ಮೈಸೂರು ಟಾಪ್ 3 ನ್ಯೂಸ್..!
– ಚಾಮರಾಜ ವೃತ್ತಕ್ಕೆ ಧಕ್ಕೆ: ಆತಂಕ.!
– ಲಂಚ ಪಡೆದ ವೈದ್ಯನಿಗೆ 4 ವರ್ಷ ಜೈಲು.!
– ದಸರಾ ಆನೆ ಅರ್ಜುನ ಸಮಾಧಿ ವಿರೂಪ ಆರೋಪ: ಎಫ್ಐಆರ್ ದಾಖಲು
NAMMUR EXPRESS NEWS
ಮೈಸೂರು: ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ನಿತ್ಯ ನೂರಾರು ಮಂದಿ ಪಾರಿವಾಳಗಳಿಗೆ ಧಾನ್ಯ ಚೆಲ್ಲುತ್ತಿದ್ದು, ಅದರಿಂದ ಸಮೀಪದ ಚಾಮರಾಜ ವೃತ್ತದ ಸೌಂದರ್ಯ ಹಾಳಾಗುತ್ತಿದೆ ಎಂಬ ಆಕ್ಷೇಪ ನಗರಪ್ರಿಯರಲ್ಲಿ ವ್ಯಕ್ತವಾಗಿದೆ. ಪಾರಂಪರಿಕ ನಗರಿಯ ಸೌಂದರ್ಯ ಹೆಚ್ಚಿಸುವಲ್ಲಿ ಅರಮನೆ ಜೊತೆಗೆ ಅದರ ಆವರಣದಲ್ಲಿನ ದೇವಾಲಯಗಳು, ಚಾಮರಾಜ, ಕೃಷ್ಣರಾಜ, ಜಯಚಾಮರಾಜೇಂದ್ರ ವೃತ್ತ, ಪಾಲಿಕೆ ಸೇರಿದಂತೆ ವಿವಿಧ ಕಟ್ಟಡಗಳು ಕಾರಣವಾಗಿವೆ.
ಪಾರಿವಾಳಗಳು ಕಟ್ಟಡಗಳ ಅಸ್ಥಿರತೆಗೆ ಕಾರಣವಾಗುತ್ತಿವೆ’ ಎನ್ನುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು. ಪಕ್ಷಿಪ್ರಿಯರು ತಮ್ಮ ಪ್ರೀತಿ ವ್ಯಕ್ತಪಡಿಸಲೇಬೇಕೆಂದರೆ ಮನೆಗಳಲ್ಲಿ ಗಿಣಿ, ಲವ್ ಬರ್ಡ್ಸ್ಗಳನ್ನು ಸಾಕಿಕೊಳ್ಳಲಿ. ಇಲ್ಲವೇ ಗುಬ್ಬಚ್ಚಿ, ಬುಲ್ಬುಲ್ ಹಕ್ಕಿಗಳಿಗೆ ಗೂಡುಗಳನ್ನು ಮನೆಗಳಲ್ಲಿ ತೂಗುಹಾಕಲಿ. ಆದರೆ, ಧಾನ್ಯವನ್ನು ಚೆಲ್ಲುವುದರಿಂದ ಪಾರಿವಾಳಗಳು ಆಹಾರ ಹುಡುಕುವುದನ್ನೇ ಬಿಟ್ಟಿವೆ. ಅವುಗಳನ್ನು ಸೋಮಾರಿ ಮಾಡಿಬಿಟ್ಟಿದ್ದಾರೆ’ ಎಂದು ಜೊತೆ ಬೇಸರ ವ್ಯಕ್ತಪಡಿಸಿದರು
ಪಾರಿವಾಳಗಳು ಗುಂಪು ಗುಂಪಾಗಿ ಕಟ್ಟಡಗಳಲ್ಲಿ ಕೂತು ಹಿಕ್ಕೆ ಹಾಕುತ್ತಿವೆ. ಹಿಕ್ಕೆಯಲ್ಲಿನ ಯೂರಿಕ್ ಆಯಸಿಡ್ ಶಕ್ತಿ ಎಷ್ಟಿದೆ ಎಂಬುದು ಗೊತ್ತೆ. ಅದು ರಾಜಸ್ಥಾನದಿಂದ ತರಿಸಲಾದ ಮಾರ್ಬಲ್ಲುಗಳ ಹೊಳಪನ್ನೇ ಮಾಯಮಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ಹಿಕ್ಕೆ, ಪುಕ್ಕಗಳ ರಾಶಿಯೇ ಚಾಮರಾಜ ವೃತ್ತದ ಆವರಣದಲ್ಲಿ ಬೀಳುತ್ತಿದೆ. ಶಿವಕುಮಾರ್ ಮೇಯರ್ ಆಗಿದ್ದಾಗ, ಅವರ ಗಮನಕ್ಕೆ ತಂದಿದ್ದೆ. ಒಂದೆರಡು ಬಾರಿ ಸ್ವಚ್ಛಗೊಳಿಸಿದರು. ಆದರೆ, ಧಾನ್ಯ ಸುರಿಯುವವರನ್ನು ನಿಯಂತ್ರಿಸಲಿಲ್ಲ ಎಂದರು.
ನೆಟ್ ಹಾಕಬೇಕು: ಚಾಮರಾಜ ವೃತ್ತ ಸೇರಿದಂತೆ ಪಾರಿವಾಳಗಳು ಕೂರುವ ಸ್ಥಳಗಳಲ್ಲಿ ‘ನೆಟ್’ (ಬಲೆ) ಹಾಕಬೇಕು. ಅಂಬೇಡ್ಕರ್ ಪ್ರತಿಮೆ ಇರುವ ಗೋಪುರದಲ್ಲಿ ಪ್ರಯೋಗಾತ್ಮಕವಾಗಿ ಈಗಾಗಲೇ ಅಳವಡಿಸಲಾಗಿದ್ದು, ಸೌಂದರ್ಯಕ್ಕೆ ಧಕ್ಕೆಯಾಗಿಲ್ಲ. ಅಲ್ಲಿ ಪಾರಿವಾಳಗಳು ಗುಂಪುಗೂಡುವುದು ಇಲ್ಲವಾಗಿದೆ. ಅದೇ ರೀತಿ ಚಾಮರಾಜ ವೃತ್ತಕ್ಕೂ ‘ನೆಟ್’ ಹಾಕಿದರೆ ಅನುಕೂಲವಾಗಲಿದೆ ಎಂದು ರಂಗರಾಜು ತಿಳಿಸಿದರು.
ಲಂಚ ಪಡೆದ ವೈದ್ಯನಿಗೆ ನಾಲ್ಕು ವರ್ಷ ಜೈಲು!
ಮೈಸೂರು: ಮೇ 30- ರೋಗಿಯ ಸಹೋದರನ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಕೃಷ್ಣರಾಜೇಂದ್ರ ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ.ಪುಟ್ಟಸ್ವಾಮಿಗೆ ಮೈಸೂರಿನ 3ನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯ 4 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಶಿವಕುಮಾರ್ ಎಂಬುವವರು 2017 ರಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಅವರ ಶಸ್ತ್ರಚಿಕಿತ್ಸೆಗೆ ಮೂಳೆ ಶಸ್ತ್ರತಜ್ಞರಾದ ಡಾ.ಪುಟ್ಟಸ್ವಾಮಿ 40 ಸಾವಿರ ರೂ. ಲಂಚ ನೀಡುವಂತೆ ರೋಗಿಯ ಸಹೋದರ ಸಂಬಂಧಿ ದೇವರಾಜ್ ಬಳಿ ಕೇಳಿದ್ದರು. ಹಣ ನೀಡುವ ವಿಚಾರದಲ್ಲಿ ವೈದ್ಯರ ಬಳಿ ಮಾತನಾಡಿರುವುದನ್ನು ಮೊಬೈಲ್ನಲ್ಲಿ ಚಿತ್ರಿಸಿಕೊಳ್ಳಲಾಗಿತ್ತು.
ದೇವರಾಜ್ ಆರಂಭದಲ್ಲಿ 2 ಸಾವಿರ ಹಣ ನೀಡಿದ್ದರು. ಬಳಿಕ ಬಾಕಿ ಹಣ ನೀಡುವ ಮುನ್ನ ಎಸಿಪಿ ಪೊಲೀಸರಿಗೆ ದೂರು ನೀಡಿದ್ದರು. ಮತ್ತೆ 26 ಸಾವಿರ ರೂ.ಗಳನ್ನು ಡಾ.ಪುಟ್ಟಸ್ವಾಮಿಗೆ ನೀಡುತ್ತಿರುವಾಗ ಎಸಿಪಿ ಪೊಲೀಸರು ಕಾರ್ಯಾಚರಣೆ ನಡೆಸಿ ವೈದ್ಯರನ್ನು ಬಂಧಿಸಿದ್ದರು. ಎಸಿಪಿ ಇನ್ಸ್ಪೆಕ್ಟರ್ ಶೇಖರ್ ಅವರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ್ಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯ ಅವರು ವೈದ್ಯರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 4 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದ್ದಾರೆ.
ದಸರಾ ಆನೆ ಅರ್ಜುನ ಸಮಾಧಿ ವಿರೂಪ ಆರೋಪ: ಎಫ್ಐಆರ್ ದಾಖಲು!
ಹಾಸನ: ದಸರಾ ಆನೆ ಅರ್ಜುನ ಸಮಾಧಿ ವಿರೂಪ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೆಗೂ ಅತಿಕ್ರಮ ಪ್ರವೇಶ ಹಾಗೂ ಸಮಾಧಿ ಬಗೆದ ಆರೋಪದಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯ ಅರಣ್ಯಾಧಿಕಾರಿ ಎಚ್ಡಿ ಕೋಟೆಯ ನವೀನ್ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. ತಾವು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದ ನವೀನ್ ಮತ್ತು ಇತರರು, ಮೀಸಲು ಅರಣ್ಯದೊಳಗೆ ಅತಿಕ್ರಮವಾಗಿ ಪ್ರವೇಶ ಮಾಡಿ ಸಮಾಧಿಯ ಮಣ್ಣು ಬಗೆದಿದ್ದರು. ಸ್ಮಾರಕ ನಿರ್ಮಾಣಕ್ಕೆ ದರ್ಶನ್ ಕಲ್ಲು ಕಳಿಸಿದ್ದಾರೆಂದು ಹೇಳಿ ವೀಡಿಯೋ ಮಾಡಿ ಅಭಿಮಾನಿಗಳು ಹಂಚಿಕೊಂಡಿದ್ದರು.
ಸರ್ಕಾರ, ಅರಣ್ಯ ಇಲಾಖೆ ಅನುಮತಿ ಇಲ್ಲದೆ ಸ್ಮಾರಕ ನಿರ್ಮಾಣಕ್ಕೆ ಯತ್ನಿಸಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಅನಧಿಕೃತವಾಗಿ ಜನರಿಂದ ಹಣ ಸುಲಿಗೆ ಮಾಡಿ ಸಮಾಧಿ ಬಗೆದು ವಿರೂಪಗೊಳಿಸಿದ್ದಾರೆ ಎಂದು ಜನರು ಆರೋಪಿಸಿದ್ದರು. ಈ ಹಿನ್ನಲೆ ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷೆನ್ 33 ಹಾಗೂ ಕರ್ನಾಟಕ ಅರಣ್ಯ ನಿಯಮ 1969 ರ ನಿಯಮ 25-43ರ ಅಡಿ ಕೇಸ್ ದಾಖಲಿಸಲಾಗಿದೆ.