ಶಿವಮೊಗ್ಗ ಈ ಬಾರಿ ನಂಬರ್ 3: ಶಿಕ್ಷಣ ಸಚಿವರ ಕ್ಷೇತ್ರದವರೇ ಟಾಪರ್!
– 29 ರಿಂದ 3ನೇ ಸ್ಥಾನಕ್ಕೆ ಜಿಗಿದ ಶಿವಮೊಗ್ಗ: ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳ ಸಾಧನೆ
– ಶೇ.88.67 ಫಲಿತಾಂಶದೊಂದಿಗೆ 3ನೇ ಸ್ಥಾನಕ್ಕೇರಿದ ಮಲೆನಾಡು
– ಗುರುಚರಣ ಶೆಟ್ಟಿ, ಚಿನ್ಮಯಿ ಅನಂತ್ ಶ್ಯಾನ್ ಬಾಗ್, ಬಿಂದು ಪಿ ಗೌಡ, ರಕ್ಷಶ್ರೀ ಜಿಲ್ಲೆಗೆ ಟಾಪರ್
NAMMUR EEXPRESS NEWS
ಶಿವಮೊಗ್ಗ: 2023-24ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶಿವಮೊಗ್ಗ ಜಿಲ್ಲೆಯು ಅಭೂತಪೂರ್ವ ಸಾಧನೆ ಮಾಡಿದೆ. ಇನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಉತ್ತಮ ಸ್ಥಾನ ಪಡೆದಿದೆ. ಜತೆಗೆ ಅವರ ಕ್ಷೇತ್ರ ಸೊರಬದ ಮೂರು ಮಕ್ಕಳು ಜಿಲ್ಲೆಗೆ ಟಾಪರ್ ಆಗಿದ್ದಾರೆ. ಕಳೆದ ವರ್ಷ ಶೇ.84.04 ಫಲಿತಾಂಶದೊಂದಿಗೆ 29ನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ ಶೇ.88.67 ಫಲಿತಾಂಶದೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಪರೀಕ್ಷೆ ಎದುರಿಸಿದ 23,028 ವಿದ್ಯಾರ್ಥಿಗಳ ಪೈಕಿ 20,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2022ರಲ್ಲಿ ಶಿವಮೊಗ್ಗ 26ನೇ ಸ್ಥಾನ ಪಡೆದಿತ್ತು. 2021ರಲ್ಲಿ ಕರೊನಾ ಕಾರಣದಿಂದ ಎಸ್ಎಸ್ಎಲ್ಸಿಯ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣ ಮಾಡಲಾಗಿತ್ತು.
2020ರಲ್ಲಿ ಜಿಲ್ಲೆ 18ನೇ ಸ್ಥಾನದಲ್ಲಿತ್ತು. 2019ರ ಎಸ್ಎಎಲ್ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಶೇ.79.13 ಫಲಿತಾಂಶದೊಂದಿಗೆ ರಾಜ್ಯದಲ್ಲಿ 21ನೇ ಸ್ಥಾನದಲ್ಲಿತ್ತು. ಅದಕ್ಕೂ ಮುನ್ನ 2018ರಲ್ಲಿ 20 ಹಾಗೂ 2017ರಲ್ಲಿ 15ನೇ ಸ್ಥಾನ ಪಡೆದಿತ್ತು. ಈಗ ಹಳೆಯ ದಾಖಲೆಗಳೆಲ್ಲ ನುಚ್ಚು ನೂರಾಗಿದ್ದು, ಮೂರನೇ ಸ್ಥಾನಕೇರುವ ಮೂಲಕ ಜಿಲ್ಲೆ ರಾಜ್ಯದ ಗಮನಸೆಳೆದಿದೆ.
ಶಿವಮೊಗ್ಗ ಜಿಲ್ಲೆಗೆ ಟಾಪ್ 10 ಒಳಗೆ ಎಷ್ಟು?
ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರದ ಶ್ರೀ ರವಿಶಂಕರ್ ವಿದ್ಯಾ ಮಂದಿರದ ಗುರುಚರಣ ಶೆಟ್ಟಿ 622 ಅಂಕ, ಸೊರಬದ ಸ್ಯಾನ್ ತೋಮ್ ಆಂಗ್ಲ ಶಾಲೆಯ ಚಿನ್ಮಯಿ ಅನಂತ್ ಶ್ಯಾನ್ ಬಾಗ್ 622 ಅಂಕ, ಶ್ರೀ ಸ್ವಾಮಿ ವಿವೇಕಾನಂದ ಶಾಲೆ ಸೊರಬದ ಬಿಂದು ಪಿ ಗೌಡ 622 ಅಂಕ, ಸರ್ಕಾರಿ ಪ್ರೌಢ ಶಾಲೆ ಹಳೆ ಸೊರಬದ ರಕ್ಷಶ್ರೀ 622 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಾರೆ. ಇನ್ನು 3 ಮಂದಿ 621 ಹಾಗೂ 5 ಮಂದಿ 620 ಅಂಕ ಪಡೆದು ಸಾಧನೆ ಮಾಡಿದ್ದಾರೆ.