ರಾಜಕೀಯ ತಿರುವು ಪಡೆದುಕೊಂಡ ರಸ್ತೆಯಲ್ಲೇ ನಮಾಜ್ ಕೇಸ್!
– ಪ್ರಾರ್ಥನೆ ಸಲ್ಲಿಸುವ ಸಣ್ಣ ವಿಚಾರಕ್ಕೆ ಸುಮೋಟೊ ಕೇಸ್ ಹಾಕುವ ಅಗತ್ಯವಿರಲಿಲ್ಲ ಎಂದ ರಮಾನಾಥ ರೈ
– ಶರಣ್ ಪಂಪ್ ವೆಲ್ ಮೇಲೆ ಕೇಸು ದಾಖಲು!
NAMMUR EXPRESS NEWS
ಮಂಗಳೂರು: ಮಸೀದಿ ಹೊರಗಡೆ ಪ್ರಾರ್ಥನೆ ಸಲ್ಲಿಸಿರುವ ಸಣ್ಣ ವಿಚಾರಕ್ಕೆ ಸುಮೋಟೊ ಪ್ರಕರಣ ದಾಖಲಿಸುವ ಅಗತ್ಯವಿರಲಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಎಲ್ಲ ಧರ್ಮಗಳ ಕೆಲವು ಕಾರ್ಯಕ್ರಮಗಳು ರಸ್ತೆಯಲ್ಲೇ ನಡೆಯುತ್ತವೆ. ಅದನ್ನು ತಪ್ಪು ಎಂದು ಹೇಳುತ್ತ ಹೋಗಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣ, ಕೃತ್ಯ ನಡೆದಾಗಲೂ ಸುಮೋಟೊ ಪ್ರಕರಣ ಆಗಿಲ್ಲ. ಇಂಥಹ ಸಣ್ಣ ವಿಷಯವನ್ನು ರಂಪಾಟ ಮಾಡುವ ಅಗತ್ಯ ಇರಲಿಲ್ಲ. ಆದರೆ, ಈ ರೀತಿಯ ವಿಡಿಯೋ ಮಾಡಿ ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತರಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮಾತನಾಡಿ, ಜಿಲ್ಲೆಯ ಸೌಹಾರ್ದ ಕದಡುವ ಕಾನೂನುಬಾಹಿರ ಕೆಲಸಗಳು ಆದಾಗ ಸುಮೋಟೊ ಪ್ರಕರಣ ದಾಖಲಿಸುವುದು ಸಹಜ. ಆದರೆ, ಈ ರೀತಿಯ ಸಣ್ಣ ವಿಚಾರದಲ್ಲಿ ಸಂಬಂಧಪಟ್ಟವರನ್ನು ಕರೆಸಿ ಬುದ್ಧಿವಾದ ಹೇಳುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕಿತ್ತು ಎಂದರು.
ಶರಣ್ ಪಂಪ್ ವೆಲ್ ಮೇಲೆ ಕೇಸು ದಾಖಲು!
ರಸ್ತೆಯಲ್ಲಿಯೇ ನಮಾಜ್ ಸಲ್ಲಿಸುವ ಪ್ರಕರಣ ಈಗಾಗಲೇ ಹೊಸ ತಿರುವು ಪಡೆದುಕೊಂಡಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಕದ್ರಿ ಠಾಣೆ ಇನ್ಸ್ಪೆಕ್ಟರ್ನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಅಲ್ಲದೆ, ಈ ವಿಡಿಯೋವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ವಿಶ್ವ ಹಿಂದೂ ಪರಿಷತ್ನ ಶರಣ್ ಪಂಪ್ವೆಲ್ ಮೇಲೆ ಕೇಸ್ ದಾಖಲಿಸಲಾಗಿದೆ.