ಜೇನು ಹೊಡೆಯುತ್ತೆ ಹುಷಾರ್!
– ಗಂಗೆ ಪೂಜೆ ಮಾಡುತ್ತಿದ್ದ 50 ಕ್ಕೂ ಹೆಚ್ಚು ಮಂದಿ ಮೇಲೆ ದಾಳಿ
– ಭದ್ರಾವತಿ ತಾಲ್ಲೂಕು ಬಾಬಳ್ಳಿಯಲ್ಲಿ ನಡೆದ ಘಟನೆ
– ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿಯ ಬಾಣಂಕಿಯಲ್ಲಿ ಜೇನು ಹೊಡೆದು ಹಲವರಿಗೆ ಗಾಯ!
NAMMUR EXPRESS NEWS
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಬಾಬಳ್ಳಿಯಲ್ಲಿ ಗಂಗಾ ಪೂಜೆ ಮಾಡಲು ಹೋಗಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿ 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ತೀರ್ಥಹಳ್ಳಿಯಲ್ಲಿ ದೇವರ ಹರಕೆ ವೇಳೆ ಜೇನು ದಾಳಿ ಮಾಡಿ ಹಲವರು ಗಾಯಗೊಂಡ ಘಟನೆ ವರದಿ ಆಗಿದೆ. ಭದ್ರಾವತಿಯಲ್ಲಿ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗುತ್ತಿತ್ತಷ್ಟೆ ಅಲ್ಲದೆ, ಪೂರ್ವ ವಿಧಿವಿಧಾನಗಳನ್ನ ನಡೆಸಲಾಗುತ್ತಿತ್ತು. ಅದರಂತೆ ಬಾಬಳ್ಳಿಯ ನಿವಾಸಿಗಳು ಗಂಗೆ ಪೂಜೆ ಮಾಡಲು ಹೊರಟಿದ್ದರು. ಈ ವೇಳೆ ಅಲ್ಲಿಯೇ ಪೊದೆಯೊಂದರಲ್ಲಿ ಕಟ್ಟಿದ್ದ ಹೆಜ್ಜೇನುಗಳು ಮೇಲಕ್ಕೆದ್ದಿವೆ. ಅಲ್ಲದೆ ಗಂಗೆಪೂಜೆಯಲ್ಲಿದ್ದವರ ಮೇಲೆ ದಾಳಿ ಮಾಡಿವೆ.
ಇನ್ನೂ ವಿಶೇಷ ಅಂದರೆ, ಈ ಹೆಜ್ಜೇನುಗಳ ದಾಳಿಯಲ್ಲಿ ಎರಡು ವರ್ಷದ ಮಗು ಸಹ ಸಿಲುಕಬೇಕಿತ್ತು. ಅದೃಷ್ಟಕ್ಕೆ ದೇವರಂತೆ ಬಂದ ಬಾಲಕನೊಬ್ಬ ಮಗುವನ್ನು ಎತ್ತಿಕೊಂಡು ರಕ್ಷಣೆ ಮಾಡಿದ್ದಾನೆ. ಆತನ ಮೇಲೆ ಹೆಜ್ಜೇನು ಬಿಗಿಯಾಗಿ ದಾಳಿ ನಡೆಸಿ ಕಚ್ಚಿದರೂ ಮಗುವನ್ನ ಬಿಡದೇ ರಕ್ಷಣೆ ಮಾಡಿದ ಬಾಲಕನನ್ನ ಸ್ಥಳೀಯರು ಶ್ಲಾಘಿಸಿದ್ದಾರೆ.
– ತೀರ್ಥಹಳ್ಳಿಯಲ್ಲಿ ಕಡಜಲಿ ಜೇನು ಹೊಡೆದು ಹಲವರಿಗೆ ಗಾಯ
ದೈವದ ಹರಕೆ ಮತ್ತು ಪೂಜೆ ಮಾಡುವಾಗ ಜೇನು ಹುಳ ಕಡಿದು ನಾಲ್ಕಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದು 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿಯ ಬಾಣಂಕಿಯಲ್ಲಿ ಇತ್ತೀಚಿಗೆ ಸಂಭವಿಸಿದೆ. ಸ್ಥಳೀಯರು ದೈವದ ಹರಕೆ ಮಾಡುವಾಗ ದೂಪ ಹಾಕಿದ ಊದುಬತ್ತಿ ಹೊಗೆಯ ಸಂದರ್ಭದಲ್ಲಿ ಮುತ್ತಿಕೊಂಡಿದ್ದು ಸ್ಥಳೀಯರಿಗೆ ಹೊಡೆದಿರುವ ಘಟನೆ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.