ಉಡುಪಿಯಲ್ಲಿ ಹೆಚ್ಚಿದ ಆನ್ಲೈನ್ ಮೋಸ!
– ನಂಬಿ ಹಣ ಕಳೆದುಕೊಳ್ಳುವವರೇ ಹುಷಾರು
– ಮೂರು ಪ್ರಕರಣ: ಮೂರು ತರ ಮೋಸ: ಸೈಬರ್ ಪೊಲೀಸ್ ಏನು ಮಾಡ್ತಿದೆ ಸ್ವಾಮಿ…?
NAMMUR EXPRESS NEWS
ಉಡುಪಿ: ಕಳೆದ ಕೆಲವು ವರ್ಷಗಳಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಸ್ಕ್ಯಾಮರ್ಗಳು ಸಾಮಾಜಿಕ ಬಳಕೆದಾರರನ್ನು ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಕಂಡುಬರುತ್ತಿವೆ. ಈ ನಡುವೆ ಬುದ್ದಿವಂತರ ಊರು ಎಂಬ ಖ್ಯಾತಿ ಪಡೆದ ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮಂದಿ ಈ ವಂಚನೆಗೆ ಸಿಲುಕಿ ಹಣ, ಜೀವನ, ಜೀವ ಕಳೆದುಕೊಳ್ಳುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಹಣ ಮಾಡಲು ಹೋಗಿ ಬೀದಿಗೆ ಬರುತ್ತಿದ್ದಾರೆ.
ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ನಿವೃತ್ತ ಬ್ಯಾಂಕ್ ಅಧಿಕಾರಿ!
– ಉಡುಪಿಯ ಅಂಬಲಪಾಡಿ ಅಧಿಕಾರಿಗೇ ಮೋಸ!
ಅಂಬಲಪಾಡಿಯ ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಜೆ. ಎಂಬವರು ತಮ್ಮ ವಾಟ್ಸಾಪ್ಗೆ ಬಂದ ಲಿಂಕ್ಗೆ ಕ್ಲಿಕ್ ಮಾಡಿದ ಪರಿಣಾ ಬ್ಯಾಂಕ್ ಖಾತೆಯಿಂದ 1.75 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಅಂಬಲಪಾಡಿಯ ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಅವರಿಗೆ ಮೇ 3ರಂದು ವಾಟ್ಸಾಪ್ ಗ್ರೂಪ್ಗೆ ಅಪರಿಚಿತ ಮೊಬೈಲ್ ನಂಬರ್ ನಿಂದ ಲಿಂಕ್ ಬಂದಿದೆ. ಇದನ್ನು ಕ್ಲಿಕ್ ಮಾಡಿದ ಕೂಡಲೇ ಅವರ ಮೂರು ಖಾತೆಗಳಲ್ಲಿದ್ದ ಹಣ ಬೇರೆಯವರ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಪೆನಿಯ ಯೂಸರ್ ನೇಮ್ ಹ್ಯಾಕ್ ಮಾಡಿ 21.14 ಲಕ್ಷ ರೂ. ವಂಚನೆ
– ಕಾರ್ಕಳದ ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಂಚನೆ
ಕಾರ್ಕಳದ ಪ್ರಸಿದ್ಧ ಗೋಡಂಬಿ ಫ್ಯಾಕ್ಟರಿ ಕೆದಿಂಜೆ ಗ್ರಾಮದ ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಯೂಸರ್ ನೇಮ್ ಹ್ಯಾಕ್ ಮಾಡಿ ಬಿಡ್ಡಿಂಗ್ ಸಲ್ಲಿಸಿ ಮೋಸ ಮಾಡಿದ ಕುರಿತು ಕಂಪನಿ ಮಾಲಕ ರಾಹುಲ್ ಅವರು ದೂರು ದಾಖಲಿಸಿದ್ದಾರೆ. ಭಾರತೀಯ ಸೇನೆಗೆ ಬಾದಾಮಿ ಪೂರೈಕೆ ಮಾಡುವ ಬಗ್ಗೆ ಕೇಂದ್ರ ಸರಕಾರದ ಮಾನ್ಯತೆ ಪಡೆದ gem.gov.in ವೆಬ್ಸೈಟ್ನಲ್ಲಿ ಬಹಿರಂಗ ಹರಾಜಿನಲ್ಲಿ ಏ.30ರಂದು ಬೆಳಗ್ಗೆ 5,12,500 ರೂ.ಗೆ ರಾಹುಲ್ ಬಿಡ್ ಮಾಡಿದ್ದರು. ಈ ನಡುವೆ ಅಜ್ಞಾತ ದುಷ್ಕರ್ಮಿಗಳು ಬೋಳಾಸ್ ಅಗ್ರೋ ಯೂಸರ್ ನೇಮ್ ಹ್ಯಾಕ್ ಮಾಡಿ ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು, ಕಂಪನಿಯ ಹೆಸರಿನಲ್ಲಿ ಒಟ್ಟು 21,14,731 ರೂ.ಗೆ ಇಂಡಿಯನ್ ಆರ್ಮಿಯ ವೆಬ್ಸೈಟ್ನಲ್ಲಿ ಬಿಡ್ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.
ಕೆವೈಸಿ ಅಪ್ಡೇಟ್ ನೆಪದಲ್ಲಿ ಹಣ ಎಗರಿಸಿದರು!
– ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಕೆವೈಸಿ ಅಪ್ಡೇಟ್ ಮಾಡುವುದಾಗಿ ನಂಬಿಸಿ ಓಟಿಪಿ ಪಡೆದು ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 76 ಬಡಗಬೆಟ್ಟು ನಿವಾಸಿ ಗಣೇಶ್ ಕೆ.(33) ಎಂಬವರಿಗೆ ಮೇ 4ರಂದು ಅನಾಮಧೇಯ ವ್ಯಕ್ತಿ ಕರೆ ಮಾಡಿ ಬ್ಯಾಂಕ್ಗೆ ಸಂಬಂಧಪಟ್ಟಂತೆ ಕೆವೈಸಿ ಅಪ್ಡೇಟ್ ಮಾಡಬೇಕಾಗಿದ್ದು, ನಿಮ್ಮ ಮೊಬೈಲ್ಗೆ ಬಂದಿರುವ ಓಟಿಪಿ ನೀಡುವಂತೆ ಕೇಳಿಕೊಂಡಿದ್ದ. ಅದನ್ನು ನಂಬಿದ ಗಣೇಶ್, ಓಟಿಪಿ ನೀಡಿದ್ದು, ಆ ಕೂಡಲೇ ಅವರ ಖಾತೆಯಿಂದ 1.90 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ