ಉಡುಪಿ-ಚಿಕ್ಕಮಗಳೂರಲ್ಲಿ ಬಿಜೆಪಿ ಪಾಸ್!
– ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಗೆಲುವು
– ಪ್ರಾಮಾಣಿಕ ರಾಜಕಾರಣಿಗೆ ಒಲಿದ ಸಂಸದ ಸ್ಥಾನ
– 1,82,151 ಮತಗಳ ಅಂತರದ ಭರ್ಜರಿ ಗೆಲುವು
NAMMUR EXPRESS
ಉಡುಪಿ/ ಚಿಕ್ಕಮಗಳೂರು: ಕರಾವಳಿ ಮತ್ತು ಮಲೆನಾಡು ಸಂಗಮ ಕ್ಷೇತ್ರ ಉಡುಪಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರಿದೆ. ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಅಚ್ಚರಿಯ ಗೆಲುವು ದಾಖಲಿಸಿದ್ದಾರೆ. ಕೋಟ ಅವರು ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಂಡಿರುವವರು. ಹೀಗಾಗಿ ಜನ ಅವರ ಕೈ ಹಿಡಿದಿದ್ದಾರೆ. ಜಯಪ್ರಕಾಶ್ ಹೆಗ್ಡೆ ಸೋಲುವ ಮೂಲಕ ಕಾಂಗ್ರೆಸ್ ಮತ್ತೆ ಮುಖಭಂಗ ಅನುಭವಿಸಿದೆ. ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಯವರು 1,,82,151 ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಹಾಲಿ ಸಂಸದೆ ಶೋಭಾ ಅವರ ಮೇಲೆ ಬಿಜೆಪಿ ಕಾರ್ಯಕರ್ತರಿಗೆ ನೆಗೆಟೀವ್ ಆದ ಅಭಿಪ್ರಾಯವಿತ್ತು. ಅದೇ ಕಾರಣಕ್ಕೆ ಕೊನೆಯ ಕ್ಷಣದಲ್ಲಿ ಶೋಭಾ ಅವರ ಬದಲಿಗೆ ಕೋಟ ಶ್ರೀನಿವಾಸ್ ಪೂಜಾರಿಯನ್ನು ಕಣಕ್ಕಿಳಿಸಲಾಗಿತ್ತು. ಆದರೆ ಕೋಟ ಅವರು ಈ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಉಳಿಸಿಕೊಂಡಿದ್ದು, ಜತೆಗೆ ಬಿಲ್ಲವ ಸಮುದಾಯ ಎನ್ನುವ ಕಾರಣಕ್ಕೆ ಜಾತಿ ಲೆಕ್ಕಾಚಾರಗಳು ಈ ಕ್ಷೇತ್ರದಲ್ಲಿ ಹೆಚ್ಚು ವರ್ಕೌಟ್ ಆಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಯಾರಿಗೆ ಸೋಲು?
ಕಾಂಗ್ರೆಸ್ನಿಂದ ಕೆ.ಜಯಪ್ರಕಾಶ ಹೆಗ್ಡೆ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ, ಜನಹಿತ ಪಕ್ಷದ ಅಭ್ಯರ್ಥಿ ಸುಪ್ರೀತ್ ಕುಮಾರ್ ಪೂಜಾರಿ, ಕರುನಾಡ ಸೇವಕ ಪಕ್ಷದ ಅಭ್ಯರ್ಥಿ ಶಬರೀಶ್ ಆರ್. ಸಮಾಜ ಪಕ್ಷದ ಅಭ್ಯರ್ಥಿ ಎಂ.ಕೆ. ದಯಾನಂದ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸಚಿನ್ ಬಿಕೆ ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಸುಧೀರ್ ಕಾಂಚನ್ ಮತ್ತು ವಿಜಯಕುಮಾರ್ ಕಣದಲ್ಲಿದ್ದು ಸೋಲು ಕಂಡಿದ್ದಾರೆ.
ಉಡುಪಿ -ಚಿಕ್ಕಮಗಳೂರು ಹಿಂದೇನಾಗಿತ್ತು?
ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಅಂತರ 3,49,599 ಮತಗಳು ಆಗಿತ್ತು.ಕಳೆದ ಲೋಕಸಭೆ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ನಲ್ಲಿದ್ದ ಪ್ರಮೋದ್ ಮಧ್ವರಾಜ್ ಅವರನ್ನು 3,49,599 ಮತಗಳಿಂದ ಸೋಲಿಸಿದ್ದರು. ಶೋಭಾ 7,18,916 ಮತಗಳನ್ನು ಗಳಿಸಿದ್ದರೆ, ಪ್ರಮೋದ್ 3,69,317 ಮತ ಗಳಿಸಿದ್ದರು.
ಯಾರಿಗೆ ಎಷ್ಟು ಮತ?
ಬಿಜೆಪಿ ಕೋಟಾ ಶ್ರೀನಿವಾಸ್ ಪೂಜಾರಿ: 6,34,746 ಮತ
ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ -4,15,051 ಮತ
ನೋಟಾ- 9213
ಗೆಲುವಿನ ಅಂತರ: 1,82,151 ಮತಗಳ ಅಂತರದ ಭರ್ಜರಿ ಗೆಲುವು