ಬಸವಾನಿ ಪ್ರೌಢ ಶಾಲೆಗೆ ಶೇ.100ರಷ್ಟು ಫಲಿತಾಂಶ!
– ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಾಧನೆ
-ನಾಗಶ್ರೀ ಎಲ್.ಆರ್ ಶೇ.92.48% ಅಂಕ ಗಳಿಸಿ ಟಾಪರ್
NAMMUR EXPRESS NEWS
ತೀರ್ಥಹಳ್ಳಿ: ಬಸವಾನಿ ಪ್ರೌಢ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದ್ದು ತಾಲೂಕಿನಲ್ಲೇ ಉತ್ತಮ ಫಲಿತಾಂಶ ದಾಖಲು ಮಾಡಿದೆ. ಶೇ.100% ಫಲಿತಾಂಶವನ್ನು ಪಡೆದಿದ್ದು ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಎಲ್ಲಾ ಶಿಕ್ಷಕರ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಪ್ರಯತ್ನ ಹಾಗೂ ಪೋಷಕರ ಸಹಕಾರದಿಂದ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಿದೆ. ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು,ಕುಮಾರಿ ನಾಗಶ್ರೀ ಎಲ್.ಆರ್.ಶೇ92.48% ಪಡೆಯುವುದರ ಮೂಲಕ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಹಾಗೂ ಶ್ರಾವ್ಯ ಎಚ್.ಕೆ ಶೇ.87.4% ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಎಸ್.ಡಿ. ಎಂ.ಸಿ ಅಧ್ಯಕ್ಷರು ಹಾಗು ಸದಸ್ಯರು, ಹಿರಿಯ ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು, ಪೋಷಕರು ಅಭಿನಂದಿಸಿದ್ದಾರೆ.
ಮಲೆನಾಡ ಮಡಿಲಲ್ಲಿರುವ ಶಾಲೆ
ಮಲೆನಾಡ ಮಡಿಲಿನಲ್ಲಿರುವ ತೀರ್ಥಹಳ್ಳಿ ತಾಲೂಕಿನ ಬಸವಾನಿ ಪ್ರೌಢಶಾಲೆಯು 1964ರಲ್ಲಿ ಪ್ರಾರಂಭಗೊಂಡಿದ್ದು ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ದೀರ್ಘ ಇತಿಹಾಸ ಇರುವ ಈ ಪ್ರೌಢಶಾಲೆಗೆ ಬಸವಾನಿ ಹಾರೋಗೊಳಿಗೆ, ಹಾಗೂ ದೇವಂಗಿ ಗ್ರಾಮ ಪಂಚಾಯಿತಿ ಭಾಗದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾರ್ಜನೆ ಗಳಿಸುತ್ತಿದ್ದಾರೆ.
ಬಸ್ ಸೌಲಭ್ಯ: ವಿದ್ಯಾರ್ಥಿಗಳಿಗೆ ಅನುಕೂಲ
ಹಲವು ಗ್ರಾಮದ ಮೂಲೆ ಮೂಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಶಾಲೆಗೆ ಸರಿಯಾದ ಸಮಯಕ್ಕೆ ಬಂದು ಹೋಗಲು ಬಸ್ ಮಾರ್ಗದ ವ್ಯವಸ್ಥೆಯ ಕೊರತೆಯಿದ್ದು, ಪರ್ಯಾಯ ವ್ಯವಸ್ಥೆಗಾಗಿ ಹಿರಿಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ದತ್ತಿ ನಿಧಿಯ ಸದಸ್ಯರಗಳಿಂದ ಹಣ ಸಂಗ್ರಹಣೆ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರಿಂದ ಹಣ ಸಂಗ್ರಹಣೆ ಮಾಡಿ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆಯನ್ನು ಮಾಡಿದ್ದಾರೆ. ಹೀಗೆ ಶಿಕ್ಷಣ ಪ್ರೇಮಿಗಳು ಹಾಗೂ ಅನೇಕ ದಾನಿಗಳ ಸಹಾಯದಿಂದ ಅನೇಕ ಮೂಲಭೂತ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಾ ಬಂದಿದ್ದಾರೆ.