟಣೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಡೆಗೂ ಮುಹೂರ್ತ ಫಿಕ್ಸ್ ಮಾಡಿದೆ. ಕಳೆದ ಮಾರ್ಚ್ 25ರಿಂದ ಏಪ್ರಿಲ್ 6ರ ವರೆಗೆ ನಡೆದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಫಲಿತಾಂಶದ ಕ್ರೋಢೀಕರಣದ ಕಾರ್ಯ ಅಂತಿಮ ಹಂತದಲ್ಲಿದೆ. ಇದೇ ಮೇ 8ರಂದು ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮೂಲಗಳು ತಿಳಿಸಿವೆ.
ಮೇ 10ನೇ ತಾರೀಖಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎಂಬ ಮಾಹಿತಿ ಇತ್ತು. ಆದರೀಗ ಮೇ 8ನೇ ತಾರೀಖಿಗೆ ಬಹುತೇಕ ಫಲಿತಾಂಶ ಪ್ರಕಟಣೆಗೆ ಸಿದ್ಧತೆ ನಡೆದಿದೆ. ಕಂಪ್ಯೂಟರ್ ಕೆಲಸದಲ್ಲಿ ವಿಳಂಬವಾದರೆ ಮಾತ್ರ ಫಲಿತಾಂಶ ಪ್ರಕಟಿಸುವ ದಿನಾಂಕ ಬದಲಾಗುವ ಸಾಧ್ಯತೆ ಇದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 4.41 ಲಕ್ಷ ವಿದ್ಯಾರ್ಥಿಗಳು ಹಾಗೂ 4.28 ಲಕ್ಷ ವಿದ್ಯಾರ್ಥಿನಿಯರು ಸೇರಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.
– ಮೂರು ಪರೀಕ್ಷೆ ಬರೆಯಲು ಅವಕಾಶ
ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಬರೋಬ್ಬರಿ ಮೂರು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಹಾಗಂತ ಮೂರೂ ಪರೀಕ್ಷೆ ಬರೆಯುವುದು ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಲ್ಲ. 1ನೇ ವಾರ್ಷಿಕ ಪರೀಕ್ಷೆಯಲ್ಲಿ ಬಂದ ಫಲಿತಾಂಶದಲ್ಲಿ ಸಮಾಧಾನವಿದ್ದರೆ 2ನೇ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಮೂರೂ ಪರೀಕ್ಷೆ ಬರೆದವರು ಹೆಚ್ಚು ಅಂಕಗಳು ಯಾವ ಪರೀಕ್ಷೆಯಲ್ಲಿ ಬಂದಿರುತ್ತದೋ ಆ ಫಲಿತಾಂಶವನ್ನು ಉಳಿಸಿಕೊಳ್ಳಬಹುದು.
1ನೇ ಪರೀಕ್ಷೆಯ ಫಲಿತಾಂಶ ಸಮಾಧಾನ ತರದಿದ್ದರೆ ಅಥವಾ ಕಡಿಮೆ ಅಂಕಗಳು ಬಂದಿದ್ದರೆ ಎರಡನೇ ಪರೀಕ್ಷೆ ಬರೆಯಬಹುದು. 2ನೇ ಪರೀಕ್ಷೆಯ ಫಲಿತಾಂಶದಲ್ಲೂ ಸಮಾಧಾನ ಇಲ್ಲದಿದ್ದರೆ 3ನೇ ಪರೀಕ್ಷೆ ಬರೆಯಬಹುದು. ಈ ರೀತಿ ಮೂರೂ ಪರೀಕ್ಷೆ ಬರೆದರೂ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಅಂತಿವಾಗಿ ಉಳಿಸಿಕೊಳ್ಳಬಹುದು. ಈತನಕ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಫಲಿತಾಂಶದಲ್ಲಿ ಸಮಾಧಾನವಾಗದಿದ್ದರೆ ವಿದ್ಯಾರ್ಥಿ ಅದನ್ನು ತಿರಸ್ಕರಿಸಿ ಪೂರಕ ಪರೀಕ್ಷೆ ಬರೆಯಲು ಅವಕಾಶವಿತ್ತು. ಹಾಗೊಂದು ವೇಳೆ ಪೂರಕ ಪರೀಕ್ಷೆಯಲ್ಲಿ ಇನ್ನೂ ಕಳಪೆ ಫಲಿತಾಂಶ ಬಂದರೆ ಅಥವಾ ಫೇಲಾದರೆ ಹಿಂದಿನ ವಾರ್ಷಿಕ ಪರೀಕ್ಷೆಯ ಫಲಿತಾಂಶ ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ. ಈಗ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಉಳಿಸಿಕೊಳ್ಳಬಹುದು.
– ಫಲಿತಾಂಶ ನೋಡುವುದು ಹೇಗೆ?
ಕರ್ನಾಟಕ ಶಾಲೆ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್ಸೈಟ್ನಲ್ಲಿ ಫಲಿತಾಂಶ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಫಲಿತಾಂಶವನ್ನು ನೋಡಬಹುದು. kseab.karnataka.gov.in ಗೆ ಭೇಟಿ ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮೂಲಕ ಫಲಿತಾಂಶ ನೋಡಬಹುದು. 10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.
SSLC ಫಲಿತಾಂಶ 2024 ಲಿಂಕ್
■ https://kseab.karnataka.gov.in
■ https://karresults.nic.in
1 Comment
8310876188