ಫೋಟೊಶೂಟ್ ಹುಚ್ಚಿನಿಂದ ಪ್ರಾಣ ಕಳೆದುಕೊಂಡ ಬಾಲಕರು.!
– ಹೆಬ್ರಿ: ಅಡಿಕೆ ಮರದಿಂದ ಬಿದ್ದು ಸಾವು!
– ಸುಳ್ಯ: ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವು
– ಕೈಕಾಲು ಕಟ್ಟಿ ಗೋ ಸಾಗಾಟ: ಆರೋಪಿಗಳು ಪರಾರಿ
NAMMUR EXPRESS NEWS
ಧಾರವಾಡ: ಧಾರವಾಡ ಹೊರವಲಯದ ಮನ್ಸೂರ ಗ್ರಾಮದ ಹೊರವಲಯದಲ್ಲಿನ ಕಲ್ಲು ಕ್ವಾರಿಯ ಹೊಂಡದಲ್ಲಿ ಫೋಟೊಶೂಟ್, ರೀಲ್ಸ್ ಮಾಡುವ ಹುಚ್ಚಿಗೆಬಿದ್ದ ಅಪ್ರಾಪ್ತ ಬಾಲಕರಿಬ್ಬರು ಕಲ್ಲು ಕ್ವಾರಿಯ ಹೊಂಡಕ್ಕೆ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಧಾರವಾಡದ ಕೆಇ ಬೋರ್ಡ್ ಶಾಲೆಯ ವಿದ್ಯಾರ್ಥಿಗಳಾದ 16 ವರ್ಷದ ಆರು ಜನ ಬಾಲಕರು ಮನೆಯಲ್ಲಿ ಸ್ನೇಹಿತನ ಮನೆಗೆ ಊಟಕ್ಕೆ ಹೋಗುವೆನೆಂದು ಹೇಳಿ ಹೊರಗೆ ಹೋಗಿದ್ದರು. ರೀಲ್ಸ್ ಫೋಟೋಶೂಟ್ ಮಾಡುವ ಹುಚ್ಚಿನಿಂದ ಕಲ್ಲು ಕ್ವಾರಿಯ ಹೊಂಡಕ್ಕೆ ಇಳಿಯಲು ಸ್ಥಳೀಯ ದನಗಾಯಿಯೊಬ್ಬನ ಸಹಾಯ ಪಡೆದಿದ್ದರು. ಈ ಕಲ್ಲು ಕ್ವಾರಿ ತುಂಬಾ ಆಳವಾಗಿದ್ದು ಇತ್ತೀಚೆಗೆ ಸುರಿದ ಮಳೆಗೆ ಹೊಂಡದಲ್ಲಿ ನೀರು ತುಂಬಿತ್ತು. ದೊಡ್ಡ ಪ್ರಪಾತದಂತೆ ಕಾಣುತ್ತಿದ್ದ ಆ ಹೊಂಡಕ್ಕೆ ನಾಲ್ಕು ಜನ ಇಳಿದಿದ್ದು ಉಳಿದ ಇಬ್ಬರು ಮೊಬೈಲ್ ದಲ್ಲಿ ಫೋಟೊ ಹೊಡೆಯೋ ಪ್ಲಾನ್ ಮಾಡಿದ್ದಾರೆ. ಆದರೆ ಈ ವೇಳೆ ತೀರಾ ಆಳಕ್ಕೆ ಹೋದಾಗ ಈಜು ಬಾರದ ಶ್ರೇಯಸ್ ಮತ್ತು ಧ್ರುವ್ ಮುಳುಗಿದ್ದಾರೆ. ಉಳಿದವರು ಹೆದರಿ ಮೇಲಕ್ಕೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಅಡಿಕೆ ಮರದಿಂದ ಬಿದ್ದು ಸಾವು!
ಹೆಬ್ರಿ: ಅಡಿಕೆ ಮರಕ್ಕೆ ಮದ್ದು ಹೊಡೆಯುತ್ತಿದ್ದ ಸಂದರ್ಭ ಕಾರ್ಮಿಕರೋರ್ವರು ಅಡಿಕೆ ಮರದಿಂದ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಹೆಬ್ರಿಯಲ್ಲಿ ವರದಿಯಾಗಿದೆ. ವಾಸು (59) ಮೃತ ವಕ್ತಿ. ವಾಸುರವರು ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದು ಜೂ.17ರಂದು ಕಬ್ಬಿನಾಲೆ ದೇವರಗುಂಡಿ ಎಂಬಲ್ಲಿ ಅಡಿಕೆ ತೋಟದಲ್ಲಿ ಅಡಿಕೆ ಮರವನ್ನು ಹತ್ತಿ ಕೊಟ್ಟೆಮಣಿ ಮೇಲೆ ಕುಳಿತುಕೊಂಡು ಮದ್ದನ್ನು ಹೊಡೆಯುತ್ತಿರುವಾಗ ಅವರಿಗೆ ರಕ್ತದೊತ್ತಡ ಹೆಚ್ಚು ಕಡಿಮೆಯಾಗಿ ಆಕಸ್ಮಿಕವಾಗಿ ಅಡಿಕೆ ಮರದಿಂದ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ: ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವು
ಸುಳ್ಯ: ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ತಗಲಿ ವಿದ್ಯುತ್ ಕಂಬದಲ್ಲೇ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಜೂನ್ 17ರಂದು ಸುಳ್ಯದ ಅಲೆಕ್ಕಾಡಿ ಬಳಿಯ ಪಾರ್ಲ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ನಿವಾಸಿ ಪ್ರಕಾಶ (29) ಮೃತ ವ್ಯಕ್ತಿ. ಕಡಬ ಮೂಲದ ಸಂಸ್ಥೆಯ ವತಿಯಿಂದ ಸುಳ್ಯ, ಮುರುಳ್ಯದ ಅಲೆಕ್ಕಾಡಿಯ ಪಾರ್ಲ ಎಂಬಲ್ಲಿ ಕಾರ್ಮಿಕರು ಮೆಸ್ಕಾಂ ಪಂಜ ಸೆಕ್ಷನ್ ವ್ಯಾಪ್ತಿಯ ವಿದ್ಯುತ್ ಲೈನ್ ದುರಸ್ತಿ ಕಾರ್ಯ ಮಾಡುತ್ತಿದ್ದಾಗ ಮೃತಪಟ್ಟಿದ್ದಾರೆ.
ಕೈಕಾಲು ಕಟ್ಟಿ ಗೋ ಸಾಗಾಟ: ಆರೋಪಿಗಳು ಪರಾರಿ!
ಬೈಂದೂರು : ಟಾಟಾ ಏಸ್ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಬೈಂದೂರು ಪೊಲೀಸರು ಎತ್ತು ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಸೋಮವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ಬೈಂದೂರು ಎಸೈ ತಿಮ್ಮೇಶ್.ಬಿ.ಎನ್, ಗಸ್ತಿನಲ್ಲಿದ್ದಾಗ ಬಂದ ಮಾಹಿತಿಯಂತೆ ದಾಳಿ ನಡೆಸಿದ್ದಾರೆ. ಇಬ್ಬರು ಆರೋಪಿಗಳು ಟಾಟಾ ಎಸ್ ವಾಹನದಲ್ಲಿ ಜಾನುವಾರನ್ನು ತುಂಬಿಕೊಂಡು ಶಿರೂರು ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದರು. ಶಿರೂರು ಕೆಳಪೇಟೆ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ವಾಹನವನ್ನು ತಡೆಯಲಾಯಿತು.
ಟಾಟಾ ಏಸ್ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕನು ವಾಹನವನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದು, ಕೂಡಲೇ ಟಾಟಾ ಎಸ್ ವಾಹನವನ್ನು ಜೀಪಿನಲ್ಲಿ ಬೆನ್ನಟ್ಟಿ ಕೊಂಡು ಹೋಗಿ ಮೊಮಿನ್ ಮೊಹಲ್ಲಾ ಬಳಿ ತಡೆದು ನಿಲ್ಲಿಸಿದಾಗ ಟಾಟಾ ಎಸ್ ವಾಹನದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.