ಕುತೂಹಲ ಘಟ್ಟಕ್ಕೆ ಭಾರತ ರಾಜಕೀಯ!
– ಮೋದಿ ರಾಜೀನಾಮೆ ಅಂಗಿಕಾರ
– ಕಿಂಗ್ ಮೇಕರ್ ಚಂದ್ರಬಾಬು ಎನ್. ಡಿ. ಎಗೆ ಸಾಥ್!
– ಹೊಸ ಸರ್ಕಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಚಂದ್ರಬಾಬು ನಾಯ್ಡು ಬೇಡಿಕೆ
– ಬಿಜೆಪಿಗೆ ಬ್ರೇಕ್ ಹಾಕಿದ ಕಾಂಗ್ರೆಸ್ ಪ್ಲಾನ್ ಏನು..?
– ಪ್ರಾದೇಶಿಕ ಪಕ್ಷಗಳು ಈಗ ದೇಶದಲ್ಲಿ ಕಿಂಗ್!
– ಎಲ್ಲಾ ಪಕ್ಷಗಳಿಂದಲೂ ಸಚಿವಗಿರಿ ಡಿಮ್ಯಾಂಡ್!
NAMMUR EXPRESS NEWS
ದೇಶದಲ್ಲಿ ರಾಜಕಾರಣ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ. ಇಂದು ಸಂಜೆ ಎನ್ ಡಿ ಎ ಸಭೆ ನಡೆಸಲಿದೆ. ಇಂಡಿಯಾ ಕೂಡ ಸಭೆ ಕರೆದಿದೆ. ಎಲ್ಲಾ ಪಕ್ಷದ ವರಿಷ್ಟರು ಈಗ ದೆಹಲಿ ಹಾರುತ್ತಿದ್ದಾರೆ.
ಪ್ರಸ್ತುತ ರಾಜಕಾರಣದಲ್ಲಿ ಕಿಂಗ್ ಮೇಕರ್, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್ಡಿಎಗೆ ತಮ್ಮ ಬೆಂಬಲವನ್ನು ಪುನರುಚ್ಛರಿಸಿದ್ದಾರೆ ಹಾಗೂ ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಲು ತಮ್ಮ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಹೇಳಿದ್ದಾರೆ. ಎನ್ಡಿಎ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ಚಂದ್ರಬಾಬು ನಾಯ್ಡು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೊಸ ಸರ್ಕಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬೇಡಿಕೆ ಇರಿಸಿದ್ದಾರೆ. ಲೋಕಸಭೆಯಲ್ಲಿ ಟಿಡಿಪಿ ಪಕ್ಷದ ಸಂಸದರನ್ನ ಸ್ಪೀಕರ್ ಮಾಡಬೇಕು. ಸಂಪುಟದಲ್ಲಿ ಟಿಡಿಪಿಗೆ ಒಂದು ಅಥವಾ ಎರಡು ಸ್ಥಾನ ನೀಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಕೇಂದ್ರದಲ್ಲಿ ಅಟಲ್ ಸರ್ಕಾರ ಇದ್ದಾಗ ಟಿಡಿಪಿ ಸಂಸದರಾಗಿದ್ದ ಜಿ ಎಂ ಬಾಲಯೋಗಿ ಸ್ಪೀಕರ್ ಆಗಿದ್ದರು ಎಂದು ಚಂದ್ರ ಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.
ಮೈತ್ರಿ ಪಕ್ಷಗಳಿಂದ ಬೆಂಬಲ: ಕೊನೆ ಗಳಿಗೆ ಮ್ಯಾಜಿಕ್!?
ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಪಡೆದಿರುವುದರಿಂದ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ವರದಿಯಾಗಿವೆ. ಇತ್ತ ಕಾಂಗ್ರೆಸ್ ಕೂಡ ಅಧಿಕಾರ ರಚನೆಗೆ ಪ್ರಯತ್ನ ಶುರು ಮಾಡಿದೆ. ಇಂದು ಎನ್ಡಿಎ ಮತ್ತು ಇಂಡಿ ಒಕ್ಕೂಟ ಮಹತ್ವದ ಸಭೆಯನ್ನು ನಡೆಸಲಿವೆ.
ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 294 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸರ್ಕಾರ ರಚನೆಗೆ ಬೇಕಿರುವ 272 ಬಹುಮತದ ಗುರಿಗಿಂತ 22 ಸ್ಥಾನಗಳಲ್ಲಿ ಮುಂದಿದೆ. ಇತ್ತ ಇಂಡಿ ಒಕ್ಕೂಟ 234 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಬಹುಮತದ ಗುರಿಗಿಂತ 38 ಸ್ಥಾನಗಳು ಕಡಿಮೆ ಇದೆ. ಇದೀಗ ಸರ್ಕಾರ ರಚನೆಯಲ್ಲಿ ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಬಿಹಾರದ ಹಾಲಿ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಇನ್ನು ಈ ಎರಡು ಪಕ್ಷಗಳು ಬಿಜೆಪಿ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ಟಿಡಿಪಿ ಮತ್ತು ಜೆಡಿಯು ಎನ್ಡಿಎ ಮೈತ್ರಿಕೂಟದ ಭಾಗವಾಗಿವೆ. ಇಂಡಿ ಒಕ್ಕೂಟ ಸರ್ಕಾರ ರಚನೆ ಮಾಡಬೇಕಾದರೆ ಟಿಡಿಪಿ ಮತ್ತು ಜೆಡಿಯು ಬೆಂಬಲದ ಅವಶ್ಯಕತೆ ಇದೆ. ಈಗಾಗಲೇ ಉಭಯ ಪಕ್ಷದ ಪ್ರಮುಖ ನಾಯಕರನ್ನು ಸಂಪರ್ಕಿಸಲು ಕಾಂಗ್ರೆಸ್ ಯತ್ನಿಸಿದೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ನಿತೇಶ್ ಕುಮಾರ್ ಇಬ್ಬರು ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬಿಜೆಪಿಗೆ ಬ್ರೇಕ್ ಹಾಕಿದ ಕಾಂಗ್ರೆಸ್
ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕುವಲ್ಲಿ ಕಾಂಗ್ರೆಸ್ ಜತೆಗೆ ಕೆಲವು ಪ್ರಾದೇಶಿಕ ಪಕ್ಷಗಳೂ ಯಶಸ್ವಿಯಾಗಿವೆ. ಕಾಂಗ್ರೆಸ್ 2014 ಹಾಗೂ 2019 ರಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಈ ಸಲ ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದಿದೆ. ಒಟ್ಟಾರ ಶೇ.2.33ರಷ್ಟು ಮತ ಹೆಚ್ಚಳ ಮಾಡಿಕೊಂಡಿರುವ ಕಾಂಗ್ರೆಸ್ ಸಂಖ್ಯಾಬಲವನ್ನು 52 ರಿಂದ 998 ಹೆಚ್ಚಿಸಿಕೊಂಡಿದೆ. ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಂಡಿದೆ. ಕೇರಳ, ತಮಿಳುನಾಡಿನಲ್ಲಿ ಕಳೆದ ಬಾರಿ ಗೆದ್ದಷ್ಟೇ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಶೇ.1ರಷ್ಟು ಮತ ಪ್ರಮಾಣ ಕಳೆದುಕೊಂಡಿರುವ ಬಿಜೆಪಿ 64 ಸ್ಥಾನ ಕಳೆದುಕೊಂಡಿದೆ. ಕಾಂಗ್ರೆಸ್ ಮುಕ್ತ ಭಾರತದ ಬಿಜೆಪಿ ಮಾತನ್ನು ಮತದಾರರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಕುಗ್ಗಿದ್ದ ಪ್ರಾದೇಶಿಕ ಪಕ್ಷಗಳೇ ಕಿಂಗ್ ಮೇಕರ್ಸ್!
2019ರ ಚುನಾವಣೆಯಲ್ಲಿ ಕುಗ್ಗಿದ್ದ ಪ್ರಾದೇಶಿಕ ಪಕ್ಷಗಳ ಬಲ ಸಹ ಈ ಸಲ ಹಿಗ್ಗಿದೆ. ಮುಖ್ಯವಾಗಿ ಉತ್ತರ, ಪೂರ್ವ, ಪಶ್ಚಿಮ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಬಿಜೆಪಿಗೆ ಪೈಪೋಟಿ ನೀಡಿವೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ 5 ಸ್ಥಾನಗಳಿಂದ 38 ಸ್ಥಾನಕ್ಕೆ ಜಿಗಿದಿದೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಅಖಿಲೇಶ್ ಯಾದವ್ ಅವರು ಯಾದವ- ಮುಸ್ಲಿಂ ಮತಗಳನ್ನು ಕ್ರೋಡೀಕರಿಸಿ ಬಿಜೆಪಿಗೆ ಸೋಲುಣಿಸುವಲ್ಲಿ ಸಫಲರಾಗಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಇಬ್ಬಾಗಗೊಂಡಿದ್ದ ಶಿವಸೇನೆ 9 (ಉದ್ದವ್ ಬಣ), ಎನ್ಸಿಪಿ 7 (ಶರದ್ ಬಣ) ಬಣಗಳು ಚುನಾವಣೆಯಲ್ಲಿ ಗೆದ್ದು ಬೀಗಿವೆ. ಬಿಜೆಪಿ ನೇತೃತ್ತದ ‘ಮಹಾಯುತಿ’ ಮೈತ್ರಿಯನ್ನು ಮಣಿಸಿರುವ ಪ್ರಾದೇಶಿಕ ಪಕ್ಷಗಳು ಐಎನ್ಡಿಐಎಗೆ (29 ಸ್ಥಾನ) ಶಕ್ತಿ ತುಂಬಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತನ್ನ ಬಲವನ್ನು ವೃದ್ಧಿಸಿಕೊಂಡಿದೆ. ಚುನಾವಣೆಯಲ್ಲಿ ಏಕಾಂಗಿ ಯಾಗಿ ಹೋರಾಟ ನಡೆಸಿದ ಮಮತಾ ಬ್ಯಾನರ್ಜಿ ಅವರು ಬಿಜೆಪಿಯನ್ನು ಕಟ್ಟಿಹಾಕುವಲ್ಲಿ ಸಫಲರಾಗಿದ್ದಾರೆ. 2019ರಲ್ಲಿ 22 ಸ್ಥಾನ ಗಳಿಸಿದ್ದ ಟಿಎಂಸಿ ಈ ಬಾರಿ 29 ಸ್ಥಾನ ಪಡೆದಿದೆ. 18 ಸ್ಥಾನ ಗಳಿಸಿದ್ದ ಬಿಜೆಪಿ 12ಕ್ಕೆ ಕುಸಿದಿದೆ.
ಕಾಣದ ರಾಮಮಂದಿರ ಪ್ರಭಾವ, ಹಿಂದೂ ತಂತ್ರಗಾರಿಕೆ ಸೋಲು
ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರದ ವಿಚಾರ ಎಳ್ಳಷ್ಟೂ ಪ್ರಭಾವ ಬೀರಿಲ್ಲ. ಜ.22 ರಂದು ಉದ್ಘಾಟನೆಗೊಂಡ ವೇಳೆ ದೇಶಾದ್ಯಂತ ಮೊಳಗಿದ್ದ ಭಕ್ತಿಯ ಕಹಳೆ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಿಲ್ಲ. ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಯಾವುದೇ ಪ್ರಭಾವ ಬೀರುವಲ್ಲಿ ವಿಫಲವಾಗಿದೆ. ರಾಮ ಮಂದಿರ ಇದ್ದ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಸೋಲು ಅನುಭವಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
-ಉಚಿತ ಉಡುಗೊರೆಗೂ ಮತ
ಅಭಿವೃದ್ಧಿ ವರ್ಸಸ್ ಉಚಿತ ಉಡುಗೊರೆ ವಿಚಾರದಲ್ಲಿ ಮತದಾರರಲ್ಲಿ ಎರಡು ಅಭಿಪ್ರಾಯ ವ್ಯಕ್ತವಾದಂತಿದೆ. ಚುನಾವಣೆ ಗೆಲುವಿಗೆ ಅಭಿವೃದ್ಧಿ ಮಾತ್ರ ಮಾನದಂಡವಲ್ಲ, ಉಚಿತ ಉಡುಗೊರೆಗಳು ಬೇಕು ಎಂಬ ಸಂದೇಶ ಫಲಿತಾಂಶದಲ್ಲಿ ಕಂಡುಬಂದಿದೆ. ವಿಶೇಷವಾಗಿ ರಾಹುಲ್ ಗಾಂಧಿ ಅವರು ಘೋಷಿಸಿದ ಮಹಿಳೆಯರ ಖಾತೆಗಳಿಗೆ ಪ್ರತಿ ತಿಂಗಳು 8,500 ರೂ. ಜಮಾ ಭಾರಿ ಪರಿಣಾಮ ಬೀರಿದೆ. ತ್ರಿವಳಿ ತಲಾಕ್ ನಿಷೇಧದ ಕಾರಣ ಮುಸ್ಲಿಂ ಮಹಿಳೆಯರ ಮತಗಳು ಬಿಜೆಪಿಯತ್ತ ವಾಲುವುದನ್ನು ತಡೆಯುವಲ್ಲಿ ಈ ತಂತ್ರ ಯಶಸ್ವಿಯಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆರಂಭವಾದ ಉಚಿತ ಭಾಗ್ಯ ಯೋಜನೆಗಳು ಸಹ ಮತದಾರರ ಮನಗೆಲ್ಲಬಲ್ಲವು ಎಂಬುದಕ್ಕೆ ಫಲಿತಾಂಶ ಸಾಕ್ಷಿಯಾಗಿದೆ.
ಯುವರಾಜ ಜೋಡಿಯ ಮೋಡಿ!
ಉತ್ತರ ಪ್ರದೇಶದಲ್ಲಿ ‘ಯುವರಾಜ’ರ ಜೋಡಿ ಸಖತ್ ಮೋಡಿ ಮಾಡಿದೆ. ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಅವರು ‘ಆಪೈ ಲಡ್ಡೆ’ (ನಿಮ್ಮ ಹುಡುಗರು) ಹೆಸರಿನಲ್ಲಿ ಮತ ಕೇಳಿರುವುದು ಮತದಾರರ ಮನೆಗೆಲ್ಲುವಲ್ಲಿ ಸಫಲವಾಗಿದೆ. ನ್ಯಾಯಯಾತ್ರೆಯಲ್ಲಿ ಒಂದಾಗಿದ್ದ ಜೋಡಿ, ಚುನಾವಣಾ ಪ್ರಚಾರದಲ್ಲಿ ಜತೆಜತೆಯಾಗಿ ಹೆಜ್ಜೆ ಹಾಕಿತು. ಮೋದಿಯ ಕುಟುಂಬವಾದದ ಆರೋಪವನ್ನು ಓವರ್ ಟೇಕ್ ಮಾಡುವಲ್ಲಿ ಸಫಲವಾಗಿದೆ. ಮುಖ್ಯವಾಗಿ ಇಬ್ಬರೂ ಚುನಾವಣಾ ಕಣಕ್ಕೆ ಇಳಿಯುವ ಮೂಲಕ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಹೊಸ ಶಕ್ತಿ ತುಂಬಿದ್ದರು. ಇಬ್ಬರ ಸ್ಪರ್ಧೆಯಿಂದ ಇಡೀ ಉತ್ತರ ಪ್ರದೇಶದ ಚಿತ್ರಣವೇ ಬದಲಾಯಿತು ಐ ಏನ್ ಡಿ ಐ ಎ ಭರ್ಜರಿ ಫಸಲು ಪಡೆಯಿತು