ಇನ್ನೂ ಸಿಗದ ಯುವಕನ ಸುಳಿವು!
– ಕುಂದಾಪುರದಲ್ಲಿ ಸಮುದ್ರಪಾಲಾಗಿರುವ ತಿಪಟೂರು ಮೂಲದ ಯುವಕ
– ಪುತ್ತೂರು: ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
NAMMUR EXPRESS NEWS
ಕುಂದಾಪುರ: ಕುಂದಾಪುರ ತಾಲೂಕಿನ ಬೀಜಾಡಿಯಲ್ಲಿ ಸ್ನೇಹಿತನ ಮದುವೆಗೆಂದು ಬಂದು ಸಮುದ್ರಪಾಲಾಗಿರುವ ತಿಪಟೂರು ಮೂಲದ ಟಿಆರ್ ಯೋಗೀಶ್(23) ಎಂಬ ಯುವಕನ ಪತ್ತೆಗೆ ಇನ್ನೂ ಶೋಧ ಕಾರ್ಯ ಮುಂದುವರಿದಿದೆ.
ಕಳೆದ ಬುಧವಾರ ಸಂಜೆ ಯೋಗೀಶ್ ಇಲ್ಲಿನ ಸಮುದ್ರ ತೀರದಲ್ಲಿ ನೀರಲ್ಲಿ ಆಟವಾಡುವುದಕ್ಕೆ ತೆರಳಿದ್ದು ಆ ವೇಳೆ ಅಲೆಗಳ ಅಲೆಗೆ ಕೊಚ್ಚಿ ಹೋಗಿದ್ದರು. ಯೋಗೀಶ್ ಮೃತಪಟ್ಟಿರುವುದಾಗಿ ಶಂಕಿಸಲಾಗಿದ್ದು, ಕಳೆದ ಮೂರು ದಿನಗಳಿಂದ ಹುಡುಕಾಡುತ್ತಿದ್ದರೂ ಮೃತದೇಹದ ಯಾವುದೇ ಸುಳಿವು ಲಭ್ಯವಾಗಿಲ್ಲ.
ಕುಂದಾಪುರದ ಗೋಪಾಡಿ-ಬೀಜಾಡಿಯ ಸ್ನೇಹಿತನ ಮನೆಯಲ್ಲಿನ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ಯುವಕರು ಸಮುದ್ರ ವಿವಾರಕ್ಕೆ ತೆರಳಿದ್ದರು. ಆ ಪೈಕಿ ಸಂದೀಪ್ ಎನ್ನುವ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ, ಯೋಗೀಶ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಯೋಗೀಶ್ ಐಟಿಐ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಬುಧವಾರ ಸಂಜೆಯವರೆಗೂ ಕಾಣೆಯಾದ ಯುವಕನ ಹುಡುಕಾಟಕ್ಕೆ ಪೊಲೀಸರು, ಮೀನುಗಾರರು, ಸ್ಥಳೀಯರು ಹರಸಾಹಸಪಟ್ಟಿದ್ದು, ಗುರುವಾರ ಬೆಳಗ್ಗಿನಿಂದಲೂ ಮೀನುಗಾರರು, ಪೊಲೀಸರು, ಕರಾವಳಿ ಕಾವಲು ಪಡೆಯುವರು, ಸ್ಥಳೀಯರು ಸತತ ಹುಡುಕಾಟ ನಡೆಸಿದರೂ ಕೂಡ ಪತ್ತೆಯಾಗದಿರುವುದು ಕುಟುಂಬಸ್ಥರಲ್ಲಿ ಮತ್ತಷ್ಟು ದುಃಖಕ್ಕೆ ಕಾರಣವಾಗಿದೆ. ಕಡಲು ಪ್ರಕ್ಷುಬದ್ಧಗೊಂಡಿರುವ ಕಾರಣ ಮೃತದೇಹ ಪತ್ತೆಯಾಗಿಲ್ಲ ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ. ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಯುಬಿ ನಂದಕುಮಾರ್, ಪಿಎಸ್ಐ ಪ್ರಸಾದ್ ಕುಮಾರ್ ಹಾಗೂ ಸಿಬ್ಬಂದಿ ಕೂಡ ಭೇಟಿ ನೀಡಿದ್ದಾರೆ.
ಪುತ್ತೂರಿನಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹೋಟೆಲ್ವೊಂದರಲ್ಲಿ ಸಪ್ಲೈಯರ್ ಆಗಿರುವ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಶುಕ್ರವಾರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ನೆಲ್ಲಿಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಬೊಳುವಾರಿನಲ್ಲಿರುವ ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಶಿವಣ್ಣ(45) ಕಾಣೆಯಾದವರು. ಅವರು ಜೈ.10ರಂದು ಪೇಟೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ಹಿಂದುರುಗಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ದೂರುನಲ್ಲಿ ಉಲ್ಲೇಖಿಸಲಾಗಿದೆ.
ಶಿವಪ್ಪ ಅವರ ಪತ್ನಿ ಗೀತಾ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ನನ್ನ ಗಂಡ ಶಿವಪ್ಪ ಯಾನೆ ಶಿವಣ್ಣ ಬೊಳುವಾರಿನ ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಜೂ.10ರಂದು ಬೆಳಗ್ಗೆ ಅವರು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಹಿಂದುರುಗಿ ಬಂದಿಲ್ಲ. ಈ ಹಿಂದೆಯೂ ಇದೇರೀತಿ ಮನೆಯಿಂದ ಹೋದವರು ಒಂದು ವಾರ ಕಳೆದು ಬಂದಿದ್ದರು. ಹೀಗಾಗಿ, ಅವರು ಹಿಂದುರುಗಿ ಬರಬಹುದೆಂದು ತಿಳಿದುಕೊಂಡಿದ್ದೆ. ಆದರೆ, ಈ ಬಾರಿ ಅವರು ಮನೆಯಿಂದ ಹೋಗಿ 10 ದಿನ ಕಳೆದರೂ ಹಿಂದಿರುಗಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.