ಟಾಪ್ ನ್ಯೂಸ್ ಕರಾವಳಿ
ಕುಂದಾಪುರದಲ್ಲಿ ಯುವಕ ಸಮುದ್ರಪಾಲು!
– ಸ್ನೇಹಿತನ ಮದುವೆಗೆಂದು ಬಂದ ತಿಪಟೂರು ಮೂಲದ ಯುವಕ ಸಮುದ್ರ ಪಾಲು- ಮಂಗಳೂರು: ಬದುಕಿರುವ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಂದ ಗೊಂದಲ!
– ಸುಳ್ಯ: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅನ್ಯ ಕೋಮಿನ ಯುವಕ ಯುವತಿಯನ್ನು ಪೊಲೀಸರಿಗೆ ಹಿಡಿದು ಕೊಟ್ಟ ಕಾರ್ಯಕರ್ತರು
– ಮಂಗಳೂರು: ವಾಕಿಂಗ್ಗೆ ಹೋದ ಯುವತಿ ನಾಪತ್ತೆ, ದೂರು
– ಪಡುಬಿದ್ರೆ: ಸ್ವಸಹಾಯ ಸಂಘದ ಸಾಲ ವಿವಾದ, ಮನೆಗೆ ನುಗ್ಗಿ ಹಲ್ಲೆ?
– ಕಾರ್ಕಳ: ಮೀನು ಕದ್ದ ಬಗ್ಗೆ ಪೊಲೀಸ್ ಠಾಣೆಗೆ ದೂರು!
NAMMUR EXPRESS NEWS
ಕುಂದಾಪುರ: ಸ್ನೇಹಿತನ ಮನೆಯಲ್ಲಿ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಯುವಕರಿಬ್ಬರು ಸಮುದ್ರ ವಿಹಾರಕ್ಕೆ ತೆರಳಿದ್ದು, ಈ ವೇಳೆ ಓರ್ವ ಅಲೆಗಳ ರಭಸಕ್ಕೆ ಸಿಲುಕು ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಕುಂದಾಪುರ ತಾಲೂಕಿನ ಬೀಜಾಡಿ ಎಂಬಲ್ಲಿ ನಡೆದಿದೆ.
ತಿಪಟೂರು ಮೂಲದ ಯೋಗೀಶ್(23) ನೀರುಪಾಲಾಗಿರುವ ವ್ಯಕ್ತಿ. ಇನ್ನೊಬ್ಬರನ್ನು ರಕ್ಷಣೆ ಮಾಡಲಾಗಿದೆ. ಸಮುದ್ರಕ್ಕೆ ಇಳಿದ ಇಬ್ಬರು ಕೂಡ ತಿಪಟೂರು ಮೂಲದವರಾಗಿದ್ದಾರೆ. ಗುರುವಾರ ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆಂದು ಸ್ನೇಹಿತನ ಆಮಂತ್ರಣದ ಮೇರೆಗೆ ಕುಂದಾಪುರಕ್ಕೆ ಬಂದಿದ್ದರು.
ಸಮುದ್ರವನ್ನು ನೋಡಿದ ಯುವಕರಿಬ್ಬರು ಈಜಾಡುವುದಕ್ಕೆ ತೆರಳಿದ್ದಾರೆ. ಮಳೆಯಿಂದಾಗಿ ಸದ್ಯ ಕಡಲು ಕೂಡ ಪ್ರಕ್ಷ್ಯಬ್ಧಗೊಂಡಿದ್ದು, ಯುವಕರು ಅಪಾಯದ ಅರಿವು ಇಲ್ಲದೆ ನೀರಿಗೆ ಇಳಿದಿದ್ದಾರೆ. ಆದರೆ, ಇಬ್ಬರು ಕೂಡ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದು, ಯೋಗೀಶ್ ನೀರುಪಾಲಾಗಿದ್ದಾರೆ. ಮತ್ತೊಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಇನ್ನು ನೀರುಪಾಲಾಗಿರುವ ಯೋಗೀಶ್ಗಾಗಿ ಸಂಜೆವರೆಗೆ ಹುಡುಕಾಟ ಮಾಡಿದರೂ ಪತ್ತೆಯಾಗಿಲ್ಲ.
ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಯುಬಿ ನಂದಕುಮಾರ್, ಪಿಎಸ್ಐ ಪ್ರಸಾದ್ ಕುಮಾರ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮಂಗಳೂರು: ಬದುಕಿರುವ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಂದ ಗೊಂದಲ!
ಮಂಗಳೂರು : ಮಂಗಳೂರಿನ ಸರಕಾರಿ ವೆನ್ಹಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ ಎಂಬ ಸುದ್ದಿ ಗೊಂದಲ ಉಂಟು ಮಾಡಿ ಕೊನೆಗೆ ಶವಗಾರಾದಲ್ಲಿ ಎಷ್ಟು ಹುಡುಕಿದರೂ ಹೆಣ ಸಿಗದೆ ವ್ಯಕ್ತಿ ಇನ್ನೂ ಬದುಕಿದ್ದಾರೆ ಎಂಬ ಸುದ್ದಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಶೇಖರ್ ಗೌಡ ಅವರು ವೆಂಕಪ್ಪ ಗೌಡ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಜೂನ್ 9ರಂದು ಸ್ಥಳೀಯ ಪೇಟೆಗೆ ಹೋದಾಗ ಮೆದುಳು ನರದ ಸಮಸ್ಯೆಯಿಂದ ಅನಾರೋಗ್ಯಕ್ಕೆ ಒಳಗಾಗಿ ಬಿದ್ದರು. ತಕ್ಷಣ ಅವರನ್ನು ಆಟೋ ರಿಕ್ಷಾದವರು ವೆಂಕಪ್ಪ ಗೌಡರಲ್ಲಿಗೆ ಕರೆತಂದಿದ್ದು, ವೆಂಕಪ್ಪ ಗೌಡರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆರೋಗ್ಯದಲ್ಲಿ ಸುಧಾರಣೆಯಾಗದ ಕಾರಣ ಜೂನ್ 15ರಂದು ವೆಸ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಶೇಖರ್ ಗೌಡ ಅವರ ಸ್ಥಿತಿ ಗಂಭೀರವಾದ ಕಾರಣ ವೆನ್ಹಾಕ್ ಆಸ್ಪತ್ರೆಯಿಂದ ಮಂಗಳೂರು ದಕ್ಷಿಣ ಠಾಣೆಗೆ ವಾರಸುದಾರರಿಗೆ ಮಾಹಿತಿ ನೀಡಲು ಪತ್ರ ರವಾನೆಯಾಗಿದೆ. ಅದರಲ್ಲಿ ಬರೆದಿರುವ ಮಾಹಿತಿ ಸರಿಯಾಗಿ ಓದಲು ಆಗದ ಕಾರಣ ಪೊಲೀಸ್ ಠಾಣೆಯವರು ಶೇಖರ್ ಗೌಡ ಸಾವನಪ್ಪಿದ್ದಾರೆ ಎಂದು ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿದ್ದರು. ಧರ್ಮಸ್ಥಳ ಠಾಣೆಯ ಪೊಲೀಸರು ಆ ರೋಗಿಯ ಬಂಧುಗಳಿಗೆ ಮಾಹಿತಿ ನೀಡಿದ್ದರು. ರೋಗಿಯ ಬಂಧುಗಳು ಆಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದಾಗ, ಅಂತಹ ವ್ಯಕ್ತಿ ಮೃತಪಟ್ಟಿಲ್ಲ ಎಂದು ಗೊತ್ತಾಗಿದ್ದು, ಕೊನೆಗೆ ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಮನೆಯವರಿಗೆ ದೊರಕಿದ್ದು, ಇದರಿಂದ ಅವರ ಬಂಧುಗಳು ನಿಟ್ಟುಸಿರುಬಿಟ್ಟಿದ್ದರು.
– ಸುಳ್ಯ: ಅನ್ಯ ಕೋಮಿನ ಯುವಕ ಯುವತಿಯನ್ನು ಪೊಲೀಸರಿಗೆ ಹಿಡಿದು ಕೊಟ್ಟರು!
ಸುಳ್ಯ: ಓರ್ವ ಯುವತಿ ಮತ್ತು ಇಬ್ಬರು ಯುವಕರು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಾರನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ ಘಟನೆ ನಡೆದಿದೆ. ಮುಳ್ಳೇರಿಯಾ ಕಡೆಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ನಂಬರ್ ಪ್ಲೇಟ್ ಇಲ್ಲದ ಒಂದು ಕಾರಿನಲ್ಲಿ ಓರ್ವ ಹಿಂದೂ ಯುವತಿಯ ಜತೆ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದು, ಅವರು ಅನ್ಯಕೋಮಿನವರು ಎಂದು ಅನುಮಾನದಿಂದ ಕೆಲವರು ಸುಳ್ಯದ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಅವರು ಸುಳ್ಯ ಪೊಲೀಸರಿಗೆ ವಿಷಯ ತಿಳಿಸಿದ್ದು, ಆ ಕಾರನ್ನು ಪೊಲೀಸರು ಸುಳ್ಯದಲ್ಲಿ ಕಡೆದು ನಿಲ್ಲಿಸಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿದ್ದ ಓರ್ವ ಯುವಕನನ್ನು ವಿವಾಹವಾಗಿರುವುದಾಗಿ ಆಕೆ ತಿಳಿಸಿದ್ದು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ್ದರೆಂದು ಹೇಳಲಾಗಿದೆ.
– ಮಂಗಳೂರು: ವಾಕಿಂಗ್ಗೆ ಹೋದ ಯುವತಿ ನಾಪತ್ತೆ, ದೂರು
ಮಂಗಳೂರು: ನಗರದ ಪಿವಿಎಸ್ ಸರ್ಕಲ್ ಸಮೀಪದ ಮೊಬೈಲ್ ಶಾಪ್ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮೀ ಚಿನ್ನಾಕಟ್ಟಿ (24) ಅವರು ರಾತ್ರಿ 10.45ರ ಸುಮಾರಿಗೆ ಮನೆಯ ಎದುರಿನಲ್ಲಿ ವಾಕಿಂಗ್ಗೆ ಹೋಗಿ ಬರುವುದಾಗಿ ತಾಯಿ ಬಳಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಎಂಕಾಂ ವಿದ್ಯಾಭ್ಯಾಸ ಮಾಡಿರುವ ಅವರು ಸಪೂರ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು ಕನ್ನಡ, ಇಂಗ್ಲಿಷ್, ತುಳು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಟೀ ಶರ್ಟ್ ಮತ್ತು ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದರೆಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿದೆ.
– ಪಡುಬಿದ್ರಿ: ಸ್ವಸಹಾಯ ಸಂಘದ ಸಾಲ ವಿವಾದ, ಮನೆಗೆ ನುಗ್ಗಿ ಹಲ್ಲೆ
ಎಲ್ಲೂರಿನ ಧರ್ಮಸ್ಥಳ ಸ್ವಸಹಾಯ ಗುಂಪಿನಿಂದ ಪಡೆದ ಸಾಲ ಮರು ಪಾವತಿಯ ಬಗ್ಗೆ ಎದ್ದ ವಿವಾದ ಇದೀಗ ಹಲ್ಲೆ ಜೀವ ಬೆದರಿಕೆ ಹಾಕುವ ಮೂಲಕ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಎಲ್ಲೂರಿನ ಸಂತೋಷ್ ಆಚಾರ್ಯ ದಂಪತಿಗಳು ಸ್ವಸಹಾಯ ಗುಂಪಿನಿಂದ ತೆಗೆದ ಸಾಲವನ್ನು ಮರು ಪಾವತಿಸಲು ಹಿಂದೇಟು ಹಾಕಿದ ವಿಚಾರಕ್ಕೆ ಸಂಬಂಧಿಸಿ, ಪ್ರಕರಣ ಠಾಣೆಯ ಮೆಟ್ಟಲೇರಿ ನ್ಯಾಯಾಲಯದಲ್ಲಿ ಇತ್ಯಾರ್ಥಗೊಳಿಸುವುದಾಗಿ ಎರಡೂ ತಂಡಗಳು ಲಿಖಿತವಾಗಿ ಠಾಣೆಗೆ ನೀಡಿ ಮರಳಿದ್ದರು. ಈ ಬಗ್ಗೆ ಸ್ವ ಸಹಾಯ ಗುಂಪಿನ ಪ್ರಮುಖರಾದ ಸುಜಾತ ಆಚಾರ್ಯ ಎಂಬವರ ಮನೆಯಲ್ಲಿ ಗುಂಪಿನ ಕೆಲ ಸದಸ್ಯರು ಸೇರಿ ಮಾತುಕತೆ ನಡೆಸುತ್ತಿದ್ದ ವೇಳೆ ಆರೋಪಿಗಳಾದ ರವೀಂದ್ರ ಶೆಟ್ಟಿ ಕಡಬ ಹಾಗೂ ಇತರೆ ಮೂವರು ಸ್ಕಾರ್ಪಿಯೋ ಕಾರಿನಲ್ಲಿ ಬಂದವರೆ.. ನೇರ ಮನೆಯೊಳಗೆ ನುಗ್ಗಿ, ಸಂತೋಷ್ ಹಾಗೂ ಆತನ ಹೆಂಡತಿ ಕಟ್ಟಿದ ಸಾಲ ಮರು ಪಾವತಿಸುವುದಿಲ್ಲ, ಅದನ್ನು ಹೇಗೆ ಕಟ್ಟಿಸಿಕೊಳ್ಳುತ್ತೀರಿ.. ನೀವು ಎಷ್ಟು ಪ್ರಮಾಣದ ಬಡ್ಡಿ ಹಾಕುತ್ತೀರಿ ನಿಮ್ಮ ಸಂಘವನ್ನು ಬಂದ್ ಮಾಡುತ್ತೇವೆ, ಅವರ ಸಾಲ ಮರುಪಾವತಿ ವಿಚಾರಕ್ಕೆ ಬಂದರೆ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿದಾಗ ಮಾತಿಗೆ ಮಾತು ಬೆಳೆದು ದೂರುದಾರರಿಗೆ ರವೀಂದ್ರ ಶೆಟ್ಟಿ ಕೈಯಿಂದ ಹಲ್ಲೆ ನಡೆಸಿದ್ದು, ಜಗಳ ಬಿಡಿಸಲು ಬಂದ ಸಂಘದ ಸದಸ್ಯೆ ಕವಿತಾ ಅವರಿಗೂ ರವೀಂದ್ರ ಶೆಟ್ಟಿ ಹಲ್ಲೆ ನಡೆಸಿದ್ದಾರೆ ಇತರೆ ಸದಸ್ಯರು ಜಗಳ ಬಿಡಿಸುತ್ತಿದಂತೆ ಆರೋಪಿಗಳು ಬಂದ ಕಾರಿನಲ್ಲಿ ಮರಳಿದ್ದಾರೆ. ದೂರುದಾರೆ ಸುಜಾತ ಆಚಾರ್ಯ ಮೈಮೇಲೆ ಕೈ ಹಾಕಿ ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.
ಮೀನು ಕದ್ದ ಬಗ್ಗೆ ಪೊಲೀಸ್ ಠಾಣೆಗೆ ದೂರು : ರಾಜಿಯಲ್ಲಿ ಇತ್ಯರ್ಥ
ಮೀನು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಮೀನೊಂದನ್ನು ಕದ್ದು ಮಾರಾಟ ಮಾಡಿರುವ ಘಟನೆ ಕಾರ್ಕಳ ಮಾರುಕಟ್ಟೆಯಲ್ಲಿ ಜೂ. 9ರಂದು ನಡೆದಿದೆ. ಮೀನಿನ ವ್ಯಾಪಾರಿ ಮಾಲ ಎಂಬವರು ಗ್ರಾಹಕರೋರ್ವರ ಬೇಡಿಕೆಯಂತೆ 6,500 ರೂ. ಮೌಲ್ಯದ ಅಂಜಲ್ ಮೀನನ್ನು ಖರೀದಿಸಿ ಫ್ರಿಜ್ನಲ್ಲಿಟ್ಟಿದ್ದರು. ಮರುದಿನ ಮೀನು ಪಡೆಯಲು ಗ್ರಾಹಕ ಮಾಲ ಅವರಲ್ಲಿ ಬಂದಾಗ ಫ್ರಿಜ್ನಲ್ಲಿಟ್ಟಿದ್ದ ಮೀನು ಕಾಣೆಯಾಗಿತ್ತು. ಯಾರೋ ಕಳ್ಳರು ಫ್ರಿಜ್ನಿಂದ ಮೀನು ಕದ್ದಿರುವ ವಿಚಾರ ತಿಳಿದ ಮಾಲ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರು. ಸೂರಜ್ ಎಂಬಾತನನ್ನು ಪೊಲೀಸರು ವಿಚಾರಿಸಿದಾಗ ಮದ್ಯಕ್ಕಾಗಿ ಮೀನನ್ನು ಕದ್ದು 140 ರೂ.ಗೆ ಹೂವಿನ ವ್ಯಾಪಾರಿಯೋರ್ವರಿಗೆ ಮಾರಿರುವುದಾಗಿ ತಪ್ರೊಪ್ಪಿಕೊಂಡಿದ್ದಾನೆ. ಹೂವಿನ ವ್ಯಾಪಾರಿಯನ್ನು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ನಿಜಾಂಶ ಬಯಲಾಗಿದೆ. ಬಳಿಕ ಠಾಣೆಯಲ್ಲಿ ಮಾತುಕತೆಯಾಗಿದ್ದು ಮೀನು ವ್ಯಾಪಾರಿಗೆ ಹೂವಿನ ವ್ಯಾಪಾರಿ ಮೀನಿನ ಮೌಲ್ಯ ನೀಡಲು ಒಪ್ಪಿದ್ದಾರೆ.