ಕೋಟ ಲೋಕಸಭೆಯತ್ತ: ಕಟೀಲು ವಿಧಾನ ಪರಿಷತ್ಗೆ?
– ಕರಾವಳಿ ಪಕ್ಷ ಸಂಘಟನೆಗೆ ಬಿಜೆಪಿ ಮತ್ತೊಂದು ಪ್ಲಾನ್
– ಟಿಕೆಟ್ ಸಿಗದವರಿಗೆ ಈಗ ಅನೇಕರಿಗೆ ಹೊಸ ಜವಾಬ್ದಾರಿ?
NAMMUR EXPRESS NEWS
ಉಡುಪಿ/ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕೈತಪ್ಪಿದ್ದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹಾಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅವರು ವಿಧಾನ ಪರಿಷತ್ಗೆ ಪ್ರವೇಶ ಪಡೆಯಲಿದ್ದಾರೆಯೇ? ಹೀಗೊಂದು ಬಲವಾದ ಮಾತು ಈಗ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಲೋಕಸಭಾ ಚುನಾವಣೆಯಲ್ಲಿ 4ನೇ ಬಾರಿಗೆ ಲೋಕಸಭೆ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದ ನಳಿನ್ ಕುಮಾರ್ಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿತ್ತು. ಯುವ ನಾಯಕ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡುವ ಮೂಲಕ ನಳಿನ್ ಅವರಿಗೆ ಅಚ್ಚರಿ ನೀಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ನಳಿನ್ ಕುಮಾರ್ ಅವರು ಪಕ್ಷ ಹೇಳಿದರೆ ಗುಡಿಸುತ್ತೇನೆ; ಒರೆಸುತ್ತೇನೆ ಎನ್ನುವ ಹೇಳಿಕೆ ನೀಡುವ ಮೂಲಕ ಪಕ್ಷದ ತೀರ್ಮಾನಕ್ಕೆ ಸದಾ ಸಿದ್ಧ ಎಂದಿದ್ದರು.
ಆದರೆ, ಇದೀಗ ನಳಿನ್ ಅವರು ವಿಧಾನ ಸಭೆಯಿಂದ ವಿಧಾನಸಭೆಗೆ ನಡೆಯುವ ಚುನಾವಣೆ ಮೂಲಕ ಟಿಕೆಟ್ ಪಡೆದು ಎಂಎಲ್ಸಿ ಆಗುವುದಕ್ಕೆ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಲಿ ಎಂಎಲ್ಸಿ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಒಂದುವೇಳೆ ಕೋಟ ಅವರು ಗೆಲುವು ಸಾಧಿಸಿದರೆ ಪರಿಷತ್ನ ಆ ಸ್ಥಾನ ತೆರವಾಗಲಿದೆ. ಕೋಟ ಅವರ ಆ ಸ್ಥಾನಕ್ಕೆ ನಳಿನ್ ಕುಮಾರ್ ಅವರನ್ನು ಆಯ್ಕೆಗೊಳಿಸುವ ಮೂಲಕ ಕರಾವಳಿ ಭಾಗಕ್ಕೆ ಪ್ರಾತಿನಿಧ್ಯ ನೀಡಲು ಬಿಜೆಪಿ ವರಿಷ್ಠರು ಕೂಡ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಕಟೀಲ್ ಲೆಕ್ಕಾಚಾರ ಹೇಗೆ?
ಇನ್ನು ವಿಧಾನಸಭೆಯಿಂದ ಪರಿಷತ್ಗೆ ಬಿಜೆಪಿಯು ಮೂರು ಸ್ಥಾನ ಪಡೆಯಲಿದ್ದು, ಅದರಲ್ಲಿ ಒಂದನ್ನು ನಳಿನ್ ಕುಮಾರ್ ಅವರಿಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ನಳಿನ್ ಅವರ ಜತೆಗೆ ಮಾಜಿ ಸಚಿವರಾದ ಸಿಟಿ ರವಿ ಅವರು ಕೂಡ ವಿಧಾನ ಪರಿಷತ್ ಸದಸ್ಯರಾಗುವ ಲೆಕ್ಕಾಚಾರ ನಡೆಸಿದ್ದು, ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹೀಗಿರುವಾಗ, ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಚುನಾಯಿತರಾಗುವುದಕ್ಕೆ ಈ ಬಾರಿ ಲೋಕಸಭೆಯಿಂದ ಟಿಕೆಟ್ ಕೈತಪ್ಪಿರುವ ಘಟಾನುಘಟಿ ಬಿಜೆಪಿ ನಾಯಕರೇ ಕಸರತ್ತು ನಡೆಸುತ್ತಿರುವುದು ವಾಸ್ತವ.