ಕರಾವಳಿ ಟಾಪ್ ನ್ಯೂಸ್
– ಹಾಲಿಗೆ ಬೆಲೆ ಏರಿಕೆ: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ
– ಕಾಸರಗೋಡು: ಮಗುಚಿ ಬಿದ್ದ ಹಿಟಾಚಿ ಅಡಿಗೆ ಸಿಲುಕಿ ಯುವಕ ಮೃತ್ಯು
– ಉಡುಪಿ: ಗ್ಯಾಂಗ್ವಾರ್ ಮಾಡಿದ್ದ ಆರೋಪಿಗಳು ಜೈಲಿನಲ್ಲಿಯೂ ದಾಂಧಲೆ
NAMMUR EXPRESS NEWS
ಮಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ಏರಿಕೆಯ ಬಿಸಿಯಿಂದ ಜನಸಾಮಾನ್ಯರು ಕಂಗಾಲಾಗುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ಪಾಡಿಗೆ ತಾನು ಜನರನ್ನು ದೋಚುವುದರಲ್ಲಿ ನಿರತವಾಗಿದ್ದು ಅದರ ಮುಂದುವರಿದ ಭಾಗವಾಗಿ ಸರ್ಕಾರ ಈಗ ಹಾಲಿಗೆ ಏಕಾಏಕಿ 2 ರೂ ಏರಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಣ್ಣಿಗೆ ಕಂಡದ್ದೆಲ್ಲದರ ಬೆಲೆ ಏರಿಸುವುದರಲ್ಲಿ ಹಠಕ್ಕೆ ಬಿದ್ದಿರುವಂತೆ ವರ್ತಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅತ್ತ ರೈತರ ಬದುಕಿಗೂ ಉಪಕಾರಿಯಾಗಿಲ್ಲ, ಬಡವರ ಬದುಕಿಗೂ ನೆಮ್ಮದಿಯಿಲ್ಲ. ಒಂದೆಡೆ ಹಾಲು ಉತ್ಪಾದಕರಿಗೆ ಬಾಕಿ ಉಳಿಸಿರುವ ಸಬ್ಸಿಡಿ ಹಣ ನೀಡದೆ ಸತಾಯಿಸುವುದು, ಇನ್ನೊಂದೆಡೆ ಗ್ರಾಹಕರಿಗೆ ಹಾಲಿನ ಬೆಲೆಯೇರಿಕೆ ಬಿಸಿ ಮುಟ್ಟಿಸುವುದು. ಇದು ರೈತ ವಿರೋಧಿ ಸರ್ಕಾರವೂ ಹೌದು. ಬಡ ಜನರ ವಿರೋಧಿ ಸರ್ಕಾರವೂ ಹೌದು. ಮಾನ್ಯ ಮುಖ್ಯಮಂತ್ರಿಗಳಂತೂ ರಾಜ್ಯದ ಜನತೆಗೆ ಉತ್ತರಿಸಲಾಗದೇ, ಹಾಲಿನ ದರ ಏರಿಕೆಯ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಮಾಧ್ಯಮಗಳಲ್ಲಿ ನುಣುಚಿಕೊಳ್ಳಲು ಯತ್ನಿಸಿದ್ದಂತೂ ಅತ್ಯಂತ ಹಾಸ್ಯಾಸ್ಪದ. ಕೊನೆಪಕ್ಷ ಇನ್ನಾದರೂ ಈ ಕೃತಕ ಬೆಲೆ ಏರಿಕೆಗೆ ನಿಯಂತ್ರಣ ಹೇರಿ ಜನಸಾಮಾನ್ಯರು ನೆಮ್ಮದಿಯಿಂದ ಇರಲು ಬಿಡಿ ಎಂದು ಆಗ್ರಹಿಸಿದರು
ಉಡುಪಿ: ಗ್ಯಾಂಗ್ವಾರ್ ಮಾಡಿದ್ದ ಆರೋಪಿಗಳು ಜೈಲಿನಲ್ಲಿಯೂ ದಾಂಧಲೆ
ಉಡುಪಿಯ ನಡುರಸ್ತೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಗ್ಯಾಂಗ್ವಾರ್ ನಡೆಸಿದ್ದ ಪಾತಕಿಗಳ ತಂಡವೊಂದು ಇತ್ತೀಚೆಗೆ ಜೈಲುಪಾಲಾಗಿದ್ದು, ಇದೀಗ ಜೈಲಿನಲ್ಲಿಯೂ ದಾಂಧಲೆ ಎಬ್ಬಿಸಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಗ್ಯಾಂಗ್ವಾರ್ ಆರೋಪದಡಿ ನಡುರಸ್ತೆಯಲ್ಲಿ ಇನ್ನೊಂದು ಗುಂಪಿನ ತಂಡದವರ ಮೇಲೆ ಕಾರು ಚಲಾಯಿಸಲು ಹಾಗೂ ತಲವಾರಿನಿಂದ ಹಲ್ಲೆಗೆ ಯತ್ನಿಸಿ ಜೈಲುಪಾಲಾಗಿರುವ ಮುಹಮ್ಮದ್ ಆಶಿಕ್ ಹಾಗೂ ಮಹಮ್ಮದ್ ಸಕ್ಲೇನ್, ಪಿಜನ್ ಕಾಲ್ ಸಿಸ್ಟಮ್ ಕರೆ ಮಾಡಲು ತಡವಾಯಿತೆಂದು ಹೇಳಿ ಕರ್ತವ್ಯದಲ್ಲಿದ್ದ ಜೈಲರ್ ಎಸ್ಎ. ಶಿರೋಳ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕುವ ಮೂಲಕ ಅವರ ವಿರುದ್ಧ ಜೋರಾಗಿ ಕೂಗಾಡಿದ್ದಾರೆ.
ನಂತರ ಸಕ್ಲೇನ್, ಅಡುಗೆ ಕೋಣೆಯಲ್ಲಿರುವ ಸೌಟು & ಮರದ ಕುರ್ಚಿಯಿಂದ ಸಿಬ್ಬಂದಿಗೆ ಹಲ್ಲೆಗೆ ಪ್ರಯತ್ನಿಸಿದ್ದಾನೆ. ಅಷ್ಟೇಅಲ್ಲ ಅಧೀಕ್ಷಕರ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಯೊಂದಿಗೆ ಮತ್ತೆ ಗಲಾಟೆ ಆರಂಭಿಸಿ ಸಿಬ್ಬಂದಿಯನ್ನು ತಳ್ಳಿ ಕೊಠಡಿಯಲ್ಲಿದ್ದ ಬೆಂಕಿ ನಂದಿಸುವ ಯಂತ್ರವನ್ನು ತೆಗೆಯಲು ಪ್ರಯತ್ನಿಸಿದ್ದಾರೆ.
ಈ ನಡುವೆ ಕರ್ತವ್ಯದಲ್ಲಿದ್ದ ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಜು ಬಿ. ಪಾಟೀಲ್ ಹಾಗೂ ಸಿಬ್ಬಂದಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಅದರಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿನ್ನಲೆಯಲ್ಲಿ ಆರೋಪಿಗಳನ್ನು ಬೇರೆ ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡುವಂತೆ ಜೈಲು ಅಧೀಕ್ಷಕರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಅದರಂತೆ ಕೋರ್ಟ್ ಕೂಡ ಬೇರೆ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸುವುದಕ್ಕೆ ಅನುಮತಿಯನ್ನು ನೀಡಿದೆ.
ಮಗುಚಿ ಬಿದ್ದ ಹಿಟಾಚಿ ಅಡಿಗೆ ಸಿಲುಕಿ ಯುವಕ ಮೃತ್ಯು
ಕಾಸರಗೋಡು: ಹಿಟಾಚಿ ಯಂತ್ರ ಮಗುಚಿ ಬಿದ್ದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಜೂ .೨೫ ರ ಮಂಗಳವಾರ ಬೆಳಿಗ್ಗೆ ಬೇಡಡ್ಕ ಠಾಣಾ ವ್ಯಾಪ್ತಿಯ ಬಂದಡ್ಕದಲ್ಲಿ ನಡೆದಿದೆ.
ಮೃತ ಯುವಕನನ್ನು ಬಂದಡ್ಕದ ಪ್ರೀತಂ ಲಾಲ್ ಚಂದ್ (22) ಎಂದು ಗುರುತಿಸಲಾಗಿದೆ. ಈತ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ರವರ ಪುತ್ರ ಅವರಿಗೆ ಸೇರಿದ ಜೆಸಿಬಿ ಯಂತ್ರ ತೊಳೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ
ಬಂದಡ್ಕ ಪಡುಪ್ಪುನಲ್ಲಿರುವ ಸಂಬಂಧಿಕರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಂಗಳದಲ್ಲಿ ನಿಲ್ಲಿಸಿದ್ದ ಹಿಟಾಚಿ ತೊಳೆಯುತ್ತಿದ್ದಾಗ ಮಗುಚಿ ಬಿದ್ದಿದ್ದು, ಅದರಡಿ ಸಿಲುಕಿದ್ದ ಲಾಲ್ ಅವರನ್ನು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಲಿಲ್ಲ. ಇವರ ಸಹೋದರ ಗೌತಮ್ ಲಾಲ್ ರವರ ಜೆಸಿಬಿ ಯಂತ್ರದಲ್ಲಿ ಸಹಾಯಕರಾಗಿ
ಕೆಲಸ ನಿರ್ವಹಿಸುತ್ತಿದ್ದರು. ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ