ಹೆಲ್ತ್ ನ್ಯೂಸ್… ಪ್ರತಿಯೊಬ್ಬರೂ ಓದಲೇಬೇಕಾದ ಸುದ್ದಿ!
– ಮಾತ್ರೆ, ಔಷಧಿ ದರ ಕಡಿಮೆಯಾಯ್ತು!
– ರಾಜ್ಯದಲ್ಲಿ ಡೆಂಗ್ಯೂಅಬ್ಬರ ಹೆಚ್ಚಳ
– ಕೋವ್ಯಾಕ್ಸಿನ್ ಅಡ್ಡ ಪರಿಣಾಮ ಹೌದು ಎಂದ ಸಂಶೋಧನೆ
– 3 ಕಾಲು, 4 ಕೈ ಇರುವ ಸಯಾಮಿ ಮಗು ಹುಟ್ಟಿತು!
– ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ: ಆಸ್ಪತ್ರೆಯಲ್ಲಿ ಎಡವಟ್ಟು
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂಅಬ್ಬರ ಹೆಚ್ಚಳವಾಗಿದ್ದು, ಒಂದೇ ವಾರಗಳಲ್ಲಿ 195 ಕ್ಕೂಹೆಚ್ಚು ಮಂದಿಗೆ ಡೆಂಗ್ಯೂ ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ 2,877 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.ರಾಜ್ಯದಲ್ಲಿ ಡೆಂಘಿ ಪಾಸಿಟಿವಿಟಿ ಶೇ. 21 ಕ್ಕೆ ಏರಿಕೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಕಳೆದ ಒಂದು ವಾರದಲ್ಲಿ 879 ಮಂದಿಗೆ ಪರೀಕ್ಷೆ ನಡೆಸಿದ್ರೆ 186 ಮಂದಿಗೆ ಡೆಂಘಿ ದೃಢಪಟ್ಟಿದೆ. ಹೀಗಾಗಿ ಡೆಂಘಿ ವ್ಯಾಪಕವಾಗಿ ಹರಡುವ ಲಕ್ಷಣ ಕಾಣಿಸುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಡೆಂಗ್ಯೂ ಜ್ವರವು ಜನರಿಗೆ ನಿರಂತರ ಬೆದರಿಕೆಯಾಗಿದೆ. ಇದು ಪ್ರತಿ ವರ್ಷ ಸುಮಾರು ಇಪ್ಪತ್ತು ಸಾವಿರ ಜನರನ್ನು ಕೊಲ್ಲುತ್ತದೆ. ಇದು ಬೇಸಿಗೆಯ ಕೊನೆಯಲ್ಲಿ ಸಂಗ್ರಹವಾಗುವ ವಿವಿಧ ನಗರಗಳಲ್ಲಿ ಸ್ಥಿರ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಈಡಿಸ್ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ಸೋಂಕಿತ ಸೊಳ್ಳೆ ಕಚ್ಚಿದ ನಾಲ್ಕರಿಂದ ಏಳು ದಿನಗಳಲ್ಲಿ ಹಲವಾರು ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ನೀವು ಗಮನಿಸಬಹುದು.
– 41 ಸಾಮಾನ್ಯ ಔಷಧಗಳ ದರ ಇಳಿಕೆ
ಮಧುಮೇಹ, ಹೃದಯ ಮತ್ತು ಪಿತ್ತಜನಕಾಂಗದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ 41 ಔಷಧಿಗಳು ಮತ್ತು ಆರು ಸೂತ್ರೀಕರಣಗಳ ಬೆಲೆಯನ್ನು ಸರ್ಕಾರ ಕಡಿಮೆ ಮಾಡಿದೆ. ಆಂಟಾಸಿಡ್ಗಳು, ಮಲ್ಟಿವಿಟಮಿನ್ಗಳು ಮತ್ತು ಆ್ಯಂಟಿಬಯೋಟಿಕ್ಗಳ ಬೆಲೆ ಕಡಿಮೆಯಾಗಿದೆ ಎಂದು ಫಾರ್ಮಾಸ್ಯುಟಿಕಲ್ಸ್ ಇಲಾಖೆ ಮತ್ತು ರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್ಪಿಪಿಎ) ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ. ವಿವಿಧ ಔಷಧಿಗಳ ಬೆಲೆ ಇಳಿಕೆಯ ಮಾಹಿತಿಯನ್ನು ಡೀಲರ್ಗಳು ಮತ್ತು ದಾಸ್ತಾನುಗಾರರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ತಲುಪಿಸುವಂತೆ ಫಾರ್ಮಾ ಕಂಪನಿಗಳಿಗೆ ಸೂಚಿಸಲಾಗಿದೆ.
ಕೋವ್ಯಾಕ್ಸಿನ್ ಅಡ್ಡ ಪರಿಣಾಮ ಹೌದು ಎಂದ ಸಂಶೋಧನೆ
ಹೊಸದಿಲ್ಲಿ: ‘ಭಾರತ್ ಬಯೋಟೆಕ್’ ಅಭಿವೃದ್ಧಿಪಡಿಸಿದ ಕೋವಿಡ್ ಪ್ರತಿರೋಧ ಲಸಿಕೆ ‘ಕೋವ್ಯಾಕ್ಸಿನ್’ ಪಡೆದ ಶೇ.30ರಷ್ಟು ಜನರಲ್ಲಿ ಅಡ್ಡ ಪರಿಣಾಮಗಳು ಕಂಡು ಬಂದಿವೆ ಎಂದು ‘ಬನಾರಸ್ ಹಿಂದೂ ವಿಶ್ವವಿದ್ಯಾಲಯ’ದ ಸಂಶೋಧಕರ ತಂಡದ ಅಧ್ಯಯನದ ವರದಿ ತಿಳಿಸಿದೆ. ಆಸ್ಟ್ರಾಜೆನಿಕಾ ಸಂಸ್ಥೆಯ ‘ಕೋವಿಶೀಲ್ಡ್’ ಲಸಿಕೆ ಪಡೆದವರ ಪೈಕಿ ಅಪರೂಪದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡಪರಿಣಾಮಗಳು ಉಂಟಾಗುತ್ತವೆಂದು ಲಸಿಕೆ ತಯಾರಕ ಸಂಸ್ಥೆಯೇ ಒಪ್ಪಿಕೊಂಡ ಬೆನ್ನಲ್ಲೇ ‘ಕೋವ್ಯಾಕ್ಸಿನ್’ ಬಗ್ಗೆಯೂ ಇಂಥದ್ದೇ ವರದಿ ಹೊರಬಿದ್ದಿದೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ 926 ಮಂದಿ ಪೈಕಿ ಶೇ.30ರಷ್ಟು ಜನರಲ್ಲಿ ಚರ್ಮ ಸಂಬಂಧಿತ ಸಮಸ್ಯೆ, ನರಗಳಿಗೆ ಸಂಬಂಧಿತ ಅಸ್ವಸ್ಥತೆ, ಸಾಮಾನ್ಯ ಅಸ್ವಸ್ಥತೆ ಕಂಡು ಬಂದಿದೆ. ಶೇ.1ರಷ್ಟು ಪ್ರಕರಣಗಳಲ್ಲಿ ಪಾರ್ಶ್ವವಾಯು ಸಮಸ್ಯೆ ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ
ಸಯಾಮಿಗಳಿಗೆ ಶಸ್ತ್ರಚಿಕಿತ್ಸೆ
ನವದೆಹಲಿ: ಇಂಡೋನೇಷ್ಯಾದಲ್ಲಿ 3 ಕಾಲು, 4 ಕೈ ಹಾಗೂ 1 ಶಿಶ್ನವನ್ನು ಹೊಂದಿರುವ ಅಪರೂಪದ ಅವಳಿ ಮಕ್ಕಳಿಗೆ ವೈದ್ಯರು ಮೂಳೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿದ್ದಾರೆ. 2018ರಲ್ಲಿ ‘ಇಶಿಯೋಪಾಗಸ್ ಟ್ರಿಪಸ್’ ಕಂಜಾಯಿಂಡ್ ಟ್ವಿನ್ಸ್ ಎಂದು ಕರೆಯಲ್ಪಡುವ ಸಯಾಮಿ ಅವಳಿ (ಗರ್ಭದಲ್ಲಿಯೇ ಶರೀರ ಜೋಡಿಕೊಂಡು ಹುಟ್ಟುವ ಮಕ್ಕಳು ಜನಿಸಿದ್ದರು. ಸಾಮಾನ್ಯವಾಗಿ ಇಂತಹ ಸಯಾಮಿ ಮಕ್ಕಳು ಜನಿಸಿದ ನಂತರ ಸಾವಿಗೀಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಈ ಅವಳಿ ಮಕ್ಕಳು ಆರೋಗ್ಯಕರವಾಗಿದ್ದಾರೆ ಎಂದು ಅಮೆರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್ ವರದಿ ತಿಳಿಸಿದೆ. ಬೇರ್ಪಡಿಸಲು ಸಾಧ್ಯವಾಗದಂತ 3 ಕಾಲುಗಳು, 4 ಕೈಗಳು, 1 ಶಿಶ್ನ, 1 ಮೂತ್ರಕೋಶಹಾಗೂ 1 ಗುದನಾಳ ಹೊಂದಿರುವ ಅಂಗರಚನೆಯ ಅವಳಿ ಮಕ್ಕಳು ಕೂರಲು ಸಾಧ್ಯವಾಗದೆ ಕಳೆದ 3 ವರ್ಷಗಳಿಂದ ಹಾಸಿಗೆಯಲ್ಲಿಯೇ ಮಲಗಬೇಕಾಗಿತ್ತು. ವೈದ್ಯರ ತಂಡವೊಂದು ಪಾಲಕರ ಒಪ್ಪಿಗೆ ಪಡೆದು ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸಯಾಮಿ ಅವಳಿ ಮಕ್ಕಳಿಗೆ ಹೊಸ ಮರುಜನ್ಮ ನೀಡಿದೆ.
2 ಲಕ್ಷದಲ್ಲಿ ಒಂದು ಪ್ರಕರಣ: ಸಾಮಾನ್ಯವಾಗಿ 2 ಲಕ್ಷದಲ್ಲಿ ಇಂತಹ ಒಂದು ಪ್ರಕರಣ ಕಂಡುಬರುತ್ತದೆ. ಗರ್ಭಾಶಯದಲ್ಲಿ ಒಂದು ಫಲವತ್ತಾದ ಮೊಟ್ಟೆ. ವಿಭಜನೆಗೊಂಡು ಎರಡು ಭಾಗವಾಗಿ ಬೆಳವಣಿಗೆ ಹೊಂದಲು ಆರಂಭಿಸಿದಾಗ ಸಯಾಮಿ ಅವಳಿ ಮಕ್ಕಳು ಜನಿಸುತ್ತವೆ. 3:1 ಅನುಪಾತದೊಂದಿಗೆ ಅಧಿಕ ಪ್ರಮಾಣದಲ್ಲಿ ಹೆಣ್ಣು ಮಕ್ಕಳು ಈ ರೀತಿಯಾಗಿ ಜನಿಸುತ್ತಾರೆ ಎಂದು ಸಂಶೋಧನಾ ಪ್ರಬಂಧ ತಿಳಿಸಿದೆ.
ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ!
ಕೊಯಿಕ್ಕೋಡ್: ನಾಲ್ಕು ವರ್ಷದ ಬಾಲಕಿಯ ಬೆರಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ ಬದಲು ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ನಡೆಸಿದ ಪ್ರಮಾದ ಕೇರಳದ ಕೊಯಿಕ್ಕೋಡ್ ನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ನಡೆದಿದೆ. ನಾಲ್ಕು ವರ್ಷದ ಮಗುವಿಗೆ ಆರು ಬೆರಳುಗಳಿದ್ದವು. ಇದರಲ್ಲಿ ಆರನೇ ಬೆರಳನ್ನು ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಆದರೆ ಬದಲಾಗಿ ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸರ್ಜರಿ ನಂತರ ಮಗುವಿನ ಬಾಯಿಯಲ್ಲಿ ಹತ್ತಿ ತುಂಬಿರುವುದನ್ನು ನೋಡಿ ಪೋಷಕರು ಪ್ರಶ್ನಿಸಿದಾಗ ವೈದ್ಯರ ಎಡವಟ್ಟು ಬಯಲಿಗೆ ಬಂದಿದೆ. ”ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ನಡೆಸುವ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ವೈದ್ಯರ ಎಡವಟ್ಟಿನಿಂದ ನಮ್ಮ ಮಗು ಪರಿತಪಿಸುವಂತಾಗಿದೆ. ಈ ಬಗ್ಗೆ ಆಸ್ಪತ್ರೆ ವಿರುದ್ಧ ತನಿಖೆ ಕೈಗೊಳ್ಳಬೇಕು,” ಮಗುವಿನ ಪೋಷಕರು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಆಗ್ರಹಿಸಿದ್ದಾರೆ. ಆರೋಗ್ಯ ಸಚಿವೆ ವೀಣಾ ಅವರು ಪ್ರಕರಣ ಸಂಬಂಧ ತಕ್ಷಣ ತನಿಖೆ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿದ್ದಾರೆ.