ರಾಘವೇಂದ್ರ ವಿನ್ನರ್: ವಿಜಯೋತ್ಸವ!
– ಶಿವಮೊಗ್ಗದಲ್ಲಿ ರಾಘವೇಂದ್ರ 4ನೇ ಬಾರಿಗೆ ಗೆಲುವು!
– ಗೀತಾ, ಈಶ್ವರಪ್ಪ ಅವರಿಗೆ ಮುಖಭಂಗ
– ಕೇಂದ್ರ ಮಂತ್ರಿಯಾಗುವ ದಾರಿ ಸಲೀಸು!
NAMMUR EXPRESS NEWS
ಶಿವಮೊಗ್ಗ: ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲೇ ಹೈವೋಲ್ಟೇಜ್ ಹಣಾಹಣಿಗೆ ವೇದಿಕೆಯಾಗಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಕೊನೆಗೂ ರಾಘವೇಂದ್ರ 4ನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಭಾರೀ ಸದ್ದು ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಸೋಲಾಗಿದೆ. ಜತೆಗೆ ಇಲ್ಲಿ ಈಶ್ವರಪ್ಪ ಮ್ಯಾಜಿಕ್ ಏನೂ ನಡೆಯದೆ ರಾಘವೇಂದ್ರ ಗೆಲುವು ಸಲೀಸಾಗಿದೆ. ರಾಘವೇಂದ್ರ 1.85,416 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 23 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಪ್ರಮುಖವಾಗಿ ಬಿಜೆಪಿಯ ಹಾಲಿ ಸಂಸದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ನ ಗೀತಾ ಶಿವರಾಜಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತ್ತು. ಮತದಾನ ಪೂರ್ವದಲ್ಲಿ ತ್ರಿಕೋನ ಹಣಾಹಣಿ ಲೆಕ್ಕಾಚಾರವಿತ್ತು. ಆದರೆ ಮತದಾನೋತ್ತರ ಚಿತ್ರಣ ಗಮನಿಸಿದರೆ, ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಫೈಟ್ ಏರ್ಪಟ್ಟಿತ್ತು.
ಈ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಮುಖ ನಾಯಕರಿಗೆ ಪ್ರತಿಷ್ಠೆಯಾಗಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಶಿವಮೊಗ್ಗ ಕ್ಷೇತ್ರದ ರಿಸಲ್ಟ್ ಅತ್ಯಂತ ಮಹತ್ವದ್ದಾಗಿತ್ತು. ಪುತ್ರ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮತ್ತೋರ್ವ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಮತ್ತೊಂದೆಡೆ, ಇವರ ಕುಟುಂಬದ ವಿರುದ್ದ ಮುನಿಸಿಕೊಂಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.ಈ ಎಲ್ಲ ಕಾರಣಗಳಿಂದ, ಬಿ.ವೈ.ರಾಘವೇಂದ್ರ ಗೆಲುವು ಬಿಎಸ್ವೈ ಕುಟುಂಬಕ್ಕೆ ಸಿಹಿ ತಂದಿದೆ.
ಬಂಗಾರಪ್ಪ ಕುಟುಂಬಕ್ಕೆ ಸತತವಾಗಿ ಸೋಲು!
ರಾಘವೇಂದ್ರ ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮುಖಭಂಗವಾಗಿದೆ. ಸಹೋದರಿ ಗೀತಾ ಶಿವರಾಜಕುಮಾರ್ ಅವರಿಗೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ಅವರು ಸೋಲು ಕಂಡಿದ್ದಾರೆ. ಗೀತಾ ಶಿವರಾಜಕುಮಾರ್ 2014 ರ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. ಇದೀಗ ಸರಿಸುಮಾರು 10 ವರ್ಷಗಳ ನಂತರ, ಮತ್ತೆ ಚುನಾವಣಾ ಕಣಕ್ಕಿಳಿದಿದ್ದರು.
ಈಶ್ವರಪ್ಪಗೆ ಮುಖಭಂಗ!
ಯಡಿಯೂರಪ್ಪ ಕುಟುಂಬದ ವಿರುದ್ದ ಸಮರ ಸಾರಿ ಬಂಡಾಯ ಸ್ಪರ್ಧೆ ಮಾಡಿರುವ ಕೆ.ಎಸ್.ಈಶ್ವರಪ್ಪ ಸೋತು ಮುಖಭಂಗ ಅನುಭವಿಸಿದ್ದಾರೆ.
ಎಲ್ಲೆಡೆ ವಿಜಯೋತ್ಸವ: ಸಂಭ್ರಮ
ರಾಘವೇಂದ್ರ ವಿಜಯಶಾಲಿಯಾಗುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ವಿಜಯೋತ್ಸವ ಕಂಡು ಬಂತು. ನಾಯಕರು, ಮುಖಂಡರು, ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.