ಚಿಕ್ಕಮ್ಮನ ಕೊಂದ ವಿದ್ಯಾರ್ಥಿ ಈಗ ಬಂಧಿ!
– ಉಪ್ಪಿನಂಗಡಿಯ ಹೇಮಾವತಿ ಕೊಲೆ ಪ್ರಕರಣ: ಆರೋಪಿಗೆ ರಿಮಾಂಡ್ ಹೋಮ್: ಪರಚಿದ ಗಾಯ ಸಾಕ್ಷಿಯಾಯ್ತು!
– ಕರಾವಳಿಯಲ್ಲೇ ನೀಚ ಕೃತ್ಯ ಎಸಗಿದ ವಿದ್ಯಾರ್ಥಿ!
NAMMUR EXPRESS NEWS
ಉಪ್ಪಿನಂಗಡಿ: ಉಪ್ಪಿನಂಗಡಿಯ ಹೇಮಾವತಿ (37) ಕೊಲೆ ಪ್ರಕರಣದಲ್ಲಿ ಬಂಧಿತನಗಿರುವ ಅಪ್ರಾಪ್ತ ವಯಸ್ಕ ಬಾಲಕ, ಎಸೆಸ್ಸೆಲ್ಸಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳಾವಧಿಗೆ ರಿಮಾಂಡ್ ಹೋಮ್ ಗೆ ಕಳುಹಿಸಿದೆ.
ಉಪ್ಪಿನಂಗಡಿ ಸಮೀಪದ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ ಅವರನ್ನು ಭಾನುವಾರ ತಡರಾತ್ರಿ ಕುತ್ತಿಗೆ ಹಿಸುಕಿ ಕೊಲೆಗೈಯಲಾಗಿತ್ತು. ಹೇಮಾವತಿ ಅವರ ಸಾವು ಮೊದಲು ಹೃದಯಘಾತದಿಂದ ಸಂಭವಿಸಿದೆ ಎಂದು ಭಾವಿಸಲಾಗಿತ್ತು. ಹೇಮಾವತಿ ಅವರ ಮನೆಯಲ್ಲಿ ಘಟನೆಯ ರಾತ್ರಿ ತಂಗಿದ್ದ ಅಕ್ಕನ ಮಗ, ಹತ್ತನೇ ತರಗತಿ ವಿದ್ಯಾರ್ಥಿ, ಅಪ್ರಾಪ್ತ ಬಾಲಕ ಹೇಮಾವತಿ ಮಲಗಿದಲ್ಲಿಗೆ ಹೋಗಿ ದೈಹಿಕ ಸುಖ ಬಯಸಿ ಅನುಚಿತವಾಗಿ ವರ್ತಿಸಿದ್ದ. ಇದಕ್ಕೆ ಹೇಮಾವತಿಯವರು ಪ್ರತಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ. ತನ್ನ ಕೃತ್ಯವನ್ನು ನೆರೆಹೊರೆಯವರಿಗೆ ತಿಳಿಸಿದರೆ ತಾನು ಅವಮಾನಿತನಾಗುವ ಸಾಧ್ಯತೆ ಇದೆ ಎಂದು ಅಂಜಿಕೆಯಿಂದ ಈ ಬಾಲಕ ಆಕೆಯನ್ನು ಕೊಲ್ಲುವ ನಿರ್ಧಾರ ತಾಳಿದ್ದ. ಸುಮಾರು ಅರ್ಧ ಗಂಟೆಯ ಬಳಿಕ ನಿದ್ರೆಗೆ ಜಾರಿದ್ದ ಚಿಕ್ಕಮ್ಮನ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆಗೈದಿದ್ದ. ಚಿಕ್ಕಮ್ಮ ಮೃತಪಟ್ಟಿರುವುದು ದೃಢವಾದೊಡನೆ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಾನೇ ಮೊದಲಾಗಿ ತನ್ನ ತಂದೆಗೆ ತಿಳಿಸಿ ಪಾರಾಗಲು ಯತ್ನಿಸಿದ್ದ. ಆದರೆ ಕುತ್ತಿಗೆ ಹಿಸುಕಿದ ವೇಳೆ ಆಕೆ ಪ್ರಾಣ ರಕ್ಷಣೆಗಾಗಿ ಬಾಲಕನಿಗೆ ಪರಚಿದ್ದು, ಈ ಪರಚಿದ ಗಾಯವೇ ಪೊಲೀಸರು ಸಾಕ್ಷಿಯಾಗಿತ್ತು.
ಬಂಟ್ವಾಳ ತಾಲೂಕು ಮಾಣಿ ಗ್ರಾಮದ ವಿಠಲ ಪೈ ಯಾನೆ ಶೈಲೇಶ್ ಎಂಬವರನ್ನು ವಿವಾಹವಾಗಿದ್ದ ಹೇಮಾವತಿಯವರು ಗಂಡನ ಕುಡಿತದ ಚಟದಿಂದ ಬೇಸತ್ತು ಗಂಡನಿಂದ ದೂರವಾಗಿದ್ದರು. ಹೋಟೇಲೊಂದರಲ್ಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದ ಈಕೆ ತನ್ನ ತಾಯಿ ಮನೆಯಲ್ಲಿ ವಾಸ್ತವ್ಯವನ್ನು ಹೊಂದಿದ್ದು, ಮಗನಂತಿದ್ದ ಅಕ್ಕನ ಮಗನೇ ಮೃಗೀಯ ವರ್ತನೆ ತೋರಿ ಆಕೆಯ ಸಾವಿಗೆ ಕಾರಣವಾಗಿರುವುದು ಮಾತ್ರ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಬ್ರಹ್ಮಾವರದ ದಲಿತ ಯುವಕನ ಶೂಟೌಟ್: ಪ್ರತಿಭಟನೆ
– ಪ್ರಕರಣ ಸಿಓಡಿಗೆ ವಹಿಸುವಂತೆ ಸಂಘಟನೆಗಳ ಆಗ್ರಹ
ಹನೆಹಳ್ಳಿಯ ದಲಿತ ಯುವಕ ಕೃಷ್ಣ ಶೂಟೌಟ್ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಸಿಓಡಿ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಸಮತಾ ಸೈನಿಕ ದಳದ ಉಡುಪಿ ಜಿಲ್ಲಾ ಸಮಿತಿಯು ಬ್ರಹ್ಮಾವರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಂಡಿತ್ತು.
ಮಾ.2ರಂದು ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ಕೃಷ್ಣ ಅವರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣ ನಡೆದು ಸುಮಾರು ನಾಲ್ಕು ತಿಂಗಳು ಕಳೆದರೂ ಈವರೆಗೆ ಕೊಲೆ ಆರೋಪಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಆರೋಪಿಸಿದ್ದಾರೆ.
ಈ ಘಟನೆ ಬಳಿಕ ಉಡುಪಿ ಜಿಲ್ಲೆಯಲ್ಲಿ ಪರಿಶಿಷ್ಟ ಜನಾಂಗದವರಲ್ಲಿ ಜೀವ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಶಿಷ್ಟ ಜನಾಂಗದ ಬಡ ದಿನಗೂಲಿ ಕಾರ್ಮಿಕನನ್ನು ಗುಂಡಿಕ್ಕಿ ಕೊಲೆಗೈದಿರುವ ಮರ್ಯಾದೆ ಹತ್ಯೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಸಿಓಡಿ ತನಿಖೆಗೆ ಒಳಪಡಿಸಬೇಕು. ಈ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಕೊಡಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದಾರೆ. ಈ ವೇಳೆ ವೇಳೆ ಮಾತನಾಡಿದ ಸಂಸದರು, ಅಪರಾಧಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಪತ್ತೆ ಹಚ್ಚಬೇಕು. ಬಡ ದಲಿತ ಕುಟುಂಬಕ್ಕೆ ನ್ಯಾಯ ನೀಡಬೇಕು. ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಸಂಬಂಧ ಮುಖ್ಯಮಂತ್ರಿಯನ್ನು ತಾವು ಭೇಟಿ ಮಾಡಿ ಮನವಿ ಮಾಡುವುದಾಗಿ ಭರವಸೆ ನೀಡಿದರು.