-ಕರಾವಳಿಯಲ್ಲಿ ಜಾಸ್ತಿಯಾಗುತ್ತಿದೆ ಗಾಂಜಾ ಅಮಲು!
-ಮಂಗಳೂರಿನಲ್ಲಿ ಗಾಂಜಾ ಸೇವಿಸಿ ತೂರಾಡುತ್ತಿದ್ದವನ ಬಂಧನ
NAMMUR EXPRESS NEWS
ಕರಾವಳಿ ಭಾಗದಲ್ಲಿ ಗಾಂಜಾ ಮಾರಾಟ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಈ ಜಾಲಕ್ಕೆ ಸೆಳೆದುಕೊಳ್ಳುವ ಪ್ರಯತ್ನ ರಾಜಾರೋಷವಾಗಿ ನಡೆಯುತ್ತಿದೆ. ಪೊಲೀಸರು ಎಷ್ಟೇ ಆರೋಪಿಗಳನ್ನು ಬಂಧಿಸಿದರೂ ಗಾಂಜಾ ಮಾರಾಟ ಹಾಗೂ ಸೇವನೆಗೆ ಕರಾವಳಿ ಭಾಗದಲ್ಲಿ ಕಡಿವಾಣ ಬೀಳದಿರುವುದು ಆತಂಕದ ವಿಚಾರ. ನಿನ್ನೆಯಷ್ಟೇ ಉಡುಪಿಯ ಮಣಿಪಾಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಅಪಾರ್ಟ್ಮೆಂಟ್ನಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಕೇರಳದ ಮೂಲದ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದರು.
ಈ ಪ್ರಕರಣದ ಬೆನ್ನಲ್ಲೇ ಮಂಗಳೂರಿನಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ಲಾಲ್ಬಾಗ್ನ ಬಳಿ ತೂರಾಡುತ್ತ ನಿಂತಿದ್ದ ಸುಳ್ಯ ಅಲೆಟ್ಟಿ ಗ್ರಾಮದ ಪೂಜಿತ್ ಸಾಗರ್(28) ಎಂಬಾತನನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಜೂ.5ರಂದು ನಗರದ ಧಕ್ಕೆ ಬಳಿ ಗಾಂಜಾ ಸೇವನೆ ಮಾಡಿದ್ದ ಬಂಟ್ವಾಳದ ಲೋಲಾಕ್ಷ(35) ಎಂಬಾತನನ್ನು ಬಂದರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.