ಮೋದಿ ಸರ್ಕಾರದಲ್ಲಿ ಕರ್ನಾಟಕಕ್ಕೆ ಬಂಪರ್.!
– ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ ಉಲ್ಟಾ ಪಲ್ಟಾ
– ರಾಜ್ಯಕ್ಕೆ ಹೊಸ ಹೊಸ ಯೋಜನೆಗಳ ನಿರೀಕ್ಷೆ
– ಜಾತಿ, ರಾಜಕೀಯ ಲೆಕ್ಕಾಚಾರ ಏನು…?!
NAMMUR EXPRESS NEWS
ಬೆಂಗಳೂರು: ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಎನ್ಡಿಎ ಅಧಿಕಾರಕ್ಕೆ ಬಂದಿದೆ.
ಬಿಜೆಪಿ ನೇತೃತ್ವದಲ್ಲಿ ಎನ್ಡಿಎ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಮೋದಿ ಹಾಗೂ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದಿಂದ ಐವರಿಗೆ ಅಧಿಕಾರ ದೊರಕಿದೆ. ಈ ಹಿಂದಿನ ಸರ್ಕಾರದಲ್ಲಿ ಕರ್ನಾಟಕದಿಂದ ಮಂತ್ರಿಗಳಾಗಿ ನಿರ್ಮಲಾ ಸೀತಾರಾಮನ್, ಪ್ರಲ್ಜಾದ ಜೋಶಿ, ಶೋಭಾ ಕರಂದ್ಲಾಜೆ ಮತ್ತೊಂದು ಬಾರಿ ಅವಕಾಶ ಪಡೆದುಕೊಂಡಿದ್ಧಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಿತ್ರ ಪಕ್ಷ ಜೆಡಿಎಸ್ ಕೋಟಾದಲ್ಲಿ ಸಚಿವರಾದರೆ, ಮಾಜಿ ಸಚಿವ ಹಾಗೂ ತುಮಕೂರು ಕ್ಷೇತ್ರದಿಂದ ಸಂಸದರಾಗಿರುವ ವಿ.ಸೋಮಣ್ಣ ಅವರು ಕೇಂದ್ರದಲ್ಲಿ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಆದರೆ ಇನ್ನು ಖಾತೆ ಹಂಚಿಕೆ ಆಗಿಲ್ಲ.
ಶೋಭಾ ಕರಂದ್ಲಾಜೆ ಹಾಗೂ ಸೋಮಣ್ಣ ಅವರು ರಾಜ್ಯ ಸಚಿವರಾದರೆ ಇನ್ನು ಮೂವರು ಸಂಪುಟ ದರ್ಜೆ ಸಚಿವರು. ಇನ್ನು ಶೋಭಾ, ಸೋಮಣ್ಣ ಅವರಿಗೆ ಮಣೆ ಹಾಕಿರುವುದು ರಾಜ್ಯ ಬಿಜೆಪಿ ನಾಯಕರ ಅಚ್ಚರಿಗೆ ಕಾರಣವಾಗಿದ್ದು, ಬಿಜೆಪಿ ನಾಯಕರ ಲೆಕ್ಕಾಚಾರ ತಪ್ಪಿದೆ.
ಒಕ್ಕಲಿಗ ಸಮುದಾಯದಲ್ಲಿ ಶೋಭಾ ಕರಂದ್ಲಾಜೆ, ಬ್ರಾಹ್ಮಣ ಸಮುದಾಯದಲ್ಲಿ ಪ್ರಹ್ಲಾದ್ ಜೋಶಿ, ಲಿಂಗಾಯತ ಸಮುದಾಯದಲ್ಲಿ ವಿ. ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಉಳಿದಂತೆ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿ ಎನ್ಡಿಎ ಮೈತ್ರಿಕೂಟ ಸೇರ್ಪಡೆಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ (ಒಕ್ಕಲಿಗ ಸಮುದಾಯ) ನೀಡಲಾಗಿದೆ. ಉಳಿದಂತೆ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗುತ್ತದೆ. ರಾಜ್ಯಕ್ಕೆ ಹೆಚ್ಚಿನ ಯೋಜನೆ ಬರುವ ನಿರೀಕ್ಷೆ ಇದೆ.
ನಿರ್ಮಲಾ ಸೀತಾರಾಮನ್ ಹಾಗೂ ಶೋಭಾ ಕರಂದ್ಲಾಜೆಗೆ ಮತ್ತೆ ಸಚಿವ ಸ್ಥಾನ ಸಿಗಬಹುದು ಎಂಬ ಊಹಿಸಿರಲಿಲ್ಲ. ಆದ್ರೆ, ಕೊನೆ ಕ್ಷಣದಲ್ಲಿ ಶೋಭಾ, ಕುಮಾರಣ್ಣ, ಸೋಮಣ್ಣ, ಜೋಶಿ, ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದಿಂದ ಸಚಿವ ಸ್ಥಾನ ನೀಡಲಾಗುತ್ತಿದೆ. ಈ ಪೈಕಿ ಸೋಮಣ್ಣ, ಶೋಭಾ ಅವರಿಗೆ ಮಣೆ ಹಾಕಿರುವುದರಿಂದ ರಾಜ್ಯ ನಾಯಕರು ಶಾಕ್ ಆಗಿದ್ದಾರೆ.
ಲಿಂಗಾಯತ ಸಮುದಾಯದ ರೇಸ್ ನಲ್ಲಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ, ಪಿಸಿ ಗದ್ದಿ ಗೌಡರ್ ಮುಂಚೂಣಿಯಲ್ಲಿ ಇದ್ದರು. ಮೂವರು ಪ್ರಮುಖ ಸಂಸದರು ಆಕಾಂಕ್ಷಿಗಳಿದರೂ ಸಹ ವಿ.ಸೋಮಣ್ಣ ಅವರಿಗೆ ಹೈಕಮಾಂಡ್ ಮಣೆ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ.
ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಗಳಿದ್ದವು. ಅಲ್ಲದೇ ತಮ್ಮ ಪುತ್ರನಿಗೆ ಈ ಬಾರಿ ಕೇಂದ್ರ ಸಚಿವ ಸ್ಥಾನ ನೀಡಬೇಕೆಂದು ಖುದ್ದು ಯಡಿಯೂರಪ್ಪ ಅವರು ಲಾಬಿ ನಡೆಸಿದ್ದರು. ಆದ್ರೆ, ಹೈಕಮಾಂಡ್ ಯಡಿಯೂರಪ್ಪ ಬೇಡಿಕೆಗೆ ಮನ್ನಣೆ ನೀಡಿಲ್ಲ.
ಯಾವೊಬ್ಬ ದಲಿತ ಸಂಸದಗೂ ಸಚಿವ ಸ್ಥಾನ ಸಿಕ್ಕಿಲ್ಲ. ಒಬಿಸಿ ಕೋಟಾದಲ್ಲಿ ಸಚಿವ ಸ್ಥಾನದ ಆಸೆಯಲ್ಲಿ ಇದ್ದ ಕೋಟಾ ಶ್ರೀನಿವಾಸ ಪ್ರಸಾದ್ ಮತ್ತು ಪಿ.ಸಿ. ಮೋಹನ್ ಅವರಿಗೂ ಅದೃಷ್ಟ ಒಲಿದಿಲ್ಲ.