ಟಾಪ್ 4 ನ್ಯೂಸ್ ಕರಾವಳಿ
ಮಂಗಳೂರು: ಕಟ್ಟಡ ಕಾಮಗಾರಿ ವೇಳೆ ದುರಂತ, ಮಣ್ಣಿನಡಿ ಸಿಲುಕಿದ ಕಾರ್ಮಿಕರು
– ಮಂಗಳೂರು: ಬಸ್ ನಲ್ಲಿ ಮಹಿಳೆಯ 67ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು.!!
– ಉಡುಪಿ: ಪ್ರಾಕೃತಿಕ ವಿಕೋಪ, ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಕ್ಕೆ ಸೂಚನೆ
– ಮಂಗಳೂರು: ದನ ಅಡ್ಡ ಬಂದು ಸ್ಕೂಟರ್ ಪಲ್ಟಿ ಯುವಕ ಮೃತ್ಯು!
NAMMUR EXPRESS NEWS
ಮಂಗಳೂರು : ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ, ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು ಗುಡ್ಡ ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ನಗರದ ಬಲ್ಮಠ ರೋಡ್ ಸಮೀಪ ನಡೆದಿದೆ. ಕಟ್ಟಡ ನಿರ್ಮಾಣದ ವೇಳೆ ಘಟನೆ ನಡೆದಿದ್ದು, ಮಣ್ಣಿನಡಿ ಸಿಲುಕಿರುವ ಕಾರ್ಮಿಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
– ಮಂಗಳೂರು: ಬಸ್ ನಲ್ಲಿ ಮಹಿಳೆಯ 67ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು.!!
ಮಂಗಳೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ನಲ್ಲಿದ್ದ ಸುಮಾರು 67.75 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವುಗೈದಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಕಾರ್ಯಕ್ರಮದಲ್ಲಿ ತೊಡಲೆಂದು ಅವರು ಬ್ಯಾಗ್ನಲ್ಲಿ ಚಿನ್ನಾಭರಣವನ್ನು ಕೊಂಡೊಯ್ದಿದ್ದಾರೆ. ಅದರಲ್ಲಿ 110ಗ್ರಾಂ ತೂಕದ ವಜ್ರದ ಹರಳುಗಳಿರುವ ವಿವಿಧ ಬಗೆಯ ಚಿನ್ನಾಭರಣಗಳಿತ್ತು. ಈ ಚಿನ್ನಾಭರಣವನ್ನು ತಮ್ಮ ಹ್ಯಾಂಡ್ಬ್ಯಾಗ್ ನಲ್ಲಿರಿಸಿ ಜೂನ್ 19ರಂದು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಕೆಎಸ್ಆರ್ಟಿಸಿ ಐರಾವತ ಬಸ್ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದರು. ಹಾಸನ ತಲುಪಿದಾಗ ಅವರ ಹ್ಯಾಂಡ್ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳುವಾಗಿತ್ತು. ಮಂಗಳೂರು – ಹಾಸನ ನಡುವೆ ಅವರ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ನಡು ವಯಸ್ಸಿನ ಮಹಿಳೆ ಕಳವುಗೈದಿರುವ ಸಾಧ್ಯತೆಯಿದೆ ಎಂದು ಚಿನ್ನಾಭರಣ ಕಳೆದುಕೊಂಡ ಮಹಿಳೆ ಓರ್ವ ಪೊಲೀಸರಿಗೆ ದೂರು ನೀಡಿದ್ದಾರೆ.
– ಉಡುಪಿ: ಪ್ರಾಕೃತಿಕ ವಿಕೋಪ, ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಕ್ಕೆ ಸೂಚನೆ
ಉಡುಪಿ : ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ವಿವಿಧ ಪ್ರವಾಸಿ ಸ್ಥಳಗಳಲ್ಲಿ ಆಸ್ತಿ-ಪಾಸ್ತಿ ಹಾನಿ ಹಾಗೂ ಜೀವಹಾನಿ ಉಂಟಾಗುವ ಸಂಭವವಿರುವುದರಿಂದ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿರುವ ಸ್ಥಳಗಳಾದ ಕಡಲ ತೀರದಲ್ಲಿ, ನದಿಗಳಲ್ಲಿ, ಹಿನ್ನೀರಿನಲ್ಲಿ, ಬೋಟಿಂಗ್ ಹಾಗೂ ಇತರೆ ಪ್ರವಾಸೋದ್ಯಮ ಜಲಸಾಹಸ ಕ್ರೀಡೆ ಹಾಗೂ ಚಟುವಟಿಕೆಗಳನ್ನು ನಡೆಸದಂತೆ ಈ ಹಿಂದೆ ಸೂಚಿಸಲಾಗಿತ್ತು. ಆದರೂ ಸಹ ಕೆಲವು ಕಡೆಗಳಲ್ಲಿ ಇಲಾಖೆಯಿಂದ ಅನುಮೋದಿಸಿರುವಂತೆ ಖಾಸಗಿ ಸಹಭಾಗಿತ್ವದವರು ತಮ್ಮ ಜಲಸಾಹಸ ಚಟುವಟಿಕೆಗಳನ್ನು ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಜಲಸಾಹಸ ಚಟುವಟಿಕೆಗಳಾದ ಬೋಟಿಂಗ್, ಕಯಾಕಿಂಗ್, ಸರ್ಫಿಂಗ್ ಹಾಗೂ ಐಲ್ಯಾಂಡ್ಗಳಲ್ಲಿ ಒಂದು ದಿನದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೆ ಕಡ್ಡಾಯವಾಗಿ ಸ್ಥಗಿತಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ಮಂಗಳೂರು: ದನ ಅಡ್ಡ ಬಂದು ಸ್ಕೂಟರ್ ಪಲ್ಟಿ ಯುವಕ ಮೃತ್ಯು!
ಮಂಗಳೂರು: ಯುವಕನೋರ್ವ ಚಲಾಯಿಸುತ್ತಿದ್ದ ಸ್ಕೂಟರ್ ಗೆ ದನವೊಂದು ಅಡ್ಡ ಬಂದ ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬಳಿ ನಡೆದಿದೆ. ಮೃತಪಟ್ಟ ಯುವಕ ಸುರತ್ಕಲ್ ಸಮೀಪದ ಕುಳಾಯಿ ನಿವಾಸಿ ಉಜ್ವಲ್(26) ಎಂದು ಗುರುತಿಸಲಾಗಿದೆ. ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.