ಡೇಂಜರ್…ಕಾರ್ಕಳದ ಮರ್ಣೆ ನೀರಿನ ಟ್ಯಾಂಕ್!
– ಯಾವುದೇ ಕ್ಷಣದಲ್ಲಿ ಬೀಳುತ್ತೆ ನೀರಿನ ಟ್ಯಾಂಕ್ ಹುಷಾರ್
– ಸುಮಾರು 30 ವರ್ಷಗಳ ಹಿಂದೆ ನಿರ್ಮಾಣಗೊಂಡ ಟ್ಯಾಂಕ್
NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ 5000 ಲೀಟರ್ ಸಾಮರ್ಥ್ಯದ ಹಳೆಯ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಅಪಾಯ ಎದುರಿಸುತ್ತಿದೆ.
ಸ್ಥಳೀಯ ಜನರು ಅಪಾಯಕಾರಿಯಾಗಿರುವ ಈ ಬೃಹತ್ ನೀರಿನ ಟ್ಯಾಂಕರ್ ತೆರವಿಗೆ ಸೂಕ್ತ ಕ್ರಮ ಜರುಗಿಸುವಂತೆ ಪಂಚಾಯತ್ನವರಿಗೆ ಹಲವು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಪಂಚಾಯತ್ ವಠಾರದಲ್ಲೇ ಇರುವ ಈ ಎರಡು ಟ್ಯಾಂಕ್ಗಳ ಪೈಕಿ ಸುಮಾರು ಮೂವತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ ಹಳೇಯ ನೀರಿನ ಟ್ಯಾಂಕ್ ಸಂಪೂರ್ಣ ದುಸ್ಥಿತಿಯಲ್ಲಿದ್ದು, ಕಾಂಕ್ರಿಟ್ನ ರಾಡ್ಗಳು ಕೂಡ ತುಕ್ಕು ಹಿಡಿದಿವೆ.
ಶಿಥಿಲಾವಸ್ಥೆಯ ನೀರಿನ ಟ್ಯಾಂಕ್ನ ಪಕ್ಕದಲ್ಲೇ ಪಂಚಾಯತ್, ವಿಎ ಕಚೇರಿಯಿದೆ. ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಸೇರಿದಂತೆ ಹಲವು ಸಾರ್ವಜನಿಕ ಸೇವಾ ಕೇಂದ್ರಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಇಲ್ಲಿಗೆ ಬಂದು ಹೋಗುತ್ತಾರೆ. ಹೀಗಿರುವಾಗ, ಈ ಅಪಾಯದ ಮುನ್ಸೂಚನೆಯನು ಅರಿತು ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಸಂಭವಿಸುವ ಎಲ್ಲ ಸಾಧ್ಯತೆಗಳಿವೆ.
ಗ್ರಾಮ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದ್ದರೂ ಪ್ರಯೋಜನವಾಗಿಲ್ಲ. ಈಗ ಮಳೆಗಾಲ ಆರಂಭವಾಗಿದ್ದು, ಮತ್ತಷ್ಟು ಅಪಾಯದ ಮುನ್ಸೂಚನೆ ನೀಡಿದೆ.