ಕರಾವಳಿ ಪ್ರತಿನಿಧಿಸುವ ನೈರುತ್ಯ ಪದವೀಧರ-ಶಿಕ್ಷಕರ ಕ್ಷೇತ್ರದಲ್ಲಿ ಬಂಡಾಯದ ಸ್ಪರ್ಧೆ
– ರಾಜಕೀಯ ಜಿದ್ದಾ-ಜಿದ್ದಿಗೆ ಕಾರಣವಾಗಲಿದೆಯೇ ಈ 2 ಕ್ಷೇತ್ರಗಳು?
– ಯಾರ ಸ್ಪರ್ಧೆ…ಯಾರಿಗೆ ಲಾಭ…?.. ಏನಿದೆ ಗ್ರೌಂಡ್ ರಿಪೋರ್ಟ್?
NAMMUR EXPRESS NEWS
ಮಂಗಳೂರು/ ಶಿವಮೊಗ್ಗ: ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಒಟ್ಟು ಆರು ಕ್ಷೇತ್ರಗಳಿಗೆ ಸಂಬಂಧಿಸಿದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದೆ. ಒಟ್ಟು ಆರು ಸ್ಥಾನಗಳಿಗೆ ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 103 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದಲೂ ಕಾಂಗ್ರೆಸ್-ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಯಾರು ಯಾರು ಸ್ಪರ್ಧೆ?
ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಧನಂಜಯ್ ಸರ್ಜಿ ಅವರು ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ನಿಂದ ಆಯನೂರು ಮಂಜುನಾಥ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ಮೈತ್ರಿ ಅಭ್ಯರ್ಥಿಯಾಗಿರುವ ಧನಂಜಯ್ ಸರ್ಜಿ ಅವರಿಗೆ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಅವರು ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಪದವೀಧರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇದರಿಂದ ಅಸಮಾಧಾನಗೊಂಡಿರುವ ರಘುಪತಿ ಅವರು ತಮ್ಮ ಬೆಂಬಲಿಗರ ಜತೆ ಸಭೆ ಸೇರಿದ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಕ್ಕೆ ತೀರ್ಮಾನಿಸಿದ್ದರು.
ಆದರೆ, ಬಿಜೆಪಿಯವರು ರಘುಪತಿ ಭಟ್ ನಾಮಪತ್ರ ಸಲ್ಲಿಸುತ್ತಾರೆ ಎನ್ನುವ ನಿರೀಕ್ಷೆಯನ್ನು ಮಾಡಿರಲಿಲ್ಲ. ಅಷ್ಟೇಅಲ್ಲ ಯಾವುದೇ ಒತ್ತಡ ಅಥವಾ ಮನವೊಲಿಕೆ ಪ್ರಯತ್ನಗಳು ನಡೆದರೂ ನಾಮಪತ್ರವನ್ನು ವಾಪಾಸ್ ಪಡೆಯುವುದಿಲ್ಲ ಹಾಗೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಇದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಧನಂಜಯ್ ಸರ್ಜಿ ಅವರಿಗೆ ದೊಡ್ಡ ಸಂಕಷ್ಟ ತಂದಿದೆ. ಏಕೆಂದರೆ, ಕರಾವಳಿ ಭಾಗದಲ್ಲಿ ಬಿಜೆಪಿಯು ಹೆಚ್ಚಿನ ವೋಟ್ಬ್ಯಾಂಕ್ ಹೊಂದಿದ್ದು, ಶಿವಮೊಗ್ಗ ಭಾಗದ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿರುವುದು ಹಲವು ಬಿಜೆಪಿ ನಾಯಕರಿಗೆ ಅಸಮಾಧಾನ ತಂದಿದೆ. ಹೀಗಿರುವಾಗ, ಅಧಿಕೃತ ಅಭ್ಯರ್ಥಿ ಧನಂಜಯ್ ಅವರಿಗೆ ಉಡುಪಿ-ದಕ್ಷಿಣ ಕನ್ನಡದಲ್ಲಿ ಪದವೀಧರ ಮತದಾರರಿಂದ ಯಾವ ರೀತಿಯ ಬೆಂಬಲ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಈ ನಡುವೆ ಮೂರು ಬಾರಿ ಶಾಸಕರಾಗಿ ಉಡುಪಿ ಭಾಗದಲ್ಲಿ ಪ್ರಭಾವಿ ನಾಯಕರೆನಿಸಿಕೊಂಡಿರುವ ರಘುಪತಿ ಭಟ್ ಅವರು ಕೂಡ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುವುದು ಬಿಜೆಪಿಗೆ ದೊಡ್ಡ ಪೆಟ್ಟು ನೀಡುವುದರಲ್ಲಿ ಅನುಮಾನವಿಲ್ಲ. ಈ ರೀತಿಯ ಬಂಡಾಯದ ಪರಿಣಾಮ ಮತ ವಿಭಜನೆಯಿಂದಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವುಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಕಾಂಗ್ರೆಸ್ನ ಆಯನೂರು ಮಂಜುನಾಥ್ ಅವರಿಗೂ ಬಂಡಾಯದ ಬಿಸಿ ತಟ್ಟಲಿದ್ದು, ಎಸ್ಪಿ ದಿನೇಶ್ ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲೂ ಬಂಡಾಯದ ಬಿಸಿ!
ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಎಂಎಲ್ಸಿ ಭೋಜೇಗೌಡರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಆದರೆ, ಇಲ್ಲಿ ಕೂಡ ಬಿಜೆಪಿ-ಜೆಡಿಎಸ್ಗೆ ಬಂಡಾಯದ ಬಿಸಿ ತಟ್ಟಲಿದೆ. ಏಕೆಂದರೆ, ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಹರೀಶ್ ಆಚಾರ್ಯ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರು ವಿಶ್ವಕರ್ಮ ಸಮಾಜದ ಮುಖಂಡರಾಗಿದ್ದು, ಎಬಿವಿಪಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ಕೂಡ ತೊಡಗಿಸಿಕೊಂಡಿದ್ದವರು. ಹೀಗಿರುವಾಗ, ಅವರ ಸ್ವತಂತ್ರ ಸ್ಪರ್ಧೆ ಕೂಡ ಬಿಜೆಪಿ-ಜೆಡಿಎಸ್ನ ಭೋಜೇಗೌಡರಿಗೆ ತೀವ್ರ ಪ್ರತಿಸ್ಪರ್ಧೆ ನೀಡುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಈ ಬಾರಿಯ ವಿಧಾನ ಪರಿಷತ್ನ ಆರು ಕ್ಷೇತ್ರಗಳ ಪೈಕಿ ಕರಾವಳಿ ಭಾಗದ ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರವು ಸಾಕಷ್ಟು ಕುತೂಹಲದ ಕ್ಷೇತ್ರವಾಗಿ ರಾಜಕೀಯ ಜಿದ್ದಾ-ಜಿದ್ದಿಗೆ ಕಾರಣವಾಗಿದೆ.