ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್.!
– ಏಕಾಏಕಿ ಖಾತೆಗಳು ಲಾಗೌಟ್
– ಬಳಕೆದಾರರ ಪರದಾಟ
NAMMUR EXPRESS NEWS
ನವದೆಹಲಿ: ಮೆಟಾ ಒಡೆತನದ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು, ಸಾಮಾಜಿಕ ಜಾಲತಾಣಗಳಿಲ್ಲದೆ ಪ್ರಪಂಚದಾದ್ಯಂತದ ಜನ ಪರದಾಡುತ್ತಿದ್ದಾರೆ.ಇಂಟರ್ನೆಟ್ ಟ್ರಾಫಿಕ್ ಮೇಲೆ ನಿಗಾ ಇರಿಸುವ ಡೌನ್ ಡಿಟೆಕ್ಟರ್ ಸಂಸ್ಥೆಯ ಪ್ರಕಾರ, ಸಾವಿರಾರು ಬಳಕೆದಾರರ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸುಮಾರು 18,000ಕ್ಕೂ ಹೆಚ್ಚು ವರದಿಗಳು ಬಂದಿದ್ದು, ಆ ಪೈಕಿ ಶೇ. 59ರಷ್ಟು ಮಂದಿ ಅಪ್ಲಿಕೇಶನ್ ಪ್ರವೇಶಿಸುವಾಗ ಸಮಸ್ಯೆಗಳನ್ನು ಎದುರಿಸಿದರೆ ಶೇ. 34ರಷ್ಟು ಬಳಿಕೆದಾರರು ಸರ್ವರ್ ಸಂಪರ್ಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇ. 7ರಷ್ಟು ಮಂದಿಗೆ ಲಾಗಿನ್ ಮಾಡುವಾಗ ಸಮಸ್ಯೆ ಕಂಡು ಬಂದಿದೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಬಳಕೆದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ್ಯಪ್ ಓಪನ್ ಮಾಡುವಾಗ Something went wrong. There’s an issue and the page could not be loaded’, ‘Error loading media ಮುಂತಾದ ಮೆಸೇಜ್ ಕಂಡು ಬರುತ್ತಿದೆ ಎಂದು ಬಳಕೆದಾರರು ದೂರಿದ್ದಾರೆ. ಇಂಟರ್ನೆಟ್ ಮೇಲ್ವಿಚಾರಣಾ ಗುಂಪು ನೆಟ್ಬ್ಲಾಕ್ಸ್ ಕೂಡ ಎರಡು ಸಾಮಾಜಿಕ ಜಾಲತಾಣದ ವೆಬ್ಸೈಟ್ಗಳು ಪ್ರಸ್ತುತ ‘ಅಂತಾರಾಷ್ಟ್ರೀಯ ಸ್ಥಗಿತಗಳನ್ನು ಅನುಭವಿಸುತ್ತಿವೆ ಎಂಬ ಅಂಶವನ್ನು ಗಮನಿಸಿದೆ.
ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಸೇರಿದಂತೆ ಮೆಟಾ ಪ್ಲಾಟ್ಫಾರ್ಮ್ಗಳು ಪ್ರಸ್ತುತ ಅಂತಾರಾಷ್ಟ್ರೀಯ ಸ್ಥಗಿತಗಳನ್ನು ಅನುಭವಿಸುತ್ತಿವೆ. ಇದು ದೇಶೀಯ ಮಟ್ಟದ ಇಂಟರ್ನೆಟ್ ಅಡೆತಡೆಗಳು ಅಥವಾ ಫಿಲ್ಟರಿಂಗ್ಗೆ ಸಂಬಂಧಿಸಿಲ್ಲ ಎಂದು ನೆಟ್ಬ್ಲಾಕ್ಸ್ ತಿಳಿಸಿದೆ. ವಿಶೇಷವೆಂದರೆ ಈ ವರ್ಷದ ಮಾರ್ಚ್ನಲ್ಲಿಯೂ ಇದೇ ರೀತಿಯ ಸಮಸ್ಯೆ ಕಂಡು ಬಂದಿತ್ತು. ಪ್ರಪಂಚದಾದ್ಯಂತದ ಲಕ್ಷಾಂತರ ಬಳಕೆದಾರರು ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆ ಲಾಗ್ ಔಟ್ ಆಗುತ್ತಿರುವ ಬಗ್ಗೆ ದೂರು ನೀಡಿದ್ದರು.