ಎಸ್ ಎಸ್ ಎಲ್ ಸಿ: ಕರಾವಳಿ ನಂಬರ್ 1
– ಉಡುಪಿಗೆ ಪ್ರಥಮ ಸ್ಥಾನ, ಯಾದಗಿರಿಗೆ ಕೊನೆಯ ಸ್ಥಾನ
– ದಕ್ಷಿಣ ಕನ್ನಡಕ್ಕೆ 2ನೇ ಸ್ಥಾನ, ಶಿವಮೊಗ್ಗ ಮೂರನೇ ಸ್ಥಾನ
– ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರೂ…!
NAMMUR EXPRESS NEWS
ಬೆಂಗಳೂರು: 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ರಾಜ್ಯಾದ್ಯಂತ 8 ಲಕ್ಷ 69 ಸಾವಿರದ 968 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸದ್ಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಣೆ ಮಾಡಿದೆ. ಎಂದಿನಂತೆ ಈ ಬಾರಿಯೂ ಕೂಡ ಹೆಣ್ಣುಮಕ್ಕಳೇ ರಿಸಲ್ಟ್ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಇನ್ನು ಉಡುಪಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಸಿಕ್ಕಿದೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ. 2024ರ ಮಾ.25ರಿಂದ 2024ರ ಏಪ್ರಿಲ್ 6ರವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ 441910 ವಿದ್ಯಾರ್ಥಿಗಳು, 428058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 6,31,204 ವಿದ್ಯಾರ್ಥಿಗಳು ಪಾಸ್ ಆಗಿದ್ದು ಈ ಬಾರಿ ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪಾಸಾದವರು ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದಾಗಿದೆ.
2,87,416 (65.90%) ಬಾಲಕರು ಪಾಸ್ ಆಗಿದ್ದು 3,43,788 (81.11%) ಬಾಲಕಿಯರು ಪಾಸ್ ಆಗಿದ್ದಾರೆ. ಈ ಮೂಲಕ SSLC ಪರೀಕ್ಷೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಇನ್ನು ಉಡುಪಿ ಪ್ರಥಮ ಸ್ಥಾನ(94%) ಪಡೆದಿದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ(92.12%) ಜಿಲ್ಲೆಗೆ ಸಿಕ್ಕಿದ್ದು ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. ಇನ್ನು ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಜಿಲೆ ಯಾದಗಿರಿ (50.59%).