ಮೇ 20ರವರೆಗೆ ಕರಾವಳಿಯಲ್ಲಿ ಮಳೆ ಅಲರ್ಟ್!
– ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ
– ಬಿಸಿಲಿನ ಧಗೆಗೆ ಹಲವೆಡೆ ತಂಪೆರೆದ ಮಳೆ
NAMMUR EXPRESS NEWS
ಮಂಗಳೂರು/ಉಡುಪಿ: ಕಳೆದ ತಿಂಗಳಿನಿಂದ ವ್ಯಾಪಕವಾದ ಉಷ್ಣ ಅಲೆ, ಹವಾಮಾನ ವೈಪರೀತ್ಯಗಳಿಂದ ಎಲ್ಲೆಡೆ ಜನ ಜೀವನ ಹೈರಾಣಗೊಂಡಿರುವ ಮಧ್ಯೆ ಕಳೆದ ಮೂರು ದಿನಗಳಿಂದ ಕರಾವಳಿಯಲ್ಲಿ ಹಲವೆಡೆ ಮಳೆಯಾಗುತ್ತಿದೆ. ಇದರಿಂದ ವಾತಾವರಣವು ತಂಪಾಗಿದ್ದು ಬಿಸಿಲ ಝಳ ಅನುಭವಿಸಿದ್ದ ಕರಾವಳಿ ಜನತೆಗೆ ಮಳೆ ತುಸು ನೆಮ್ಮದಿ ತಂದಿದೆ. ದ.ಕ.ದ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ನಾಲ್ಕು ದಿನ ಎಲ್ಲೋ ಅಲರ್ಟ್
ಇನ್ನು ಹವಾಮಾನ ಇಲಾಖೆಯೂ ಮೇ 20ರ ವರೆಗೆ ಜಿಲ್ಲೆಯಲ್ಲಿ ಮಳೆಯ ಎಲ್ಲೋ ಅಲರ್ಟ್ ಘೋಷಿಸಿದೆ. ಉತ್ತಮ ಮಳೆ ಸಹಿತ ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ. ಕರಾವಳಿಯಲ್ಲಿ ಬಿಸಿಲು ಹಾಗೂ ಮೋಡ ಮುಸುಕಿದ ವಾತಾವರಣ ಮಂಗಳವಾರ ಕಂಡುಬಂದಿದ್ದು, ಬೆಳಗ್ಗೆ ಸುಳ್ಯ, ಅರಂತೋಡು, ಹಾಲೆಟ್ಟಿ, ಬಡ್ಡಟ್ಕ, ಸಂಪಾಜೆ ಪರಿಸರದಲ್ಲಿ ಮಳೆ ಸುರಿದಿದೆ. ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ಅಲೆಗಳ ಅಬ್ಬರ ಕಂಡುಬಂದಿದೆ. ದ.ಕ ಜಿಲ್ಲೆಯಲ್ಲಿ ಮಂಗಳವಾರ ಸರಾಸರಿ 31.7 ಡಿಗ್ರಿ ಗರಿಷ್ಠ, 24.2 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ ಒಂದು ವಾರ ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಾಗಿ ಬೀಚ್ ವ್ಯಾಪ್ತಿಯಲ್ಲೂ ಕಡಲಬ್ಬರ ಹೆಚ್ಚಳಗೊಳ್ಳಲಿದೆ.