ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ: ಮಂಗಳೂರಿನಲ್ಲಿ ಮತ್ತೆ 7 ಮಂದಿಯ ಬಂಧನ
– ಬಂಧಿತರ ಸಂಖ್ಯೆ 13ಕ್ಕೆ ಏರಿಕೆ: ಗಾಯಾಳುಗಳ ವಿಚಾರಣೆ
– ಸುರತ್ಕಲ್: ಕಾರು, ಬಸ್ ಚಾಲಕ ಗಲಾಟೆ!
– ಅನ್ಯ ಕೋಮಿನ ಹುಡುಗರ ಜತೆ ಯುವತಿ!
NAMMUR EXPRESS NEWS
ಮಂಗಳೂರು: ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಬಂಟ್ವಾಳ ತಾಲೂಕಿನ ಬೋಳಿಯಾರ್ನಲ್ಲಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ತಾಜುದ್ದೀನ್ ಅಲಿಯಾಸ್ ಸಾದಿಕ್, ಸರ್ವಾನ್, ಮುಬಾರಕ್, ಅಶ್ರಫ್, ತಲ್ಲತ್, ಇಬ್ರಾನ್, ಕೋಲಿ ಇರ್ಶಾದ್ ಬಂಧಿತರು. ಇದಕ್ಕೂ ಮೊದಲು ಆರು ಮಂದಿಯನ್ನು ಬಂಧಿಸಲಾಗಿತ್ತು. ಶಾಕೀರ್, ಅಬ್ದುಲ್ ರಜಾಕ್, ಅಬುಬಕ್ಕರ್ ಸಿದ್ಧಿಕ್, ಸವಾದ್, ಮೋನು, ಅಬೂಬಕ್ಕರ್ ಎಂಬವರನ್ನು ಬಂಧಿಸಲಾಗಿತ್ತು. ಇದರೊಂದಿಗೆ ಒಟ್ಟು ಬಂಧಿತರ ಸಂಖ್ಯೆ 13ಕ್ಕೆ ಏರಿದೆ.
ಬೋಳಿಯಾರ್ ಬಾರ್ ಮುಂಭಾಗದಲ್ಲಿ ಹಲ್ಲೆ ಮತ್ತು ಚೂರಿ ಇರಿತ ಘಟನೆ ನಡೆದಿತ್ತು. ಈ ಘಟನೆ ದೃಶ್ಯ ಬಾರ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಡಿವಿಡಿಆರ್ನ್ನು ವಶಪಡಿಸಿಕೊಂಡಿದ್ದರು. ಈ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಮೂರು ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇತ್ತ ಈ ಕೃತ್ಯವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಹಿಂದೂಗಳ ಮೇಲಿನ ನಿರಂತರ ದಾಳಿ ಖಂಡಿಸಿ ರಾಜ್ಯವ್ಯಾಪಿ ಹೋರಾಟ ನಡೆಸುವುದಕ್ಕೆ ಮುಂದಾಗಿದೆ. ಇಂದು ಮಂಗಳೂರಿಗೆ ಭೇಟಿ ನೀಡಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ನಿಂದ ತಾಲಿಬಾಲ್ ಸರ್ಕಾರದ ಆಡಳಿತ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದರು.
ಸುರತ್ಕಲ್ನಲ್ಲಿ ಬಿಎಂಡಬ್ಲ್ಯು ಕಾರು ಹಾಗೂ ಬಸ್ ಚಾಲಕನ ನಡುವೆ ಗಲಾಟೆ: ಯುವತಿ ಸೇರಿದಂತೆ ಮೂವರ ವಿರುದ್ಧ ದೂರು!
ಮಂಗಳೂರಿನ ಸುರತ್ಕಲ್ ಸಮೀಪದ ಮುಕ್ಕ ಬಳಿ ಇಂದು ಸ್ಕೂಲ್ ವ್ಯಾನ್ ಹಾಗೂ ಬಿಎಂಡಬ್ಲ್ಯು ಕಾರು ಚಾಲಕರ ನಡುವೆ ಓವರ್ಟೇಕ್ ಮಾಡುವ ವಿಚಾರದಲ್ಲಿ ಜಗಳ ಉಂಟಾಗಿದ್ದು, ಈ ಸಂಬಂಧ ಕಾರಿನಲ್ಲಿದ್ದ ಮೂವರ ವಿರುದ್ಧ ಪೊಲೀಸರು ಮೋಟಾರು ಕಾಯ್ದೆಯಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಿಎಂಡಬ್ಲ್ಯು ಕಾರಿನಲ್ಲಿದ್ದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ, ಮಂಗಳೂರಿನ ಇಮದ್ ಅಬ್ದುಲ್ ನಜೀದ್ ಎಂಬಾತ ಒಬ್ಬರನ್ನೊಬ್ಬರ ವಾಹನ ಓವರ್ ಟೇಕ್ ಮಾಡಲು ಯತ್ನಿಸಿ ಅಪಘಾತ ಸಂಭವಿಸಿದೆ. ಚಾಲಕ ಮತ್ತು ಕಾರಿನಲ್ಲಿದ್ದವರು ಶಾಲಾ ಬಸ್ ಚಾಲಕನೊಂದಿಗೆ ವಾಗ್ವಾದ ನಡೆಸಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಕೆಎ51 ಎಂಸಿ 7575 ಸಂಖ್ಯೆಯ ಕಾರು ಚಲಾಯಿಸುತ್ತಿದ್ದವರ ವಿರುದ್ಧ ಮೋಟಾರು ಕಾಯ್ದೆ ಪ್ರಕಾರ ಕ್ರಮ ಕೈಗೊಂಡಿದ್ದಾರೆ. ಈ ಕಾರಿನಲ್ಲಿ 21 ವರ್ಷದ ಇಮದ್, 21 ವರ್ಷದ ಕುಮಾರಿ ಅಕ್ಷಯ ಹಾಗೂ 21 ವರ್ಷದ ಅಹಮ್ಮದ್ ಅಬ್ಬಾಸ್ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಕಾರು ಹಾಗೂ ಬಸ್ ಚಾಲಕರ ನಡುವೆ ಜಗಳವಾದಾಗ ಸಾರ್ವಜನಿಕರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಇಬ್ಬರು ಅನ್ಯಕೋಮಿನ ಯುವಕರ ಜತೆಗೆ ಹಿಂದೂ ಯುವತಿ ಇದ್ದಿರುವುದನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಅಷ್ಟೇಅಲ್ಲ, ಕಾರಿಗೆ ಟಿಂಟ್ ಅಳವಡಿಸಲಾಗಿದ್ದು, ಹಿಂಭಾಗದಲ್ಲಿ ನಂಬರ್ ಪ್ಲೇಟ್ ಕೂಡ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ರಸ್ತೆಯಲ್ಲಿ ಕೆಲಹೊತ್ತು ವಾಗ್ವಾದ ಕೂಡ ನಡೆದಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಕಾರಿನಲ್ಲಿದ್ದ ಮೂವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು.