ಪೆನ್ ಡ್ರೈವ್ ಪ್ರಜ್ವಲ್ಗೆ ಹಾಸನ ಮತದಾರರಿಂದ ಶಿಕ್ಷೆ.!
– ಹೀನಾಯ ಸೋಲು: ಶ್ರೇಯಸ್ ಪಟೇಲ್ ಇತಿಹಾಸ ಸೃಷ್ಟಿ
– 25 ವರ್ಷದ ರಾಜಕೀಯ ಅಂತ್ಯ: ಜೆಡಿಎಸ್ ಮುಖಭಂಗ
NAMMUR EXPRESS NEWS
ಬೆಂಗಳೂರು: ದೇಶದ ಗಮನ ಸೆಳೆದಿದ್ದ, ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಹಗರಣ ಕೇಂದ್ರ ಸ್ಥಾನವಾಗಿದ್ದ ಹಾಸನ ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸದ್ಯ ಎಸ್ಐಟಿ ಕಸ್ಟಡಿಯಲ್ಲಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಭಾರೀ ಅಂತರದ ಮತಗಳಿಂದ ಗೆಲವು ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದ ಜನತೆ ಪ್ರಜ್ವಲ್ಗೆ ತಕ್ಕ ಶಿಕ್ಷೆ ಕೊಟ್ಟಿದ್ದಾರೆ. ಈ ಮೂಲಕ 25 ವರ್ಷಗಳ ಬಳಿಕ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ದೇವೇಗೌಡರ ಕುಟುಂಬದ ಬಿಗಿ ಹಿಡಿತದಿಂದ ಹಾಸನ ಕ್ಷೇತ್ರ ಕೈತಪ್ಪಿದೆ. 2019ರ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎ.ಮಂಜು 5,35,382 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು.
ಬಿಎಸ್ಪಿಯ ವಿನೋದ್ ರಾಜ್ ಕೆ.ಎಚ್ 38,761 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು..2019ರ ಚುನಾವಣೆಯಲ್ಲಿ ಜೆಡಿಎಸ್ ಶೇ.52.92ರಷ್ಟು ಮತಗಳನ್ನು ಪಡೆದಿತ್ತು. 2014ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 5,09,841 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ನ ಎ.ಮಂಜು 4,09,378 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಜೆಡಿಎಸ್ ಶೇ.44.44ರಷ್ಟು ಮತಗಳನ್ನು ಪಡೆದಿತ್ತು.