ಬೋಳಿಯಾರು ಚೂರಿ ಇರಿತ: ಸ್ಪೀಕರ್ ಖಾದರ್ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ?
– ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಹತಾಶೆಗೊಂಡಿರುವ ಬಿಜೆಪಿ
– ಬಿಜೆಪಿ ವಿರುದ್ಧ ಕಾಂಗ್ರೆಸ್ ಹೇಳಿದ್ದೇನು..?
NAMMUR EXPRESS NEWS
ಮಂಗಳೂರು: ಬಂಟ್ವಾಳ ತಾಲೂಕಿನ ಬೋಳಿಯಾರ್ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಮೇಲಿನ ಚೂರಿ ಇರಿತ ಪ್ರಕರಣ ಇದೀಗ ರಾಜಕೀಯವಾಗಿ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದೆ.
ಬಿಜೆಪಿಯು ಈ ಪ್ರಕರಣದಲ್ಲಿ ವಿಧಾನಸಭಾ ಸ್ಪೀಕರ್ ಆಗಿರುವ ಯುಟಿ ಖಾದರ್ ಮೇಲೆ ವಿನಾಕಾರಣ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ.
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಹತಾಶೆಗೊಂಡಿರುವ ಬಿಜೆಪಿಯುವರು ಈ ರೀತಿ ಕಾಂಗ್ರೆಸ್ ಸರ್ಕಾರ ಹಾಗೂ ನಾಯಕರ ವಿರುದ್ಧ ಆರೋಪ ಮಾಡುತ್ತಿರುವುದಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ಹೇಳಿದ್ದಾರೆ.
ತೊಕ್ಕೊಟ್ಟಿನಲ್ಲಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಶಾಸಕರನ್ನು ಸೋಲಿಸಲು ಒಂದೇ ಮನೆಯವರಂತೆ ಜಂಟಿಯಾಗಿ ಬಲೆ ಹೆಣೆದವರೇ ಇಂದು ತಮ್ಮೊಳಗೆ ಕಿತ್ತಾಟ ನಡೆಸುತ್ತಿದ್ದಾರೆ. ಬಿಜೆಪಿಯವರು ಈಗ ಶಾಸಕ ಖಾದರ್ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಭಾರತ್ ಮಾತಾಕಿ ಜೈ ಘೋಷಣೆ ಪ್ರಚೋದನಕಾರಿ ಎಂದು ಯಾವತ್ತೂ ಕಾಂಗ್ರೆಸ್ ಹೇಳುವುದಿಲ್ಲ. ಬೋಳಿಯಾರಿನಲ್ಲಿ ನಡೆದಿರುವ ಘಟನೆಯ ನೈಜ ವಿಚಾರ, ಸತ್ಯಸಂಗತಿಯನ್ನು ಜನರಿಗೆ ಮುಟ್ಟಿಸುವ ಕಾರ್ಯವಾಗಬೇಕು. ಖಾದರ್ ಅವರು ಸ್ಪೀಕರ್ ಆಗಿದ್ದು, ಅವರು ರಾಜಕೀಯ ಪಕ್ಷಗಳ ವಿಚಾರದಲ್ಲಿ ತೊಡಗಿಸಲು ಸಾಧ್ಯವಿಲ್ಲ. ಕಾನೂನು ವ್ಯಾಪ್ತಿಯ ಕೆಲಸ ಕಾರ್ಯಗಳನ್ನಷ್ಟೇ ಅವರು ಮಾಡಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಿಜೆಪಿಯವರು ಬೋಳಿಯಾರಿನಲ್ಲಿ ಪೊಲೀಸ್ ಇಲಾಖೆಯ ಅನುಮತಿ ಪಡೆಯದೆ ವಿಜಯೋತ್ಸವ ಆಚರಿಸಿದ್ದಾರೆ. ವಿಜಯೋತ್ಸವ ವೇಳೆ ಪಕ್ಷದ ಕಾರ್ಯಕರ್ತರು ಹೇಗೆ ವರ್ತಿಸಬೇಕೆಂಬುದನ್ನು ಪಕ್ಷದ ನಾಯಕರು ಅವರಿಗೆ ತಿಳಿಸಿಕೊಡಬೇಕು. ಅದು ಬಿಟ್ಟು ಕ್ಷೇತ್ರದ ಶಾಸಕರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ? ಯುಟಿ ಖಾದರ್ಗೆ ವೈರಿಗಳು ಇದ್ದಾರೆ ಅಂದರೆ ಅವರು ಕಾನೂನು ವಿರುದ್ಧ ಇರುವವರು ಎಂದರ್ಥ. ಬೋಳಿಯಾರು ಘಟನೆ ಸತ್ಯಾಂಶವು ಸಿಸಿಟಿವಿ ದೃಶ್ಯದ ಮೂಲಕ ಎಲ್ಲರಿಗೂ ಗೊತ್ತಾಗಿದೆ. ಈ ಬಗ್ಗೆ ಬಿಜೆಪಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದರು.