ಚಿಕ್ಕಮಗಳೂರು ಟಾಪ್ ನ್ಯೂಸ್
ಶ್ರೀನಿವಾಸ್ ಪೂಜಾರಿ 100 ಕೋಟಿ ಅವ್ಯವಹಾರ: ಆರೋಪ
– ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ: ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ
– ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ!
NAMMUR EXPRESS NEWS
ಚಿಕ್ಕಮಗಳೂರು: ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ ಆಗಿದೆ ಎಂದು ಬೋವಿ ನಿಗಮದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಆರೋಪ ಮಾಡಿದ್ದಾರೆ. ಉಡುಪಿ-ಚಿಕ್ಕಮಗಳೂರು ನೂತನ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಸಚಿವರಾಗಿದ್ದಾಗ ಹಗರಣ ನಡೆದಿದೆ. ಬೋವಿ ನಿಗಮದ ಹಗರಣವನ್ನು ಸಿಐಡಿ ತನಿಖೆಗೆ ನೀಲಾಗಿದೆ. ಪ್ರಕರಣ ಸಂಬಂಧ ಇಬ್ಬರ ಕೊಲೆ ಆಗಿದೆ ಎಂದು ಗೂಳಿಹಟ್ಟಿ ಶೇಖರ್ ಆರೋಪ ಮಾಡಿದ್ದಾರೆ. ಸಿಬಿಐ ತನಿಖೆ ಬೇಡ, ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಕೋಟ ಶ್ರೀನಿವಾಸ್ ಪೂಜಾರಿಯಂಥ ಪ್ರಾಮಾಣಿಕರು ದೇಶದಲ್ಲಿಲ್ಲ. ಈಗ 50-60 ಕೋಟಿ ಆಸ್ತಿ ಮಾಡಿದ್ದು ಎಲ್ಲಿಂದ ಬಂತು? ಎಸ್ಟಿ ನಿಗಮ, ಬೋವಿ ನಿಗಮ ಎಲ್ಲ ಹಗರಣಗಳ ಬಗ್ಗೆ ತನಿಖೆ ಮಾಡಿ. ಸಿದ್ದರಾಮಯ್ಯ ಸಿಎಂ ಆದ ಬಳಿಕ ತನಿಖೆ ಸ್ಥಗಿತ ಆಗಿದೆ. ಬಿಎಸ್ ಯಡಿಯೂರಪ್ಪ ಕೇಸ್ ತನಿಖೆ ಮಾಡದೆ ಯಾಕೆ ಮುಚ್ಚಿ ಹಾಕಿದ್ರಿ? ದೂರುದಾರ ಮಹಿಳೆ ಸಾವಿಗೀಡಾದ ಸುದ್ದಿ ಎಲ್ಲೆಡೆ ಬಂದಿದೆ. ಪ್ರಜ್ವಲ್ ಕೇಸ್ ಮಾತ್ರ ತನಿಖೆ ಮಾಡ್ತೀರಾ ಎಂದು ಶೇಖರ್ ಕಿಡಿಕಾರಿದ್ದಾರೆ.
ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ : 28 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ವಶಕ್ಕೆ:
ಚಿಕ್ಕಮಗಳೂರು : ಮನೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು ಆತನಿಂದ 28 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಹಾಸನ ನಗರದ ರಿಯಾಝ್ ಖಾನ್ (54) ಬಂಧಿತ ಆರೋಪಿಯಾಗಿದ್ದು, ಆರೋಪಿಯಿಂದ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಬಂಧಿತನಿಂದ 350 ಗ್ರಾಂ.ಚಿನ್ನಾಭರಣ, 1ಕೆ.ಜಿ.788 ಗ್ರಾಂ. ಬೆಳ್ಳಿಯ ಆಭರಣ ಹಾಗೂ 4ಕೆ.ಜಿ ಕಂಚಿನ ಪಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ನಗರ ಠಾಣಾ ವ್ಯಾಪ್ತಿಯ ಕೋಟೆ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರು ಮನೆಗೆ ಬೀಗಹಾಕಿ ಬೇರೆ ಕಡೆಗೆ ತೆರಳಿದ್ದರು. ಮರುದಿನ ಬಂದು ನೋಡಿದಾಗ ಮನೆಯ ಹಿಂಬಾಗಿಲು ಮುರಿದು ಲಾಕರ್ ನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಆರೋಪಿ ರಿಯಾಝ್ ಖಾನ್ನನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಮನೆ ಕಳ್ಳತನದ ಆರೋಪಿ ರಿಯಾಝ್ ಖಾನ್ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ 12 ಪ್ರಕರಣ, ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣ ಸೇರಿದಂತೆ ಒಟ್ಟು 17 ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ