ಕುಮಾರಸ್ವಾಮಿಗೆ ಡಿಕೆಶಿ ಟಾಂಗ್!
– ಕುಮಾರಸ್ವಾಮಿ ಅವರಿಗಿಂತ ಮೊದಲು ಚನ್ನಪಟ್ಟಣ ನೋಡಿದ್ದೇನೆ: ಡಿ.ಕೆ.ಶಿವಕುಮಾರ್
– ಜನರನ್ನು ದೇವರು ಎಂದ ಡಿಸಿಎಂ
NAMMUR EXPRESS NEWS
ಮಂಗಳೂರು: ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ನೋಡುವುದಕ್ಕೂ ಮೊದಲೇ ನಾನು ನೋಡಿದ್ದೇನೆ. ಅವರು ತಡವಾಗಿ ರಾಜಕೀಯಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿಂದ ಕುಕ್ಕೆ ಸುಬ್ರಹ್ಯಣ್ಯಕ್ಕೆ ಹೋಗಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಿವಕುಮಾರ್ಗೆ, ಚನ್ನಪಟ್ಟಣಕ್ಕೆ ನೀವು ಏನೂ ಮಾಡಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಚನ್ನಪಟ್ಟಣಕ್ಕೆ ನಾನು ಏನು ಮಾಡಿದ್ದೇನೆ, ಏನು ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿಯವರಿಗೇನು ಗೊತ್ತು? ನಾನು 1985ರಲ್ಲೇ ಅವರ ತಂದೆ ವಿರುದ್ಧ ಚುನಾವಣೆಗೆ ನಿಂತವನು. ಕುಮಾರಸ್ವಾಮಿ ಅವರು 1995ರ ಬಳಿಕ ಲೋಕಸಭಾ ಚುನಾವಣೆಗೆ ನಿಂತವರು. ದೊಡ್ಡವರು ಅಧಿಕಾರ ಅನುಭವಿಸಿದರೂ ಚನ್ನಪಟ್ಟಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಲ್ಲಿನ ಜನರಿಗೆ ಅಳಿಲು ಸೇವೆ ಮಾಡೋಣ. ಹಿಂದೆ ಮಂತ್ರಿಯಾಗಿದ್ದಾಗ ಸೇವೆ ಮಾಡಿದ್ದೇನೆ. ಈಗ ಉತ್ತಮ ಸಮಯ ಒದಗಿ ಬಂದಿದೆ. ಸಣ್ಣ ಸಹಾಯ ಮಾಡೋಣ ಎಂದು ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಹೇಳಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ತಮ್ಮ ಡಿ.ಕೆ. ಸುರೇಶ್ ಗೆ ಆಸಕ್ತಿಯಿಲ್ಲ. ಜನರು ಸುರೇಶ್ಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ ಅವರಿಗೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ. ನಮ್ಮನ್ನು ನಂಬಿ ಚನ್ನಪಟ್ಟಣದ ಜನ 85ಸಾವಿರ ಮತಕೊಟ್ಟಿದ್ದಾರೆ. ನಮ್ಮನ್ನು ನಂಬಿದ ಜನರ ಕೈ ಬಿಡುವುದಕ್ಕೆ ಆಗುವುದಿಲ್ಲ. ದೇವರಂತ ಜನ ರಾಜ್ಯದಲ್ಲಿ ನಮಗೆ 136 ಸ್ಥಾನ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಜನರ ಅಭಿವೃದ್ಧಿಗೆ ವಿನಿಯೋಗಿಸಬೇಕಿದೆ ಎಂದರು.
ಹೆಚ್ಚುವರಿ ಡಿಸಿಎಂ ಸ್ಥಾನಗಳ ಬೇಡಿಕೆ ಬಗ್ಗೆ ಮಾತನಾಡಿ, ನೀವು ದಿನವೂ ಈ ಬಗ್ಗೆ ಸುದ್ದಿ ಮಾಡುತ್ತಿದ್ದೀರಿ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿಪಡುವವರಿಗೆ ಬೇಡ ಎಂದು ಹೇಳಲು ಆಗುತ್ತದೆಯೇ? ಯಾರು ಏನು ಬೇಕಾದರೂ ಬೇಡಿಕೆ ಇಡಲಿ. ಪಕ್ಷವು ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತದೆ’ ಎಂದರು.
ತಮ್ಮ ಮೇಲಿನ ದ್ವೇಷದ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಮೈನಿಂಗ್ ಬಗ್ಗೆ ಹೆಚ್ಡಿಕೆ ಅವರಿಗೆ ತಿಳುವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ಆ ಬಗ್ಗೆ ಏನೂ ಗೊತ್ತಿಲ್ಲ ಎಂದರು.
ನಾವು ಹಿಂದೂಗಳು… ಕುಟುಂಬ ಸಮೇತ ಪೂಜೆ
ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು. ಬಹಳ ದಿನದಿಂದ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂಬ ಆಸೆಯಿತ್ತು. ಆದ ಕಾರಣ ಕುಟುಂಬ ಸಮೇತ ಹೋಗುತ್ತಿದ್ದೇನೆ. ಅವರವರ ನಂಬಿಕೆ ಪ್ರಕಾರ ಅವರು ಪ್ರಾರ್ಥಿಸುತ್ತಾರೆ ಎಂದು ಕುಕ್ಕೆ ಭೇಟಿಗೆ ಪ್ರತಿಕ್ರಿಯಿಸಿದ್ದಾರೆ.