ಮಂಗಳೂರು ಹಲವೆಡೆ ಜಲಾವೃತ!
– ಜಪ್ಪಿನಮೊಗೆರು ದೊಂಪದಬಲಿ ಪ್ರದೇಶ ಜಲಾವೃತ
– ದಕ್ಷಿಣ ಕನ್ನಡದ ಅಪಾಯಕಾರಿ ಮನೆಗಳ ಬಗ್ಗೆ ಸರ್ವೆ: ಸಚಿವ ಕೃಷ್ಣ ಬೈರೇಗೌಡ
– ಮುನ್ನೂರು ಗ್ರಾಮದ ದುರಂತ ಸ್ಥಳಕ್ಕೆ ಭೇಟಿ ನೀಡಿದ ಸಚಿವರು
NAMMUR EXPRESS NEWS
ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಅನಿವಾರ್ಯವಾಗಿ ಇಂತಹ ಇಳಿಜಾರು ಮತ್ತು ತಗ್ಗು ಪ್ರದೇಶದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿರುವುದು ಸಾಮಾನ್ಯವಾಗಿದೆ. ಇಂತಹ ದುರಂತಗಳಾದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮೊದಲೃ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಉಳ್ಳಾಲದ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಬುಧವಾರ ತಡೆಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿ, ಜಿಲ್ಲೆಯಲ್ಲಿರುವ ಅಪಾಯಕಾರಿ ಮನೆಗಳ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಸೂಚನೆ ಮೇರೆಗೆ ನಾನಿಲ್ಲಿಗೆ ಭೇಟಿ ನೀಡಿದ್ದೇನೆ.
ಸ್ಥಳೀಯ ಶಾಸಕರೂ ಆದ ಸ್ಪೀಕರ್ ಯುಟಿ ಖಾದರ್ ಘಟನೆ ನಡೆದ ತಕ್ಷಣ ನನಗೆ ಮಾಹಿತಿ ನೀಡಿದ್ದರು. ಮಳೆಗಾಲದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಈ ರೀತಿಯ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಮಂಗಳವಾರ ರಾತ್ರಿ ಸತತವಾಗಿ ಮಳೆ ಸುರಿದಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಿಲ್ಲ. ನನಗೆ ತಿಳಿದ ಮಾಹಿತಿ ಪ್ರಕಾರ, ಬುಧವಾರ ಮುಂಜಾನೆ ಸುಮಾರು 3ರಿಂದ 4ರ ಮಧ್ಯೆ ಈ ಘಟನೆಯು ನಡೆದಿರುವ ಸಾಧ್ಯತೆಯಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಸರ್ಕಾರದಿಂದ ಗರಿಷ್ಠ ಪರಿಹಾರ ಕೊಡಿಸಲು ಜರಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಜಪ್ಪಿನಮೊಗೆರು ದೊಂಪದಬಲಿ ಪ್ರದೇಶ ಜಲಾವೃತ
ಮಂಗಳೂರು: ಮಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಪ್ಪಿನಮೊಗೆರು ಪ್ರದೇಶದಲ್ಲಿ ಮಳೆಯಿಂದಾಗಿ ಹಲವು ರಸ್ತೆಗಳು ಹಾಗೂ ಮನೆಗಳು ಜಲಾವೃತಗೊಂಡಿದೆ. ಇಲ್ಲಿನ ದೊಂಪದಬಲಿ ಎಂಬಲ್ಲಿನ ರಾಜಾಕಾಲುವೆ ಬ್ಲಾಕ್ ಆಗಿ ನೀರು ನದಿ ಸೇರದೆ ಈ ಕೃತಕ ನೆರೆ ಉಂಟಾಗಿದೆ.
ಹಲವಾರು ವರ್ಷಗಳಿಂದ ಇಲ್ಲಿ ರಸ್ತೆ ಸಮಸ್ಯೆ ಇದ್ದು, ಇತ್ತೀಚೆಗೆ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದ್ರೆ ಕಾಂಕ್ರೀಟ್ ರಸ್ತೆಯ ಇಕ್ಕೆಲೆಗಳಲ್ಲಿ ನಿರ್ಮಿಸಬೇಕಾದ ಚರಂಡಿಯನ್ನು ನಿರ್ಮಾಣ ಮಾಡದೆ ಇರುವುದು ಇದಕ್ಕೆ ಕಾರಣ ಎಂದು ಸ್ಥಳಿಯರು ದೂರಿದ್ದಾರೆ. ಮೊದಲೇ ತಗ್ಗು ಪ್ರದೇಶದಲ್ಲಿ ಇರುವ ದೊಂಪದ ಬಲಿ ಪ್ರದೇಶ ರಸ್ತೆಗಿಂತ ಕೆಳಗೆ ಇರುವ ಕಾರಣ ರಸ್ತೆಯಲ್ಲಿ ಹರಿಯುವ ನೀರು ನೇರ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಚರಂಡಿ ನಿರ್ಮಾಣ ಮಾಡಿದ್ದೇ ಆಗಿದ್ದಲ್ಲಿ ಈ ರೀತಿಯ ಸಮಸ್ಯೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಕಾರ್ಪೋರೇಟರ್ ವೀಣಾಮಂಗಳ ಸ್ಥಳೀಯ ನಿವಾಸಿಗಳು ತ್ಯಾಜ್ಯ ವಿಲೇವಾರಿಯಲ್ಲಿ ಸಹಕರಿಸದೇ ಇರುವುದು ಈ ಸಮಸ್ಯೆಗೆ ಮೂಲಕ ಕಾರಣ ಎಂದು ಹೇಳಿದ್ದಾರೆ. ಎಲ್ಲಾ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಲ್ಲಿನ ಚರಂಡಿಗೆ ಎಸೆಯುವ ಕಾರಣ ಇವುಗಳುರಾಜಾಕಾಲುವೆಯಲ್ಲಿ ಶೇಖರಣೆಯಾಗಿ ಈ ರೀತಿ ಅವಾಂತರ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ ನೀರು ಸರಾಗವಾಗಿ ಹರಿದು ರಾಜಕಾಲುವ ಸೇರಲು ಚರಂಡಿ ನಿರ್ಮಾಣದ ವೇಳೆ ಕೆಲವರು ಅನಗತ್ಯವಾಗಿ ಸ್ಟೇ ತಂದು ಕಾಮಗಾರಿ ತಡೆ ಹಿಡಿದಿದ್ದಾರೆ ಎಂದು ಸ್ಥಳಿಯರ ಅಸಹಕಾರದಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ.