ಸೋಲಿನ ನೈತಿಕ ಹೊಣೆ ನಾನೇ ಹೊರುವೆ!
– ಮುಂದಿನ ದಿನಗಳಲ್ಲಿ ಮತ್ತಷ್ಟು ಪಕ್ಷ ಸಂಘಟನೆಗೆ ಶ್ರಮಿಸುವೆ
– ದಕ್ಷಿಣ ಕನ್ನಡ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್
– ಚೌಟ ಅವರಿಗೆ ಅಭಿನಂದನೆ ಸಲ್ಲಿಸಿದ ಯುವ ನಾಯಕ
NAMMUR EXPRESS NEWS
ಮಂಗಳೂರು: ಕರಾವಳಿಯಲ್ಲಿ ಪ್ರತಿಕೂಲ ವಾತಾವರಣದ ನಡುವೆ ಪಕ್ಷ ಉತ್ತಮ ರೀತಿಯ ಸಾಧನೆ ಮಾಡಿರುವ ತೃಪ್ತಿ ತಂದಿದೆ. ಜತೆಗೆ ಟಿಕೆಟ್ ಘೋಷಣೆಯಾದ ಬಳಿಕ ಕೆಲವೇ ಕೆಲವು ದಿನಗಳಲ್ಲಿ ತಲುಪುವ ಮೂಲಕ ಜಿಲ್ಲೆಯ 6.15 ಮತದಾರರ ಮನಸ್ಸು ಗೆಲ್ಲಲು ಸಾಧ್ಯವಾಗಿದೆ ಎಂದು ಪರಾಜಿತ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಸಂಗಘಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಇದೇವೇಳೆ ನೂತನ ಸಂಸದರಾಗಿ ಆಯ್ಕೆಯಾಗಿರುವ ಬ್ರಿಜೇಶ್ ಚೌಟ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿನ ಎಲ್ಲ ಸಮಗ್ರ ಅಭಿವೃದ್ಧಿ ಕಾರ್ಯಗಳು ಹಾಗೂ ಕೋಮು ಸೌಹಾರ್ದತೆಗೆ ಒತ್ತು ನೀಡುವ ಸಂಸದರನ್ನು ಎಲ್ಲ ರೀತಿಯಿಂದಲೂ ಬೆಂಬಲಿಸುವುದಾಗಿ ಹೇಳಿದರು.
ಈ ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ಕಾರ್ಯಕರ್ತರು ನೀಡುರವ ಬೆಂಬಲವನ್ನು ಎಂದಿಗೂ ಮರೆಯುವಂತಿಲ್ಲ. ನಿನ್ನೆ ರಾಷ್ಟ್ರೀಯ ನಾಯಕರು ಕೂಡ ಕರೆ ಮಾಡಿ ನನ್ನ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಯು ಫೈಟ್ ಲೈಕ್ ಎ ಲಯನ್ ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ನಾಯಕರು ಹಾಗೂ ಕಾರ್ಯಕರ್ತರ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಪದ್ಮರಾಜ್ ನುಡಿದರು.
ಈ ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತಿದ್ದೇನೆ. ಆದರೆ, ಈ ಸೋಲಿನಿಂದ ನಾನು ಸುಮ್ಮನಾಗುವುದಿಲ್ಲ. ಪಕ್ಷ ಸಂಘಟನೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಪಡಿಸುವುದಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಯಾವ ರೀತಿಯಲ್ಲಿ ಮನೆಯ ಪ್ರತಿ ಸದಸ್ಯನನ್ನು ಸಂಘಟನಾತ್ಮಕವಾಗಿ ಹೇಗೆ ತಲುಪಲು ಸಾಧ್ಯ ಎಂಬುದನ್ನು ಬಿಜೆಪಿ ಪಕ್ಷ ಸಂಘಟನೆಯಿಂದ ಕಲಿಯುವುದು ಬಹಳ ಇದೆ. ಒಳ್ಳೆಯ ಅಂಶಗಳನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ ಎಂದರು.
ಎಸ್ಡಿಪಿಐಯವರು ಅಸ್ಪೃಶ್ಯರಲ್ಲ. ಈ ಹಿಂದೆ ಪಂಚಾಯತ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಧ್ಯಕ್ಷರಾಗಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇದೆ ಎಂದು ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿದರು.