ಕರಾವಳಿಗೆ ಕೊಡುಗೆ ನೀಡುವ ಕನಸು ಹೊತ್ತ ರವಿಶಾಸ್ತ್ರಿ!
– ಹುಟ್ಟೂರಿನ ನೆಲಕ್ಕೆ ಆಗಮಿಸಿ ವಿಶೇಷ ಪೂಜೆ
– ನಾಗ- ದೇವರ ಸೇವೆಯಿಂದ ರವಿ ಶಾಸ್ತ್ರೀ ದಂಪತಿಗಳಿಗೆ ಹುಟ್ಟಿದ ಮಗು!
NAMMUR EXPRESS NEWS
ಕಾರ್ಕಳ: ಖ್ಯಾತ ಕ್ರಿಕೆಟ್ ಆಟಗಾರ, ಕಾಮೆಂಟೇಟರ್ ರವಿ ಶಾಸ್ತ್ರೀ ಮುಂದಿನ ದಿನಗಳಲ್ಲಿ ಕರಾವಳಿಯ ತನ್ನ ಹುಟ್ಟೂರಿನ ನೆಲಕ್ಕೆ ಕೊಡುಗೆ ನೀಡುವ ಕನಸು ಹೊತ್ತಿದ್ದಾರೆ. ಭಾರತೀಯ ಕ್ರಿಕೆಟ್ ಮಾಜಿ ನಾಯಕ, ಖ್ಯಾತ ಕಮೆಂಟೇಟರ್ ರವಿಶಾಸ್ತ್ರಿ ಉಡುಪಿ ಯರ್ಲಪಾಡಿಯ ತನ್ನ ಹಿರಿಯರ ಮೂಲ ನೆಲೆಯ ಕರ್ವಾಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮಧ್ಯಮದ ಜತೆ ಮಾತನಾಡುವಾಗ ತಮ್ಮ ಮನದಾಳದ ತೋಡಿಕೊಂಡರು.
ನನ್ನ ತವರಲ್ಲಿ ಆತ್ಮೀಯ ನೆನಪುಗಳಿವೆ. ಬೆಳವಣಿಗೆಯ ಹಂತದಲ್ಲಿ ನಾನು ಈ ಪರಿಸರವನ್ನು ಕಂಡಿದ್ದೇನೆ. ಜೀವನದಲ್ಲಿ ದೇವರ ದಯೆ ಮುಖ್ಯ. ಕಠಿಣ ದುಡಿಮೆಯೂ ಮುಖ್ಯವಾಗುತ್ತದೆ. ತವರು ನೆಲಕ್ಕೆ ಬಂದಾಗಲೆಲ್ಲ ಸ್ಫೂರ್ತಿ ಪಡೆದಿದ್ದೇನೆ ಎಂದರು.
1983ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದದ್ದು, 1985ರ ಗೆಲುವು, ಆಸ್ಟ್ರೇಲಿಯಾದ ನೆಲದಲ್ಲಿ ಭಾರತೀಯನಾಗಿ ಸಿಡಿಸಿದ ಮೊದಲ ದ್ವಿಶತಕ , ಆಸ್ಟ್ರೇಲಿಯಾದ ನೆಲದಲ್ಲಿ 2 ಟೆಸ್ಟ್ ಸರಣಿ ಗೆಲುವು, ಕಮೆಂಟೇಟರ್ ಆಗಿ 2007 ಮತ್ತು 2011ರ ವಿಶ್ವಕಪ್ ಗೆಲುವಿನ ಸಂಭ್ರಮ ಇನ್ನು ನೆನಪಿನಲ್ಲಿದೆ ಎಂದರು
ನಾಗ- ದೇವರ ಸೇವೆಯಿಂದ ಹುಟ್ಟಿದ ಮಗು!
ತಮ್ಮ ಪೂರ್ವಿಕರ ನೆಲ, ವಿಶೇಷವಾಗಿ ಇಲ್ಲಿ ಪ್ರಾರ್ಥಿಸಿದ ಬಳಿಕ ಹುಟ್ಟಿದ ಮಗಳು ಅಲೈಕಾ .. ಈ ಕಾರಣಗಳಿಂದ 2007ರ ಬಳಿಕ ನಿರಂತರ ಕರ್ವಾಲು ದೇವಳಕ್ಕೆ ವರ್ಷಕ್ಕೊಂದು ಬಾರಿ ಭೇಟಿ ಕೊಟ್ಟು ಸೇವೆ ಸಲ್ಲಿಸುತ್ತಿರುವ ರವಿಶಾಸ್ತ್ರಿ ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಕರ್ವಾಲಿನ ನಾಗ- ದೇವರ ಸನ್ನಿಧಿಗೆ ಅಪರಾಹ್ನ 12.30 ರ ವೇಳೆ ಉಡುಪಿಯ ವಾದಿರಾಜ ಪೆಜತ್ತಾಯ ಅವರ ಜತೆಗೆ ಆಗಮಿಸಿ ಸುಮಾರು ಒಂದೂವರೆ ಗಂಟೆಗಳ ಅವಧಿ ಕಳೆದರು. ದೇವಸ್ಥಾನದಲ್ಲಿ ಸೇವಾ ಸಂಕಲ್ಪ, ಮಹಾಗಣಪತಿ, ಜಲದುರ್ಗೆಗೆ ಹೂವಿನ ಪೂಜೆ ಬಳಿಕ ಕುಟುಂಬದ ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ ಸೇವೆ ಸಹಿತ ಕಲ್ಪೋಕ್ತ ಪೂಜೆ, ಬಳಿಕ ವಿಷ್ಣು ಮೂರ್ತಿ ದೇವರಿಗೆ ಹೂವಿನ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ರವಿಶಾಸ್ತ್ರಿ ಅವರ ಸಹೋದರ ಮಂಗಳೂರಿನ ಡಾ.ಸಂತೋಷ್ ಶಾಸ್ತ್ರಿ, ಅತ್ತಿಗೆ ಕವಿತಾ ಶಾಸ್ತ್ರಿ ವಿಶ್ವಜಿತ್, ನರಸಿಂಹ ತಂತ್ರಿ, ದೇವಳದ ಆಡಳಿತ ಮೊಕ್ತೇಸರ ಕೆ.ಅನಂತ ಪಟ್ಟಾಭಿರಾವ್ ,ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೋಜಶೆಟ್ಟಿ ಮಠದ ಬೆಟ್ಟು,ಉಪಾಧ್ಯಕ್ಷ ಸುಧಾಕರ ಹೆಗ್ಡೆ,ಜತೆ ಕಾರ್ಯದರ್ಶಿ ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ವಾಯ್ಸ್ ಆಫ್ ವರ್ಲ್ಡ್ ಕ್ರಿಕೆಟ್ ” ಗೌರವ
ದೇವರ ದಯೆ ಮತ್ತು ಕಠಿಣ ಪರಿಶ್ರಮದಿಂದ ರವಿಶಾಸ್ತ್ರಿ ಭಾರತೀಯ ಕ್ರಿಕೆಟಿಗ, ಕಪ್ತಾನ, ಕೋಚ್, ನಿರ್ದೇಶಕ, ಕಮೆಂಟೇಟರ್ ಹೀಗೆ ಜನಪ್ರಿಯತೆಯೊಂದಿಗೆ ಬೆಳೆದಿದ್ದಾರೆ. ಕರ್ವಾಲಿಗೆ ಬಂದು ಹೋದಂತೆಲ್ಲ ಪ್ರತೀ ಬಾರಿ ಅವರು ವೃತ್ತಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವರು ಬಿಸಿಸಿಐ ಕಾರ್ಯದರ್ಶಿ, ಅಧ್ಯಕ್ಷ ಮಾತ್ರವಲ್ಲ ಐಸಿಸಿ ಅಧ್ಯಕ್ಷರಾಗುವಂತಾಗಲಿ ಎಂದು ಪೂಜೆ, ವೈದಿಕ ಕಾರ್ಯ ನೆರವೇರಿಸಿದ ಅಶೋಕ್ ಕಾರಂತ್ ತಮ್ಮ ಪ್ರಾರ್ಥನಾ ನುಡಿಗಳಲ್ಲಿ ಶುಭ ಕೋರಿದರು. ರವಿಶಾಸ್ತ್ರಿ ಅವರು ” ವಾಯ್ಸ್ ಆಫ್ ಇಂಡಿಯನ್ ಕ್ರಿಕೆಟ್” ಆಗಿರುವುದು ನಮ್ಮೆಲ್ಲರ ಹೆಮ್ಮೆ. ಅವರನ್ನೀಗ ವಾಯ್ಸ್ ಆಫ್ ವರ್ಲ್ಡ್ ಕ್ರಿಕೆಟ್ ” ಎಂದು ಗುರುತಿಸಿ ಗೌರವಿಸಲು ಸಂತಸವಾಗುತ್ತಿದೆ ಎಂದರು.
ದೇವಳದ ಆಡಳಿತ ಮೊಕ್ತೇಸರ ಕೆ.ಅನಂತ ಪಟ್ಟಾಭಿರಾವ್ ಅಭಿನಂದನಾ ಮಾತುಗಳನ್ನಾಡಿ ರವಿಶಾಸ್ತ್ರಿ ಅವರ ವೃತ್ತಿ ಜೀವನದ ಬೆಳವಣಿಗೆಯಲ್ಲಿ ಕರ್ವಾಲು ಸನ್ನಿಧಿಯ ಅನುಗ್ರಹ ವಿಶೇಷವಾಗಿದೆ. ನಮ್ಮೂರಿನ ಸಾಧಕ ಜಾಗತಿಕ ಕ್ರಿಕೆಟಿನ ಹೆಮ್ಮೆಯ ಸಾಧಕರಾಗಿ ಬೆಳೆದಿರುವುದು ಅಭಿಮಾನ ಮೂಡಿಸಿದೆ ಎಂದರು. ದೇವಳದ ವತಿಯಿಂದ ರವಿಶಾಸ್ತ್ರಿ ಅವರನ್ನು ಗೌರವಿಸಲಾಯಿತು.
ನೆನಪಾದರು ಅಣ್ಣಾಮಲೈ!
ಬಂಧುಗಳ ಜತೆ ಮಾತನಾಡುತ್ತಾ ಚುನಾವಣೆಯ ವಿಷಯ, ಅಣ್ಣಾ ಮಲೈ ಅವರು ರಾಜಕೀಯಕ್ಕೆ ಬಂದಿರುವ ವಿಷಯ ತಿಳಿದು ಪುಳಕಿತರಾದ ರವಿಶಾಸ್ತ್ರಿ 2014ರಲ್ಲಿ ಕಾರ್ಕಳ ಎಎಸ್ಪಿ ಅಗಿದ್ದ ಅಣ್ಣಾಮಲೈ ಅವರನ್ನು ಸನ್ಮಾಸಿಸಿದ ಕ್ಷಣವನ್ನು ನೆನಪಿಸಿಕೊಂಡರು. ಕರ್ವಾಲು ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಣ್ಣಾಮಲೈ ಸಿಕ್ಕಿದ್ದರು. ಈಗ ಅವರು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಉನ್ನತಮಟ್ಟಕ್ಕೆ ಏರಿರುವುದು ಖುಷಿ ತಂದಿದೆ ಎಂದರು.
ಪ್ರತೀ ಬಾರಿ ತನ್ನ ಭೇಟಿಯಲ್ಲಿ ಜತೆಗಿರುತ್ತಿದ್ದ ಇದೇ ಕರ್ವಾಲಿನವರಾದ ಪತ್ರಕರ್ತ ಮನೋಹರ್ ಪ್ರಸಾದ್ ಅವರನ್ನು ನೆನಪಿಸಿಕೊಂಡು ಕೊಂಚ ಭಾವುಕರಾದ ರವಿಶಾಸ್ತ್ರಿ ಮಿತ್ರನನ್ನು ಕಳೆದುಕೊಂಡ ನೋವಿದೆ. ಹಾಗಾಗಿ ಇಲ್ಲಿ ಊಟೋಪಚಾರ ಬೇಡವೆಂದಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಪರಿವಾರವನ್ನೂ ಕರೆದುಕೊಂಡು ಬರುವುದಾಗಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಆದರೂ ಒತ್ತಾಯಕ್ಕೆ ಕರಾವಳಿಯ ಬಿಸ್ಕುಟ್ ಅಂಬಡೆ, ಶೀರ, ಮಾಲ್ಟ್ ಸವಿದು ಉಡುಪಿ ಪುತ್ತಿಗೆ ಮಠಾಧೀಶರ ಭೇಟಿಗೆ ನಿರ್ಗಮಿಸಿದರು.
ಮರೆಯಲಾಗದ ತವರ ನೆಲ!
ರವಿಶಾಸ್ತ್ರಿಯವರ ಪೂರ್ವಜರು ಕಾರ್ಕಳ ಎರ್ಲಪಾಡಿಯವರು ಐವತ್ತರ ದಶಕದಲ್ಲಿ ರವಿಶಾಸ್ರಿಯವರ ಅಜ್ಜ ಎಂ ವಿ ಶಾಸ್ತ್ರಿ ಮಂಗಳೂರಿನ ಪ್ರಸಿದ್ಧ ವೈದ್ಯರಾಗಿದ್ದರು . ಬಳಿಕ ರವಿಶಾಸ್ರಿ ಯ ತಂದೆ ಜಯದ್ರಥ ಶಾಸ್ತ್ರಿ ಅಂದಿನ ಮದ್ರಾಸ್ ನಲ್ಲಿ ಶಿಕ್ಷಣ ಮುಗಿಸಿ ಮುಂಬೈನಲ್ಲಿ ವೈದ್ಯರಾಗಿ ನೆಲೆಸಿದಾಗ ಅಲ್ಲೆ ಹುಟ್ಟಿ ಬೆಳೆದ ರವಿ ಶಾಸ್ತ್ರೀ ಕ್ರಿಕೆಟಿಗರಾಗಿ ಗುರುತಿಸಿಕೊಂಡರು.
18 ವರ್ಷಗಳ ಬಳಿಕ ಸಂತಾನ ಭಾಗ್ಯವಿಲ್ಲ
ಮದುವೆಯಾಗಿ 18 ವರ್ಷಗಳ ಬಳಿಕ ಸಂತಾನ ಭಾಗ್ಯವಿಲ್ಲ ಎಂಬ ಕೊರಗಿನ ಮಧ್ಯೆ ತವರು ನೆಲದ ನಾಗ- ದೇವರು, ದುರ್ಗೆಯ ಸನ್ನಿಧಿಯಲ್ಲಿ ಸೇವೆ ಕೊಡಬೇಕು ಎಂಬ ಸಲಹೆ ಜೋತಿಷ್ಯರಿಂದ ಸಿಕ್ಕಿತು. ಕೂಡಲೇ 2007ರಲ್ಲಿ ರವಿಶಾಸ್ತ್ರಿ ಪತ್ನಿ ಸಮೇತ ಸ್ಥಳಕ್ಕೆ ಭೇlಟಿ ನೀಡಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ವರ್ಷದೊಳಗೆ ಪುತ್ರಿ ಅಲೈಕಾ ಜನನ ಅವರಿಗೆ ಅವಿಸ್ಮರಣೀಯ ಸಂತಸ ನೀಡಿತ್ತು. ಕೋವಿಡ್ ಲಾಕ್ ಡೌನ್ ಹಿನ್ನೆಲೆ ಹಾಗು ವಲ್ಡ್ ಕಪ್ ಒತ್ತಡಗಳಿಂದ ಮೂರು ವರ್ಷ ಬರಲಾಗದ್ದು ಬಿಟ್ಟರೆ ವರ್ಷವೂ ರವಿಶಾಸ್ತ್ರಿ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತಿದ್ದಾರೆ. ಎರಡು ದಿನಗಳ ಕರಾವಳಿ ಭೇಟಿಯಲ್ಲಿ ರವಿಶಾಸ್ತ್ರಿ ಕೊಲ್ಲೂರು,ಪಾವಂಜೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೂ ಭೇಟಿ ನೀಡಿ ನಿರ್ಗಮಿಸಲಿದ್ದಾರೆ