ಟಾಪ್ 3 ನ್ಯೂಸ್ ಕರಾವಳಿ
ಮಂಗಳೂರು ದೈವಸ್ಥಾನದ ಕಂಬಗಳಿಗೆ ಸಿಡಿಲು!
– ಬೋಳೂರಿನ ಶ್ರೀ ಜಾರಂದಾಯ ದೈವಸ್ಥಾನದ ಕಂಬಗಳಿಗೆ ಹಾನಿ
– ಉಳ್ಳಾಲ: ಬೀಚ್ಗೆ ವಿಹಾರಕ್ಕೆ ಬಂದಿದ್ದವರು ನೀರಲ್ಲಿ ಮುಳುಗಿ ಸಾವು
– ಕಾಸರಗೋಡು: ನಿಲ್ದಾಣದಲ್ಲಿ ಬಸ್ನಡಿಗೆ ಸಿಲುಕಿ ಮಹಿಳೆ ಸಾವು
NAMMUR EXPRESS NEWS
ಮಂಗಳೂರು: ಮುಂಜಾನೆ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಹಲವೆಡೆ ಸಿಡಿಲು ಬಡಿದು ಹಾನಿಯಾಗಿದೆ. ಮಂಗಳೂರಿನ ಬೋಳೂರಿನಲ್ಲಿರುವ ಶ್ರೀ ಜಾರಂದಾಯ ದೈವಸ್ಥಾನದ ಪ್ರಮುಖ ಕಂಬಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿರುವ ಶಾಸಕರು, ಸಿಡಿಲಿನಿಂದ ಹಾನಿಗೊಳಗಾದ ಭಾಗದ ದುರಸ್ತಿಗೆ ತಕ್ಷಣವೇ ಸೂಕ್ತ ಪರಿಹಾರದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸ್ಥಳೀಯ ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ ಬೋಳೂರು, ರಾಹುಲ್ ಶೆಟ್ಟಿ, ಬೋಳೂರು ಜಯಲಕ್ಷ್ಮಿ ಫ್ರೆಂಡ್ಸ್ನ ಜೀವನ್ ತಲ್ವಾರ್ ಸೇರಿದಂತೆ ದೈವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
ಕಾಸರಗೋಡು: ನಿಲ್ದಾಣದಲ್ಲಿ ಬಸ್ನಡಿಗೆ ಸಿಲುಕಿ ಮಹಿಳೆ ಸಾವು
ಕಾಸರಗೋಡಿನ ಚೆರ್ವತ್ತೂರಿನಲ್ಲಿ ಮಹಿಳೆಯೊಬ್ಬರು ಬಸ್ಸಿನಡಿಗೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಮೃತಪಟ್ಟವರನ್ನು ಪಡನ್ನಕಾಡಿನ ಫೌಝಿಯಾ(53) ಎಂದು ಗುರುತಿಸಲಾಗಿದೆ. ಬಸ್ ಸ್ಟ್ಯಾಂಡ್ನಲ್ಲಿ ಪಯ್ಯನ್ನೂರಿಗೆ ತೆರಳುವ ಖಾಸಗಿ ಬಸ್ನ್ನು ರಿವರ್ಸ್ ತೆಗೆಯುವಾಗ, ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಫೌಝುಯಾ ಬಸ್ಸಿನಡಿಗೆ ಸಿಲುಕಿದ್ದು, ಜೊತೆಗಿದ್ದ ಎಂಟು ವರ್ಷದ ಬಾಲಕ ಅಪಾಯದಿಂದ ಪಾರಾಗಿದ್ದಾನೆ.
ಮಹಿಳೆಯು ಚಿಮೇನಿಯಲ್ಲಿರುವ ಪುತ್ರಿಯ ಮನೆಗೆ ತೆರಳಲು ಬಸ್ಸು ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಗಂಭೀರವಾಗಿ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಚಂದೇರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಉಳ್ಳಾಲ ಬೀಚ್ಗೆ ವಿಹಾರಕ್ಕೆ ಬಂದಿದ್ದ ನಾಲ್ವರ ಪೈಕಿ ಒಬ್ಬರು ನೀರಲ್ಲಿ ಮುಳುಗಿ ಸಾವು
ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದ ಆಂಧ್ರಪ್ರದೇಶ ಮೂಲದ ನಾಲ್ವರು ಮಹಿಳೆಯರ ಪೈಕಿ ಒಬ್ಬರು ನೀರುಪಾಲು ಆಗಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳಿದ ಮೂವರು ಮಹಿಳೆಯರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತರನ್ನು ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್. ಪ್ರಸನ್ನ ಎಂಬವರ ಪತ್ನಿ ಪರಿಮೀ ರತ್ನ ಕುಮಾರಿ (57) ಎಂದು ಗುರುತಿಸಲಾಗಿದೆ. ಉಳ್ಳಾಲ ಬೀಚ್ ಸಮುದ್ರದಲ್ಲಿ ವಿಹರಿಸುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ ನಾಲ್ವರು ಮಹಿಳೆಯರನ್ನು ಎಳೆದೊಯ್ದಿತ್ತು. ಸ್ಥಳೀಯರು ತಕ್ಷಣ ನಾಲ್ವರನ್ನು ಸಮುದ್ರದಿಂದ ಹೊರಗೆಳೆದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಪರಿಮೀ ರತ್ನ ಕುಮಾರಿ ಪ್ರಜ್ಞೆ ತಪ್ಪಿದ್ದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ನಾಲ್ವರು ಮಹಿಳಾ ತಂಡದವರು ಹೈದರಾಬಾದ್ನಿಂದ ಜೂ.6ರಂದು ಮೈಸೂರಿಗೆ ಬಂದಿದ್ದರು. ಅಲ್ಲಿ ಅವರು ಪ್ರವಾಸ ಕೈಗೊಂಡಿದ್ದು, ಬಳಿಕ ಜೂ.7ರಂದು ಕೊಡಗಿಗೆ ಹೋಗಿದ್ದರು. ನಂತರ ಜೂ.9ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಅಲ್ಲಿಂದ ಅವರು ಧರ್ಮಸ್ಥಳಕ್ಕೆ ಬಂದು ಬಳಿಕ ಉಳ್ಳಾಲ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದರು.