ಟಾಪ್ 7 ನ್ಯೂಸ್ ಕರಾವಳಿ
– ನಾಯಿ ಮಹಿಳೆಯ ಜೀವ ಉಳಿಸಿತು..!
– ಉಪ್ಪಿನಂಗಡಿ: ಮನೆಯೊಡತಿಯ ಆತ್ಮಹತ್ಯೆ ತಡೆದ ಶ್ವಾನ!
– ಬೆಳ್ತಂಗಡಿ: ಬೆಳ್ಳಂಬೆಳಗ್ಗೆ ಭೀಕರ ಕಾರು ಅಪಘಾತ, ಚಾಲಕ ಮೃತ್ಯು!
– ಮಂಗಳೂರು: ಗಾಂಜಾ ಸೇವನೆ; ಮೂವರು ವಶಕ್ಕೆ
– ಕಾರ್ಕಳ: ನಾಯಿ ಅಡ್ಡ ಬಂದು ಬೈಕ್ ಪಲ್ಟಿ: ನವ ವಿವಾಹಿತೆ ಸಾವು
– ಉಡುಪಿ: ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು
– ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಹಾಗೂ 65 ಮಂದಿಗೆ ಸಮನ್ಸ್
– ಸುಳ್ಯ: ಮಳೆಗೆ ಮತ್ತೊಂದು ಬಲಿ: ಹೊಳೆಗೆ ಬಿದ್ದು ಸಾವು
NAMMUR EXPRESS NEWS
ಉಪ್ಪಿನಂಗಡಿ: ನಾಯಿಯೊಂದು ಮಹಿಳೆಯ ಜೀವ ಉಳಿಸಿದ ಘಟನೆ ಕರಾವಳಿಯಲ್ಲಿ ನಡೆದಿದೆ.
ಪತಿಯೊಂದಿಗೆ ಮುನಿಸಿಕೊಂಡು ಆತ್ಮಹತ್ಯೆ ಮಾಡುವ ಸಲುವಾಗಿ ನೇತ್ರಾವತಿ ಸೇತುವೆಯ ತಡೆಗೋಡೆ ಏರಿದ್ದ 36 ವರ್ಷದ ಮಹಿಳೆಯ ಜೀವ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿಯಿಂದಾಗಿ ಉಳಿಸಿದೆ. ಪಿಲಿಗೂಡು ನಿವಾಸಿ ಮಹಿಳೆ ಪತಿಯೊಂದಿಗೆ ಗಲಾಟೆ ಮಾಡಿಕೊಂಡು ಗುರುವಾರ ರಾತ್ರಿ ನಡೆದುಕೊಂಡೇ 4 ಕಿ.ಮೀ. ದೂರದ ನೇತ್ರಾವತಿ ಸೇತುವೆಗೆ ಬಂದು ನದಿಗೆ ಹಾರಲು ಯತ್ನಿಸುತ್ತಿದ್ದರು. ಆದರೆ ಅವರನ್ನು ಮನೆಯಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಅಪಾಯವನ್ನು ಅರಿತು ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದು, ಬೊಗಳುತ್ತಾ ರಸ್ತೆಯಲ್ಲಿ ಹೋಗುತ್ತಿರುವವರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿತ್ತು. ಇದೇ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವರು ಇದನ್ನು ಕಂಡು ಪರಿಚಯದ ಸಮಾಜ ಸೇವಕರೋರ್ವರ ಮೂಲಕ ಇನ್ನೇನು ನದಿಗೆ ಹಾರುವಂತಿದ್ದ ಮಹಿಳೆಯನ್ನು ರಕ್ಷಿಸಿದ ಘಟನೆ ರಾತ್ರಿ ಸಂಭವಿಸಿದೆ. ಒಟ್ಟಾರೆ ಮೂಕಪ್ರಾಣಿಯಾದ ನಾಯಿಯ ತುಡಿತ ಮತ್ತು ಪ್ರಯತ್ನ ಮಹಿಳೆಯನ್ನು ರಕ್ಷಿಸಲು ನೆರವಾದಂತಾಗಿದೆ.
ಬೆಳ್ಳಂಬೆಳಗ್ಗೆ ಭೀಕರ ಕಾರು ಅಪಘಾತ, ಚಾಲಕ ಮೃತ್ಯು!
ಬೆಳ್ತಂಗಡಿ: ಉಜಿರೆ ಮುಖ್ಯದ್ವಾರದಿಂದ ಕಾಲೇಜು ರಸ್ತೆಯಲ್ಲಿ ಅತಿ ವೇಗದಲ್ಲಿ ಬಂದ ಕಾರು ನಿಯಂತ್ರಣ ಕಳೆದುಕೊಡು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟಿರುವ ಘಟನೆ ಉಜಿರೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೃತ ಕಾರು ಚಾಲಕ ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ (35) ಎಂದು ಗುರುತಿಸಲಾಗಿದೆ.ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕಾಲೇಜು ರಸ್ತೆಯಿಂದ ಬೆಳ್ತಂಗಡಿ ಸಾಗುವ ಮಧ್ಯೆ ಡಿವೈಡರ್ ನ ಬೀದಿ ದೀಪದ ಕಂಬಗಳಿಗೆ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರು ಮುಂಭಾಗ ನಜ್ಜು ಗುಜ್ಜಾದರೆ, ಒಂದು ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದಿದೆ. ಅಪಘಾತ ರಭಸಕ್ಕೆ ಚಾಲಕ ಪ್ರಜ್ವಲ್ ತಲೆಗೆ ಗಂಭೀರ ಗಾಯವಾಗಿದ್ದು, ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
– ಮಂಗಳೂರು: ಗಾಂಜಾ ಸೇವನೆ; ಮೂವರು ವಶಕ್ಕೆ
ಮಂಗಳೂರು: ಗಾಂಜಾ ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್, ಪ್ರಸನ್ನ ಕಾಮತ್ ಮತ್ತು ಅಜಯ್ ಎಂಬವನ್ನು ಕಂಕನಾಡಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮಾಡುವ ವೇಳೆ ಮಾದಕ ವಸ್ತು ಸೇವಿಸಿರುವ ಘಾಟು ವಾಸನೆ ಬಂದಿದ್ದು, ಗಾಂಜಾ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಹಾಗೂ ನಿಷೇಧಿತ ಮಾದಕ ವಸ್ತುಗಳನ್ನು ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
– ನಾಯಿ ಅಡ್ಡ ಬಂದು ಬೈಕ್ ಅಪಘಾತ: ನವ ವಿವಾಹಿತೆ ಸಾವು
ಕಾರ್ಕಳ: ಗುರುವಾಯನಕೆರೆ ರಸ್ತೆಯ ಹೊಸ್ಮಾರು ಸೇತುವೆ ಬಳಿ ಬೈಕ್ಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಅಪಘಾತಗೊಂಡು ನವವಿವಾಹಿತೆ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಹೊಸ್ಮಾರು ಬಳಿ ನಡೆದಿದೆ. ಈದು ಗ್ರಾಮದ ಕರೆಂಬಾಲುವಿನ ವಿಶಾಲ್ ಅವರ ಪತ್ನಿ ನೀಕ್ಷಾ (26) ಎಂಬವರೇ ಮೃತಪಟ್ಟ ಮಹಿಳೆ. ಮದುವೆಯಾಗಿ ಮೂರು ತಿಂಗಳು ಕಳೆದಿದ್ದು ಇವರು ಗಂಡನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ನಾಯಿ ರಸ್ತೆಗೆ ಅಡ್ಡ ಬಂದಿದ್ದು, ಪರಿಣಾಮ ಬೈಕ್ ರಸ್ತೆಗೆಸೆಯಲ್ಪಟ್ಟಿತ್ತು. ಘಟನೆಯಿಂದ ಸಹಸವಾರೆ ನೀಕ್ಷಾ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು. ನೀಕ್ಷಾ ಅವರ ತಂದೆ ಪ್ರೀತಿ ಟೈಮ್ಸ್ ಸೆಂಟರ್ ಮಾಲಿಕ ಪ್ರಕಾಶ್ ಅವರು 9 ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
– ಉಡುಪಿ: ಮಹಿಳೆ ಹೊಟ್ಟೆಯಲ್ಲಿದ್ದ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು
ಉಡುಪಿ: ಸುಮಾರು 32 ವರ್ಷಗಳಿಂದ ದುರ್ಮಾಂಸ ಗಡ್ಡೆಯಿಂದ ಬಳಲುತ್ತಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಸುಮಾರು 8 ಕೆಜಿ ದುಮಾಂಸವನ್ನು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞರು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಕಾರ್ಕಳದ ನಿವಾಸಿ ಪುಷ್ಪಾ (71) ಅವರ ಭುಜದ ಭಾಗದಲ್ಲಿ ಈ ಗಡ್ಡೆ ಇತ್ತು. ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜೂ.26ರಂದು ಶಸ್ತ್ರಚಿಕಿತ್ಸ ತಜ್ಞ ಡಾ| ಸುಜಿತ್ ಅವರು ತಮ್ಮ ತಂಡದೊಂದಿಗೆ ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಈ ಗಡ್ಡೆಯನ್ನು ಹೊರತೆಗೆದಿದ್ದಾರೆ. ಆಸ್ಪತ್ರೆಯ ಜನರಲ್ ಸರ್ಜನ್ ಆಗಿರುವ ಡಾ| ಸುಜಿತ್ ಅವರ ನೇತೃತ್ವದಲ್ಲಿ ಅರವಳಿಕೆ ತಜ್ಞರಾದ ಡಾ| ಉಮೇಶ್ ಉಪಾಧ್ಯಾಯ ಹಾಗೂ ಡಾ| ವಿಶ್ವನಾಥ್ ಶೆಟ್ಟಿ ಹಾಗೂ ನುರಿತ ಶುಶ್ರೂಷಕ ಅಧಿಕಾರಿಗಳ ಸಹಯೋಗದೊಂದಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಪ್ರಸ್ತುತ ರೋಗಿಯು ಚೇತರಿಕೆ ಕಾಣುತಿದ್ದಾರೆ.
– ಶಾಸಕ ಹರೀಶ್ ಪೂಂಜ ಹಾಗೂ 65 ಮಂದಿಗೆ ಸಮನ್ಸ್ ಜಾರಿ
ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ
ಶಶಿರಾಜ್ ಶೆಟ್ಟಿ ಪರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಎರಡು ಪ್ರತ್ಯೇಕ ಕೇಸ್ಗೆ ಸಂಬಂಧಪಟ್ಟಂತೆ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಸೇರಿದಂತೆ 65 ಮಂದಿ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಮೊದಲ ಕೇಸ್ನಲ್ಲಿ 28 ಮಂದಿ ಮತ್ತು 2ನೇ ಕೇಸ್ನಲ್ಲಿ 37 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಜುಲೈ 10ರಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ನ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸುಳ್ಯ: ಕಾಲು ಜಾರಿ ಹೊಳೆಗೆ ಬಿದ್ದು ವ್ಯಕ್ತಿ ಸಾವು
ಸುಳ್ಯ: ವ್ಯಕ್ತಿಯೋರ್ವರು ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಬಾಜಿನಡ್ಕದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬಾಜಿನಡ್ಕದ ಚನಿಯ(50) ಎಂದು ಗುರುತಿಸಲಾಗಿದೆ.ಚನಿಯ ಅವರು ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆ ಸಮೀಪದ ಹೊಳೆಗೆ ಹೋಗಿದ್ದಾರೆ. ಈ ವೇಳೆ ಹೊಳೆಗೆ ಕಾಲು ಜಾರಿ ಬಿದ್ದಿದ್ದಾರೆ. ಚನಿಯ ಅವರು ಹೊಳೆಗೆ ಬಿದ್ದಿದ್ದನ್ನು ಕಂಡ ಮನೆಯವರು ಬೊಬ್ಬೆ ಹಾಕಿದಾಗ ಹತ್ತಿರ ಇರುವ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನ್ಸ ಮುಗೇರರವರು ಓಡಿಬಂದು ನೀರಿಗಿಳಿದು ಚನಿಯರವರನ್ನು ನೀರಿನಿಂದ ಮೇಲೆತ್ತಿದ್ದದರಾದರೂ, ಅವರು ಆಗಲೇ ಮೃತಪಟ್ಟಿದ್ದರೆಂದು ತಿಳಿದುಬಂದಿದೆ.